ಕೇವಲ 45 ಎಸೆತದಲ್ಲಿ ಶತಕ: ಮೈದಾನದಲ್ಲಿ ಅಬ್ಬರಿಸಿ ಬೊಬ್ಬರಿದ ರಿಂಕು, ಸಿಕ್ಸರ್​-ಬೌಂಡರಿಗಳ ಸುರಿಮಳೆ! Rinku Singh

Rinku Singh
Published on

Rinku Singh : ಏಷ್ಯಾ ಕಪ್ ಟೂರ್ನಿಗೂ ಮುನ್ನವೇ ಟೀಮ್ ಇಂಡಿಯಾಗೆ ಸಿಹಿ ಸುದ್ದಿಯೊಂದು ಸಿಕ್ಕಿದೆ. ತಂಡದ ಯುವ ಸ್ಫೋಟಕ ಬ್ಯಾಟ್ಸ್‌ಮನ್ ರಿಂಕು ಸಿಂಗ್ ಭರ್ಜರಿ ಫಾರ್ಮ್‌ಗೆ ಬಂದಿದ್ದಾರೆ. ಯುಪಿ ಟಿ20 ಲೀಗ್‌ನಲ್ಲಿ ರಿಂಕು ಅವರು ಸಿಕ್ಸರ್ ಮತ್ತು ಬೌಂಡರಿಗಳ ಮೂಲಕ ರನ್​ ಮಳೆ ಹರಿಸಿದ್ದಾರೆ. ಬ್ಯಾಟಿಂಗ್​ ಚಂಡ ಮಾರುತ ಸೃಷ್ಟಿಸಿದ ರಿಂಕು, ಕೇವಲ 45 ಎಸೆತಗಳಲ್ಲಿ ಶತಕ ಪೂರೈಸಿದರು. ಅದೇ ಸಮಯದಲ್ಲಿ, ಏಳು ಎಸೆತಗಳು ಬಾಕಿ ಇರುವಾಗಲೇ ತಂಡವನ್ನು ಗೆಲುವಿನ ಅಂಚಿಗೆ ಕೊಂಡೊಯ್ದರು.

ರಿಂಕು ನಾಯಕತ್ವದ ಆಟ

ಏಷ್ಯಾ ಕಪ್ ಟೂರ್ನಿಗೂ ಮುನ್ನವೇ ರಿಂಕು ಸಿಂಗ್ ಅಮೋಘ ಬ್ಯಾಟಿಂಗ್​ ಪ್ರದರ್ಶನ ನೀಡಿದ್ದಾರೆ. ಯುಪಿ ಟಿ20 ಲೀಗ್‌ನ ಭಾಗವಾಗಿ ಗುರುವಾರ (ಆಗಸ್ಟ್​ 21) ರಾತ್ರಿ ಲಖನೌದ ಏಕಾನಾ ಕ್ರೀಡಾಂಗಣದಲ್ಲಿ ಗೋರಖ್‌ಪುರ ಲಯನ್ಸ್ ಮತ್ತು ಮೀರತ್ ಮಾವರಿಕ್ಸ್ ನಡುವಿನ ಪಂದ್ಯ ನಡೆಯಿತು. ರಿಂಕು ಸಿಂಗ್ ನಾಯಕತ್ವದಲ್ಲಿ ಮೀರತ್ ಮಾವರಿಕ್ಸ್ ತಂಡ ಕಣಕ್ಕೆ ಇಳಿಯಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಗೋರಖ್‌ಪುರ ಲಯನ್ಸ್ ತಂಡ ನಿಗದಿತ 20 ಓವರ್‌ಗಳಲ್ಲಿ ಒಂಬತ್ತು ವಿಕೆಟ್‌ಗಳ ನಷ್ಟಕ್ಕೆ 168 ರನ್ ಗಳಿಸಿತು. ಆದಾಗ್ಯೂ, ರಿಂಕು ಸಿಂಗ್ ತಮ್ಮ ಬಿರುಗಾಳಿಯ ಇನ್ನಿಂಗ್ಸ್‌ನಿಂದ ಗುರಿಯನ್ನು ಸಾಧಿಸಿದರು ಮತ್ತು ತಂಡವನ್ನು ಗೆಲುವಿನತ್ತ ಮುನ್ನಡೆಸಿದರು.

ಸಿಕ್ಸರ್​, ಬೌಂಡರಿಗಳ ಸುರಿಮಳೆ

168 ರನ್​​ಗಳ ಗುರಿಯೊಂದಿಗೆ ಬ್ಯಾಟಿಂಗ್ ಆರಂಭಿಸಿದ ಮೀರತ್ ಮಾವರಿಕ್ಸ್ ತಂಡಕ್ಕೆ ಉತ್ತಮ ಆರಂಭ ದೊರೆಯಲಿಲ್ಲ. ಕೇವಲ 38 ರನ್​ಗಳಿಗೆ ನಾಲ್ಕು ವಿಕೆಟ್ ಗಳನ್ನು ಕಳೆದುಕೊಂಡಿತು. ನಂತರ ಮೈದಾನಕ್ಕೆ ಬಂದ ನಾಯಕ ರಿಂಕು ಸಿಂಗ್ ಸಿಕ್ಸರ್ ಮತ್ತು ಬೌಂಡರಿಗಳೊಂದಿಗೆ ವಿನಾಶ ಸೃಷ್ಟಿಸಿದರು. ಕೇವಲ 48 ಎಸೆತಗಳಲ್ಲಿ ಏಳು ಬೌಂಡರಿ ಮತ್ತು ಎಂಟು ಸಿಕ್ಸರ್​ಗಳ ಸಹಾಯದಿಂದ 225 ಸ್ಟ್ರೈಕ್ ರೇಟ್​ನಲ್ಲಿ 108 ರನ್ ಗಳಿಸಿ ಅಜೇಯರಾಗಿ ಉಳಿದರು. ಇದರೊಂದಿಗೆ, ಮೀರತ್ ತಂಡ 18.5 ಓವರ್​ಗಳಲ್ಲಿ ನಾಲ್ಕು ವಿಕೆಟ್ ಗಳನ್ನು ಕಳೆದುಕೊಂಡು ಗೋರಖ್ ಪುರ ಲಯನ್ಸ್ ತಂಡವನ್ನು ಆರು ವಿಕೆಟ್​ಗಳಿಂದ ಸೋಲಿಸಿತು.

ಕ್ರೀಸ್‌ಗೆ ಬಂದ ಕ್ಷಣದಿಂದಲೇ ರಿಂಕು ಸಿಂಗ್ ಅದ್ಭುತ ಆಟವಾಡಿದರು. ಮೈದಾನದ ಮೂಲೆ ಮೂಲೆಗೂ ಬೌಂಡರಿ ಮತ್ತು ಸಿಕ್ಸರ್‌ ಬಾರಿಸುವ ಮೂಲಕ ಗೋರಖ್‌ಪುರ ಲಯನ್ಸ್ ತಂಡದ ಬೌಲರ್‌ಗಳಿಗೆ ಬೆವರಿಳಿಸಿದರು. ರಿಂಕು ಅವರ ಬ್ಯಾಟಿಂಗ್​ ಬಿರುಗಾಳಿಯನ್ನು ತಡೆಯಲು ಯಾರಿಂದಲೂ ಸಾಧ್ಯವಾಗಲಿಲ್ಲ.

ಇದಕ್ಕೂ ಮೊದಲು ಬ್ಯಾಟಿಂಗ್​ ಮಾಡಿದ ಗೋರಖ್‌ಪುರ ಲಯನ್ಸ್ ತಂಡದ ನಾಯಕ ಧ್ರುವ್ ಜುರೆಲ್ 32 ಎಸೆತಗಳಲ್ಲಿ ಆರು ಬೌಂಡರಿಗಳ ಸಹಾಯದಿಂದ 38 ರನ್ ಗಳಿಸಿದರು. ಆಕಾಶ್ ದೀಪ್ ಅವರು 23 ರನ್ ಗಳಿಸಿದರು. ಈ ಇಬ್ಬರನ್ನು ಹೊರತುಪಡಿಸಿ, ಆ ತಂಡದ ಉಳಿದ ಬ್ಯಾಟ್ಸ್‌ಮನ್‌ಗಳು ಹೆಚ್ಚಿನ ಪ್ರದರ್ಶನ ನೀಡಲಿಲ್ಲ.

ಮೀರತ್ ತಂಡಕ್ಕೆ ಮೂರು ಪಂದ್ಯಗಳಲ್ಲಿ ಇದು ಎರಡನೇ ಗೆಲುವು. ಗೋರಖ್‌ಪುರ ಇದುವರೆಗೆ ಮೂರು ಪಂದ್ಯಗಳಲ್ಲಿ ಕೇವಲ ಒಂದು ಪಂದ್ಯವನ್ನು ಗೆದ್ದಿದೆ. ಒಟ್ಟಾರೆಯಾಗಿ, ಏಷ್ಯಾ ಕಪ್ ಟೂರ್ನಿಗೆ ಮುನ್ನ ರಿಂಕು ಸಿಂಗ್ ಅದ್ಭುತವಾಗಿ ಫಾರ್ಮ್‌ಗೆ ಮರಳಿರುವುದು ಭಾರತ ತಂಡಕ್ಕೆ ಒಳ್ಳೆಯ ಸುದ್ದಿಯಾಗಿದೆ. ಅಲ್ಲದೆ, ಏಷ್ಯಾ ಕಪ್​ಗೆ ರಿಂಕು ಅವರನ್ನು ಆಯ್ಕೆ ಮಾಡಿದ್ದು ಏಕೆ ಎಂದು ಪ್ರಶ್ನೆ ಮಾಡುತ್ತಿರುವವರಿಗೆ ಬ್ಯಾಟ್​ ಮೂಲಕವೇ ರಿಂಕು ಉತ್ತರ ಕೊಟ್ಟಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net