ರೈಲಿನಲ್ಲಿ ದಿಢೀರ್​ ನಾಪತ್ತೆಯಾಗಿದ್ದ ಯುವತಿ ನೇಪಾಳದಲ್ಲಿ ಪತ್ತೆ: ಆಕೆಯ ಕತೆ ಕೇಳಿ ಪೊಲೀಸರೇ ದಂಗು! Missing Woman

Missing Woman
Published on

Missing Woman : ಸಿವಿಲ್ ನ್ಯಾಯಾಧೀಶೆಯಾಗಲು ಸಿದ್ಧತೆ ನಡೆಸುತ್ತಿದ್ದ ಯುವತಿಯೊಬ್ಬಳು ರೈಲಿನಿಂದ ಹಠಾತ್ತನೆ ನಾಪತ್ತೆಯಾಗಿದ್ದ ಪ್ರಕರಣ ಸ್ಫೋಟಕ ಕತೆಯೊಂದಿಗೆ ಹೊಸ ತಿರುವು ಪಡೆದುಕೊಂಡಿದೆ. ಸುಮಾರು 10 ದಿನಗಳ ಬಳಿಕ ಆ ಯುವತಿ ಪತ್ತೆಯಾಗಿದ್ದು, ನಾಪತ್ತೆ ಹಿಂದಿನ ಅಸಲಿ ಕಾರಣವನ್ನು ಆಕೆಯೇ ಬಹಿರಂಗಪಡಿಸಿದ್ದಾಳೆ.

ವಿವರಗಳಿಗೆ ಹೋಗುವುದಾದರೆ, ಮಧ್ಯಪ್ರದೇಶದ ಅರ್ಚನಾ ತಿವಾರಿ (28) ಸಿವಿಲ್ ನ್ಯಾಯಾಧೀಶೆಯಾಗುವ ಆಸೆಯೊಂದಿಗೆ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದಾರೆ. ಆಗಸ್ಟ್ 7ರಂದು ತಮ್ಮ ಮನೆಗೆ ಹೋಗಲು ಇಂದೋರ್-ಬಿಲಾಸ್ಪುರ್ ನರ್ಮದಾ ಎಕ್ಸ್‌ಪ್ರೆಸ್ ಏರಿದರು. ಈ ವೇಳೆ ಅವರು ರೈಲಿನ ಬಿ -3 ಕೋಚ್‌ನಲ್ಲಿ ಕುಳಿತರು. ಇತ್ತ ಕುಟುಂಬ ಸದಸ್ಯರು ಅರ್ಚನಾ ಅವರು ಇಳಿಯಬೇಕಾದ ಕಟ್ನಿ ನಿಲ್ದಾಣದಲ್ಲಿ ಆಕೆಗಾಗಿ ಕಾಯುತ್ತಾ ಕುಳಿತಿದ್ದರು. ರೈಲು ಬಂದರೂ, ಅರ್ಚನಾ ಮಾತ್ರ ರೈಲಿನಿಂದ ಇಳಿಯಲಿಲ್ಲ. ಬಳಿಕ ಅವರ ಕುಟುಂಬ ಸದಸ್ಯರು ರೈಲನ್ನೇರಿ ಆಕೆಗಾಗಿ ಹುಡುಕಾಟ ನಡೆಸುವಾಗ ರೈಲು ನಿಲ್ದಾಣದಿಂದ ರೈಲು ಹೊರಟುಹೋಯಿತು.

ಬಳಿಕ ಕುಟುಂಬ ಸದಸ್ಯರು ರೈಲ್ವೆ ಅಧಿಕಾರಿಗಳನ್ನು ಸಂಪರ್ಕಿಸಿದರು. ಅಲ್ಲದೆ, ರೈಲು ಹತ್ತಿರದ ಉಮಾರಿಯಾ ನಿಲ್ದಾಣದಲ್ಲಿ ನಿಂತ ತಕ್ಷಣ, ಅಲ್ಲಿಯೂ ಕುಟುಂಬ ಸದಸ್ಯರು ಆಕೆಗಾಗಿ ಹುಡುಕಾಡಿದರು. ಆದರೆ ಆಕೆ ಮಾತ್ರ ಪತ್ತೆಯಾಗಲಿಲ್ಲ. ಆದಾಗ್ಯೂ, ಕೋಚ್‌ನಲ್ಲಿ ಅರ್ಚನಾಳ ಬ್ಯಾಗ್ ಪತ್ತೆಯಾಯಿತು. ಆತಂಕಗೊಂಡ ಕುಟುಂಬ ಸದಸ್ಯರು ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿದರು. ಆ ದಿನ ಬೆಳಗ್ಗೆ 10.15 ರ ಸುಮಾರಿಗೆ ಅರ್ಚನಾಳೊಂದಿಗೆ ಕೊನೆಯ ಬಾರಿಗೆ ಮಾತನಾಡಿದ್ದೆವು ಎಂದು ಅವರ ಕುಟುಂಬ ಸದಸ್ಯರು ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಕರೆ ಮಾಡಿದ ಸಮಯದಲ್ಲಿ ರೈಲು ಭೋಪಾಲ್ ಬಳಿ ಇತ್ತು. ಇದಾದ ನಂತರ, ಅರ್ಚನಾಳ ಫೋನ್ ಸ್ವಿಚ್ ಆಫ್ ಆಗಿದೆ ಎಂದುಮ ಕುಟುಂಬಸ್ಥರು ಹೇಳಿದ್ದರು.

ಇದಾದ ನಂತರ, ಕಟ್ನಿ ರೈಲ್ವೆ ಪೊಲೀಸ್ ಸಬ್-ಇನ್ಸ್‌ಪೆಕ್ಟರ್ ಅನಿಲ್ ಮರಾವಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಅರ್ಚನಾ ಭೋಪಾಲ್‌ನ ರಾಣಿ ಕಮಲಪತಿ ನಿಲ್ದಾಣದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿರುವುದು ಕಂಡುಬಂದಿತು. ಅಲ್ಲಿಂದ ಆಕೆ ಎಲ್ಲೂ ಕಾಣಿಸಿಕೊಂಡಿರಲಿಲ್ಲ. ಬಳಿಕ ನಾಪತ್ತೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ಆರಂಭಿಸಿದರು.

ಪತ್ತೆಯಾದ ಅರ್ಚಾನಳಿಂದ ಸ್ಫೋಟಕ ಹೇಳಿಕೆ

ಇದೀಗ ಪತ್ತೆಯಾಗಿರುವ ಅರ್ಚನಾ, ಮದುವೆಯಾಗಲು ಒತ್ತಡ ಹೇರುತ್ತಿದ್ದ ತನ್ನ ಕುಟುಂಬದಿಂದ ಪಾರಾಗಲು ನಾಪತ್ತೆ ನಾಟಕವಾಡಿದ್ದಾಗಿ ಪೊಲೀಸರು ಮುಂದೆ ತಿಳಿಸಿದ್ದಾಳೆ. ಆಗಸ್ಟ್ 5ರಂದು ನರ್ಮದಾ ಎಕ್ಸ್‌ಪ್ರೆಸ್ ಹತ್ತಿದ ನಂತರ ನಾಪತ್ತೆಯಾಗಿದ್ದ ಅರ್ಚನಾ, ಸುಮಾರು ಎರಡು ವಾರಗಳ ತೀವ್ರ ಹುಡುಕಾಟದ ನಂತರ ನೇಪಾಳದ ಕಠ್ಮಂಡುವಿನಲ್ಲಿ ಪತ್ತೆಯಾಗಿದ್ದಾಳೆ. ಈ ಬಗ್ಗೆ ಸರ್ಕಾರಿ ರೈಲ್ವೆ ಪೊಲೀಸ್ (ಜಿಆರ್‌ಪಿ) ಸೂಪರಿಂಟೆಂಡೆಂಟ್ ರಾಹುಲ್ ಕುಮಾರ್ ಲೋಧಾ ಮಾತನಾಡಿದ್ದು, ಅರ್ಚನಾ ಕುಟುಂಬದವರು ಮದುವೆಯಾಗುವಂತೆ ಆಕೆಯನ್ನು ಒತ್ತಾಯಿಸುತ್ತಿದ್ದರು. ಆದರೆ, ಅರ್ಚನಾಗೆ ಇಷ್ಟವಿರಲಿಲ್ಲ ಮತ್ತು ಬೇರೆ ಯುವಕನೊಬ್ಬನನ್ನು ಪ್ರೀತಿ ಮಾಡುತ್ತಿದ್ದಳು. ಹೀಗಾಗಿ ಇಂದೋರ್‌ನ 24 ವರ್ಷದ ಬಾಯ್​​ಫ್ರೆಂಡ್​ ಮತ್ತು ಆತನ ಚಾಲಕನ ಸಹಾಯದಿಂದ ತಪ್ಪಿಸಿಕೊಳ್ಳಲು ಬಹಳ ಎಚ್ಚರಿಕೆಯಿಂದ ಪ್ಲಾನ್​ ಮಾಡಿದ್ದರು ಎಂದು ಹೇಳಿದ್ದಾರೆ.

ನಾಪತ್ತೆಯಾಗುವ ಯೋಜನೆ ಹೇಗಿತ್ತು?

ಅಂದಹಾಗೆ, ತನಿಖಾಧಿಕಾರಿಗಳು ಹೇಳುವಂತೆ ಅರ್ಚನಾ ತಿವಾರಿ ತನ್ನ ಕಾನೂನು ಜ್ಞಾನವನ್ನು ಬಳಸಿಕೊಂಡು ನಾಪತ್ತೆ ನಾಟಕವನ್ನು ರೂಪಿಸಿದ್ದಾರೆ. ರೈಲು ಪ್ರಯಾಣದ ಸಮಯದಲ್ಲಿ ಕಣ್ಮರೆಯಾದರೆ, ಅದರ ತನಿಖೆಯ ಜವಾಬ್ದಾರಿಯನ್ನು GRP ಗೆ ವರ್ಗಾಯಿಸಲಾಗುತ್ತದೆ ಮತ್ತು ಪತ್ತೆಹಚ್ಚುವ ಸಾಧ್ಯತೆ ಕಡಿಮೆಯಾಗುತ್ತದೆ ಎಂದು ಅರ್ಚನಾ ನಂಬಿದ್ದರು. ಆಗಸ್ಟ್ 5ರ ರಾತ್ರಿ ನರ್ಮದಾ ಎಕ್ಸ್‌ಪ್ರೆಸ್‌ಗೆ ರಾಖಿಗಳು ಮತ್ತು ಕುಟುಂಬಕ್ಕಾಗಿ ಖರೀದಿ ಮಾಡಿದ ಉಡುಗೊರೆಗಳು ತುಂಬಿದ ಚೀಲದೊಂದಿಗೆ ಅರ್ಚನಾ ಹತ್ತಿದರು. ಇದಾದ ಕೆಲವು ಗಂಟೆಗಳ ನಂತರ, ನರ್ಮದಾಪುರಂ ನಿಲ್ದಾಣದಲ್ಲಿ ಅರ್ಚನಾ ನಾಪತ್ತೆಯಾದರು. ಅಲ್ಲಿ ಆಕೆಯ ಸ್ನೇಹಿತ SUV ಕಾರಿನಲ್ಲಿ ಕಾಯುತ್ತಿದ್ದ. ಈ ವೇಳೆ ಆಕೆ ಅಲ್ಲಿಯೇ ಬಟ್ಟೆ ಬದಲಾಯಿಸಿದ್ದಾರೆ ಮತ್ತು ತನಿಖಾಧಿಕಾರಿಗಳನ್ನು ದಾರಿ ತಪ್ಪಿಸಲು ಅಲ್ಲಿಯೇ ಹತ್ತಿರದ ಕಾಡಿನಲ್ಲಿ ಫೋನ್ ಮತ್ತು ಸ್ಮಾರ್ಟ್‌ವಾಚ್ ಅನ್ನು ಎಸೆದಿದ್ದಾರೆ. ಮರುದಿನ ಬೆಳಗ್ಗೆ, ಅರ್ಚನಾ ಅವರ ಕುಟುಂಬವು ಕಟ್ನಿ ಸೌತ್ ನಿಲ್ದಾಣದಲ್ಲಿ ಆಕೆಗಾಗಿ ಕಾಯುತ್ತಿತ್ತು. ಆದರೆ, ಅರ್ಚನಾ ಅವರು ಕೈಬಿಟ್ಟ ಚೀಲ ಮಾತ್ರ ರೈಲಿನಲ್ಲಿ ಕಂಡುಬಂದಿತು. ಇದರಿಂದ ಕುಟುಂಬಸ್ಥರಲ್ಲಿ ಭಯ ಉಂಟಾಯಿತು. ಕೂಡಲೇ ಅವರು ದೂರು ದಾಖಲಿಸಿದರು.

ಪ್ರಯಾಣಿಸಿದ ಮಾರ್ಗಗಳು

ಇಟಾರ್ಸಿಯಿಂದ ಹೊರಟ ಅರ್ಚನಾ ತಿವಾರಿ ಮತ್ತು ಆಕೆಯ ಬಾಯ್​ಫ್ರೆಂಡ್, ಟೋಲ್ ಬೂತ್‌ಗಳು ಮತ್ತು ಸಿಸಿಟಿವಿ ಕ್ಯಾಮೆರಾಗಳನ್ನು ತಪ್ಪಿಸಿ, ಶುಜಲ್‌ಪುರದ ಮೂಲಕ ಗ್ರಾಮೀಣ ರಸ್ತೆಗಳಲ್ಲಿ ಪ್ರಯಾಣಿಸಿದರು. ಇತ್ತ ಕಣ್ಮರೆಯ ಬಗ್ಗೆ ಮಾಧ್ಯಮ ವರದಿಗಳು ತೀವ್ರಗೊಳ್ಳುತ್ತಿದ್ದಂತೆ, ಅವರು ಮಧ್ಯಪ್ರದೇಶವನ್ನು ತೊರೆಯಲು ನಿರ್ಧರಿಸಿದರು. ಬಳಿಕ ಬುರ್ಹಾನ್‌ಪುರ, ಜೋಧ್‌ಪುರ ಮತ್ತು ದೆಹಲಿ ಮೂಲಕ ಸಾಗಿದರು. ಅರ್ಚನಾ ತಿವಾರಿ ಅಂತಿಮವಾಗಿ ಕಠ್ಮಂಡುವಿಗೆ ಹಾರಿದರು ಆದರೆ, ಆಕೆಯ ಸ್ನೇಹಿತ ಅಲ್ಲೇ ಇದ್ದ ಮತ್ತು ಆತ ತನ್ನ ಫೋನ್ ಅನ್ನು ಫ್ಲೈಟ್ ಮೋಡ್‌ನಲ್ಲಿ ಇಟ್ಟಿದ್ದ. ತಾನು ಇಂದೋರ್‌ನಲ್ಲೇ ಇರುವಂತೆ ಬಿಂಬಿಸಲು ತನ್ನ ತಂದೆಯ ಸಿಮ್ ಕಾರ್ಡ್ ಅನ್ನು ಬಳಸುತ್ತಿದ್ದ.

ಅರ್ಚನಾ ತಿವಾರಿ ಸಿಕ್ಕಿಬಿದ್ದಿದ್ದು ಹೇಗೆ?

ಸಂಬಂಧವಿಲ್ಲದ ವಂಚನೆ ಪ್ರಕರಣವೊಂದರಲ್ಲಿ ಭಾಗಿಯಾಗಿರುವ ಚಾಲಕನನ್ನು ದೆಹಲಿಯಲ್ಲಿ ಬಂಧಿಸಿದಾಗ ಈ ಪ್ರಕರಣ ಬೆಳಕಿಗೆ ಬಂದಿತು. ಪೊಲೀಸರ ವಿಚಾರಣೆಯ ಸಮಯದಲ್ಲಿ ಚಾಲಕ ಅರ್ಚನಾ ಅವರ ನಾಪತ್ತೆ ಯೋಜನೆಯ ವಿವರಗಳನ್ನು ಬಹಿರಂಗಪಡಿಸಿದನು. ಇದಾದ ನಂತರ ಪೊಲೀಸರು ಅರ್ಚನಾ ತಿವಾರಿಯ ಸ್ನೇಹಿತನನ್ನು ಪ್ರಶ್ನಿಸಿದರು. ಬಳಿಕ ಆತ, ಆಕೆಯ ಸ್ಥಳವನ್ನು ಬಹಿರಂಗಪಡಿಸಿದ. ತನಿಖಾಧಿಕಾರಿಗಳು ಕಠ್ಮಂಡುವಿನಲ್ಲಿ ಅರ್ಚನಾ ಅವರನ್ನು ಸಂಪರ್ಕಿಸಿದರು ಮತ್ತು ಸ್ವಯಂಪ್ರೇರಣೆಯಿಂದ ಮನೆಗೆ ಮರಳಲು ಅರ್ಚನಾ ಒಪ್ಪಿಕೊಂಡರು. ಅಲ್ಲಿಗೆ ಪ್ರಕರಣ ಅಂತ್ಯವಾಯಿತು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net