ಇಸ್ರೋ ನೌಕರನ ಮೇಲೆ ಸವಾರ ಪುಂಡಾಟ; ಠಾಣೆಗೆ ಕರೆತಂದು ಎಚ್ಚರಿಕೆ ಕೊಟ್ಟ ಪೊಲೀಸ್

bcp
Published on

ಬೆಂಗಳೂರು: ರಸ್ತೆಗಳಲ್ಲಿ ವಾಹನ ಚಾಲಕ/ಸವಾರರನ್ನು ಅಡ್ಡಗಟ್ಟಿ ಗೂಂಡಾವರ್ತನೆ ತೋರಿದರೇ ರೌಡಿಪಟ್ಟಿ ತೆರೆಯುವುದಾಗಿ ನಗರ ಪೊಲೀಸ್ ಆಯುಕ್ತರ ಖಡಕ್ ಎಚ್ಚರಿಕೆ ನಡುವೆಯೂ ಬೈಕ್ ಸವಾರರ ಪುಂಡಾಟ ನಿಂತಿಲ್ಲ.

ಆ.29ರಂದು ಬೆಳಗ್ಗೆ 9 ಗಂಟೆಯಲ್ಲಿ ಕಾರಿನಲ್ಲಿ ಇಸ್ರೋ ಸಂಸ್ಥೆಯ ಉದ್ಯೋಗಿ ಆಶೀಶ್ ಲಾಂಬಾ, ಕಚೇರಿಗೆ ತೆರಳುತ್ತಿದ್ದರು. ಜೀವನಭೀಮಾನಗರ ಎಚ್‌ಎಎಲ್ ಕೇಳಸೇತುವೆ ಬಳಿ ನಡುರಸ್ತೆಯಲ್ಲಿ ಬೈಕ್ ಸವಾರ ಕ್ಷುಲ್ಲಕ ಕಾರಣಕ್ಕೆ ಆಶೀಶ್ ಲಾಂಬಾ ಅಡ್ಡಗಟ್ಟಿ ಕಾಲಿನಿಂದ ಕಾರಿಗೆ ಒದ್ದು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದ. ಕಾರಿನ ಡ್ಯಾಶ್ ಬೋರ್ಡ್‌ನಲ್ಲಿ ಅಳವಡಿಸಿದ್ದ ಕ್ಯಾಮರಾದಲ್ಲಿ ಸವಾರನ ಪುಂಡಾಟ ಸೆರೆಯಾಗಿತ್ತು.

ಆಶೀಶ್ ಲಾಂಬಾ, ಎಕ್ಸ್(ಟ್ವಿಟರ್)ನಲ್ಲಿ ವಿಡಿಯೋ ಹಂಚಿಕೊಂಡು ನಗರ ಪೊಲೀಸರಿಗೂ ಟ್ಯಾಗ್ ಮಾಡಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, ದ್ವಿಚಕ್ರ ವಾಹನದ ನೋಂದಣಿ ಸಂಖ್ಯೆ ಆಧರಿಸಿ ದೂಂಡಾವರ್ತನೆ ತೋರಿದ ಸವಾರ ಇಮ್ರಾನ್ ಖಾನ್ ಎಂಬಾತನನ್ನು ವಶಕ್ಕೆ ಪಡೆದು ಠಾಣೆಗೆ ಕರೆತಂದು ವಿಚಾರಣೆಗೆ ಒಳಪಡಿಸಿದ್ದರು. ಆಶೀಶ್ ಲಾಂಬಾ ಮನವಿ ಮೇರೆಗೆ ಆರೋಪಿ ಇಮ್ರಾನ್ ವಿರುದ್ಧ ಗಂಭೀರ ಸ್ವರೂಪವಲ್ಲದ ಪ್ರಕರಣ(ಎನ್‌ಸಿಆರ್) ದಾಖಲಿಸಿ, ಮುಚ್ಚಳಿಕೆ ಬರೆಸಿಕೊಂಡು ಎಚ್ಚರಿಕೆ ನೀಡಿ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net