ಎಲ್ಲಾ ಪಂದ್ಯಗಳಲ್ಲಿಯೂ 'ಕ್ಯಾಪ್ಟನ್ ಕೂಲ್​ ಕಾಣಿಸಲ್ಲ! ಶಾಕಿಂಗ್ ಸಂಗತಿ ಬಿಚ್ಚಿಟ್ಟ ರಿಕ್ಕಿ ಪಾಂಟಿಂಗ್​ | IPL 2025

ipl 2025
Published on

ನವದೆಹಲಿ: ಇತ್ತೀಚೆಗಷ್ಟೇ ನಡೆದ ಐಪಿಎಲ್​ ರಿಟೆನ್ಶನ್ (IPL 2025)​ ಪ್ರಕ್ರಿಯೆಯಲ್ಲಿ ಅನ್​ಕ್ಯಾಪ್ಡ್​ ಪ್ಲೇಯರ್​ ಅಡಿ ಚೆನ್ನೈ ಸೂಪರ್ ಕಿಂಗ್ಸ್​ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರನ್ನು ಫ್ರಾಂಚೈಸಿ 4 ಕೋಟಿ ರೂ.ಗೆ ಉಳಿಸಿಕೊಂಡಿದೆ. ಈ ಮೂಲಕ 2025ರ ಐಪಿಎಲ್​ನಲ್ಲಿ 'ಕ್ಯಾಪ್ಟನ್ ಕೂಲ್​' ಅಭಿಮಾನಿಗಳ ಮುಂದೆ ಹಾಜರಾಗಲಿದ್ದಾರೆ ಎಂಬುದನ್ನು ಖಚಿತ ಪಡಿಸಿದೆ. ಒಂದೆಡೆ ನೆಚ್ಚಿನ ಕ್ಯಾಪ್ಟನ್​ ತಮ್ಮ 43ನೇ ವಯಸ್ಸಿನಲ್ಲಿಯೂ ತಂಡದ ಪರ ಆಡಲು ದೃಢವಾಗಿ ಸಂಕಲ್ಪ ಮಾಡಿರುವುದು ಅಭಿಮಾನಿಗಳಿಗೆ ಖುಷಿಯಾಗಿದ್ದೇ ಆದರೂ ಮಾಜಿ ಕ್ರಿಕೆಟಿಗರ ಬಲವಾದ ಅಭಿಪ್ರಾಯ, ಮಾತುಗಳು ಸದ್ಯ ಭಾರೀ ಬೇಸರ ಮೂಡಿಸಿದೆ.

ರಿಕ್ಕಿ ಪಾಂಟಿಂಗ್​ ಮಾತುಗಳಿಂದ ಬೇಸರ

ಸತತ ಐದು ಬಾರಿ ಚೆನ್ನೈ ಸೂಪರ್ ಕಿಂಗ್ಸ್​ ತಂಡವನ್ನು ಚಾಂಪಿಯನ್ಸ್​ ಪಟ್ಟಕ್ಕೆ ಕೂರಿಸಿರುವ ಎಂ.ಎಸ್​. ಧೋನಿ, ಮುಂಬರುವ 2025ರ ಆವೃತ್ತಿಯಲ್ಲಿ ಕಣಕ್ಕಿಳಿಯುತ್ತಾರಾ? ಎಂಬ ಪ್ರಶ್ನೆ ದೊಡ್ಡ ಮಟ್ಟದ ಚರ್ಚೆ ಹಾಗೂ ಗೊಂದಲಕ್ಕೆ ಕಾರಣವಾಗಿತ್ತು. ಈ ಎಲ್ಲಾ ಗೊಂದಲಗಳಿಗೂ ಇದೀಗ ರಿಟೆನ್ಶನ್​ ಪ್ರಕ್ರಿಯೆಯಲ್ಲಿ ಸಿಎಸ್​ಕೆ ಮ್ಯಾನೇಜ್​ಮೆಂಟ್​ನಿಂದ ಸ್ಪಷ್ಟ ಉತ್ತರ ಸಿಕ್ಕಿದೆ. ಅಭಿಮಾನಿಗಳ ಮುಂದೆ ಘರ್ಜಿಸಲು ಸಜ್ಜಾಗಿರುವ ಮಹೇಂದ್ರ ಸಿಂಗ್​ ಧೋನಿ ಅವರನ್ನು ಮೈದಾನದಲ್ಲಿ ಮತ್ತೊಂದು ವರ್ಷ ಕಣ್ತುಂಬಿಕೊಳ್ಳಲು ಕಾತರದಿಂದ, ಕುತೂಹಲದಿಂದ ಕಾಯುತ್ತಿರುವ ಕ್ರಿಕೆಟ್ ಅಭಿಮಾನಿಗಳಿಗೆ ಇದೀಗ ಆಸ್ಪ್ರೇಲಿಯಾ ತಂಡದ ಮಾಜಿ ಕ್ಯಾಪ್ಟನ್, ಪ್ರಸ್ತುತ ಪಂಜಾಬ್ ಕಿಂಗ್ಸ್​ನ ಹೆಡ್​ ಕೋಚ್​ ಆಗಿರುವ ರಿಕ್ಕಿ ಪಾಂಟಿಂಗ್​ ಮಾತುಗಳಿಂದ ಬೇಸರ ಉಂಟಾಗಿದೆ.

ಮೆಂಟರ್​ ಆಗಿ ಕಾರ್ಯ

"ಕಳೆದ ಎರಡು ಸೀಸನ್​ಗಳಲ್ಲಿ ಧೋನಿ ಕೆಟ್ಟ ಆವೃತ್ತಿಗಳನ್ನು ಎದುರಿಸಿದ್ದಾರೆ. ಆದರೂ ಸಹ ಪುಟಿದೇಳುವ ರೀತಿಯನ್ನು ಮಾತ್ರ ಅವರು ಎಂದಿಗೂ ಬಿಟ್ಟಿಲ್ಲ. ಮೊದಲು ನಾಯಕತ್ವವನ್ನು ಜಡೇಜಾಗೆ ವಹಿಸಿದ್ದ ಧೋನಿ, ನಂತರದಲ್ಲಿ ಮಧ್ಯಂತರದಲ್ಲಿ ಕ್ಯಾಪ್ಟನ್ಸಿ ಹೊತ್ತು ತಂಡವನ್ನು ಮುನ್ನಡೆಸಿದ್ದರು. ಅದಾದ ನಂತರ ಮುಂದಿನ ಸೀಸನ್​ನಲ್ಲಿ ರುತುರಾಜ್​ಗೆ ನಾಯಕತ್ವ ವಹಿಸಿಕೊಟ್ಟ ಅವರು, ತಂಡದ ಜವಾಬ್ದಾರಿಯನ್ನು ಯುವ ಆಟಗಾರರಿಗೆ ಬಿಟ್ಟು, ತಾವು ಮೆಂಟರ್​ ರೀತಿ ಕಾರ್ಯನಿರ್ವಹಿಸಿದರು. ಇದು ಈ ಬಾರಿಯೂ ನಡೆಯಲಿದ್ದು, ಪೂರ ಸೀಸನ್​ ಧೋನಿ ತಂಡದ ಪರ ಎಲ್ಲಾ ಮ್ಯಾಚ್​ಗಳನ್ನು ಆಡುವುದಿಲ್ಲ" ಎಂದಿದ್ದಾರೆ.

ನಾಯಕತ್ವ ಬಹಳ ಮುಖ್ಯ

"ಇಲ್ಲಿ ನಾವು ಅವರ ಇಂಜುರಿಯನ್ನು ಮರೆಯಬಾರದು. ಕಳೆದ ಸೀಸನ್​ಗಳಿಂದ ಧೋನಿ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈಗ ಅವರು ಕೊಂಚ ನಿವಾರಿಸಿಕೊಂಡಿರಬಹುದು. ಆದರೆ, ಮುಂಬರುವ ಆವೃತ್ತಿಯಲ್ಲಿ ಒಂದೆರೆಡು ಪಂದ್ಯಗಳಿಂದ ಹೊರಗುಳಿಯುವ ಸಾಧ್ಯತೆಗಳು ಹೆಚ್ಚಿವೆ. ಅವರು ಪೂರ ಸೀಸನ್​ನಲ್ಲಿ ಕಾಣಿಸಿಕೊಳ್ಳುವುದಿಲ್ಲ. ಮೆಂಟರ್​ ಆಗಿ ತಂಡವನ್ನು ಮುನ್ನಡೆಸುತ್ತಾರೆ. ಗೆಲುವಿನ ವಿಷಯದಲ್ಲಿ ಸಿಎಸ್​ಕೆಗೆ ಅವರ ನಾಯಕತ್ವ ಬಹಳ ಮುಖ್ಯವಾಗಿದೆ. ಅವರು ಮೈದಾನದಲ್ಲಿ ಆಡಲಿ ಅಥವಾ ಡ್ರೆಸ್ಸಿಂಗ್ ರೂಮ್​ನಲ್ಲಿ ಕುಳಿತು ಹೇಳಲಿ, ಒಟ್ಟಾರೆ ಅವರ ಇರುವಿಕೆ ಫ್ರಾಂಚೈಸಿಗೆ ದೊಡ್ಡ ಶಕ್ತಿಯಾಗಿದೆ" ಎಂದು ಹೇಳಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net