

ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಬಾಲಿವುಡ್ನ ಘಟಾನುಘಟಿಗಳ ವಿಚಾರಣೆ ಒಂದೆಡೆ ನಡೆದರೆ, ಮಂಗಳವಾರವಷ್ಟೇ ಸುಶಾಂತ್ ಪ್ರೇಯಸಿ ರಿಯಾ ಚಕ್ರವರ್ತಿ ವಿರುದ್ಧ ಪಾಟ್ನಾದಲ್ಲಿ ಎಫ್ಐಆರ್ ದಾಖಲಾಗಿತ್ತು. ಇದೀಗ ಅದೇ ರಿಯಾಗಾಗಿ ಹುಡುಕಾಟ ನಡೆದಿದೆ.
ಹೌದು, ಪಾಟ್ನಾದ ರಾಜೀವ್ ನಗರ ಪೊಲೀಸ್ ಠಾಣೆಯಲ್ಲಿ ಸುಶಾಂತ್ ತಂದೆ ಕೆಕೆ ಸಿಂಗ್, ರಿಯಾ ವಿರುದ್ಧ ದೂರು ನೀಡುತ್ತಿದ್ದಂತೆ, ಇತ್ತ ರಿಯಾ ಸಹ ಕ್ರಿಮಿನಲ್ ಲಾಯರ್ ಮೊರೆ ಹೋಗಿದ್ದಾರೆ. ಖ್ಯಾತ ವಕೀಲ ಸತೀಶ್ ಮನೆಶಿಂಧೆ ಅವರನ್ನು ನೇಮಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ ಪಾಟ್ನಾದಲ್ಲಿನ ಪ್ರಕರಣವನ್ನು ಮುಂಬೈಗೆ ವರ್ಗಾವಣೆ ಮಾಡುವಂತೆ ಕೋರಿ ಸುಪ್ರೀಂ ಕೋರ್ಟ್ಗೆ ಅರ್ಜಿಯನ್ನೂ ಸಲ್ಲಿಸಿದ್ದಾರೆ.
ಇನ್ನು ಈ ನಡುವೆ ರಿಯಾ ಚಕ್ರವರ್ತಿ ಅವರ ನಿವಾಸದಿಂದ ಕಾಣೆಯಾಗಿದ್ದಾರೆ. ಯಾರ ಕಣ್ಣಿಗೆ ಬಿದ್ದಿಲ್ಲ ಎಂಬ ಸುದ್ದಿ ಹರಿದಾಡುತ್ತಿದ್ದಂತೆ. ಮುಂಬೈ ಪೊಲೀಸ್ ರಿಯಾ ಅವರಿಗಾಗಿ ಹುಡುಕಾಟ ನಡೆಸಿದೆ. ಇತ್ತ ಪಾಟ್ನಾದ ನಾಲ್ವರು ಪೊಲೀಸರ ತಂಡ ಮುಂಬೈಗೆ ಆಗಮಿಸಿದ್ದು, ಕೆಕೆ ಸಿಂಗ್ ನೀಡಿದ ದೂರಿನನ್ವಯ ವಿಚಾರಣೆಗೆ ಮುಂದಾಗಿದ್ದಾರೆ. ಈ ವೇಳೆ ರಿಯಾ ಮನೆಗೂ ಭೇಟಿ ನೀಡಿದ್ದಾರೆ. ಆದರೆ, ರಿಯಾ ಮಾತ್ರ ಮನೆಯಲ್ಲೂ ಕಾಣದೆ, ವಿಚಾರಣೆಗೆ ಲಭ್ಯರಾಗಲಿಲ್ಲ ಎಂದು ಮುಂಬೈ ಪೊಲೀಸ್ ಇಲಾಖೆ ತಿಳಿಸಿದೆ. (ಏಜೆನ್ಸೀಸ್)