

ಹರೀಶ್ ಬೇಲೂರು ಬೆಂಗಳೂರು
‘ಕಾವೇರಿ 2.0’ ಸ್‌ಟಾವೇರ್‌ಗೆ ಪದೇಪದೆ ಸರ್ವರ್ ಡೌನ್, ಮೂಲಸೌಕರ್ಯ ಕೊರತೆ ಸೇರಿ ಇತರೆ ಆಂತರಿಕ ಸಮಸ್ಯೆಗಳಿಂದ ಬಳಲಿ ಬೆಂಡಾಗಿರುವ ನೋಂದಣಿ ಮತ್ತು ಮುದ್ರಾಂಕ ಇಲಾಖೆ, 14 ಹಿರಿಯ ಸಬ್ ರಿಜಿಸ್ಟ್ರಾರ್‌ಗಳಿಗೆ ಆರೇಳು ತಿಂಗಳಿಂದ ಲಾಗಿನ್ ಐಡಿ ನೀಡದೆ ಸತಾಯಿಸುತ್ತಿದೆ.
ಲಾಗಿನ್ ಐಡಿ ಸಿಗದ ಪರಿಣಾಮ ಅಧಿಕಾರಿಗಳು, ಅನಿವಾರ್ಯವಾಗಿ ಯಾವುದೇ ಕೆಲಸ ಇಲ್ಲದೆ ಪ್ರತಿನಿತ್ಯ ಕಚೇರಿಯಲ್ಲಿ ಕುಳಿತು ಮನೆಗೆ ತೆರಳುವಂತಾಗಿದೆ. ಅಲ್ಲದೆ, ಇವರ ಸೇವೆ ಲಭ್ಯವಿಲ್ಲದ ಕಾರಣ ಸಾರ್ವಜನಿಕರಿಗೂ ತೊಂದರೆಯಾಗುತ್ತಿದೆ. ಸರ್ಕಾರದ ಬೊಕ್ಕಸಕ್ಕೆ ಹೆಚ್ಚು ಆದಾಯ ತರುವಲ್ಲಿ ಇಲಾಖೆ 3ನೇ ಸ್ಥಾನದಲ್ಲಿದೆ. ರಾಜ್ಯದ 252 ಉಪನೋಂದಣಿ ಕಚೇರಿಗಳಲ್ಲಿ ಪ್ರತಿನಿತ್ಯ ಆಸ್ತಿ ನೋಂದಣಿಯಿಂದ ಕನಿಷ್ಠ 40 ಕೋಟಿ ರೂ.ನಿಂದ ಗರಿಷ್ಠ 90 ಕೋಟಿ ರೂ.ವರೆಗೂ ಸರ್ಕಾರಕ್ಕೆ ರಾಜಸ್ವ ಸಂಗ್ರಹವಾಗುತ್ತಿದೆ. ಇಲಾಖೆಯ ಹಲವು ಹುದ್ದೆಗಳಲ್ಲಿ ಸಿಬ್ಬಂದಿ ಕೊರತೆ ಕಾಡುತ್ತಿದೆ. ಹೀಗಿರುವಾಗ, ಇರುವ ಅಧಿಕಾರಿಗಳನ್ನು ಸಮರ್ಥವಾಗಿ ಬಳಸಿಕೊಳ್ಳುವುದು ಸರ್ಕಾರದ ಕರ್ತವ್ಯವೂ ಹೌದು. ಆದರೆ, 7 ತಿಂಗಳು ಸಮೀಪಿಸುತ್ತಿದ್ದರೂ ತಾಂತ್ರಿಕ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಇಲಾಖೆ ವಿಫಲವಾಗಿದೆ.
3 ಬಾರಿ ಹೈಕೋರ್ಟ್ ಆದೇಶ
ಬೆಂಗಳೂರು ಸುತ್ತಮುತ್ತ ಇಲಾಖೆ ಕಚೇರಿಗಳಲ್ಲಿ ಕಳೆದ 8 ವರ್ಷಗಳ ಅವಧಿಯಲ್ಲಿ 5 ವರ್ಷ ಉಪ ನೋಂದಣಾಧಿಕಾರಿ, ಹಿರಿಯ ಉಪ ನೋಂದಣಾಧಿಕಾರಿ,ಕೇಂದ್ರ ಕಚೇರಿ ಸಹಾಯಕ, ಪ್ರಥಮ ದರ್ಜೆ ಸಹಾಯಕರನ್ನು ಕೌನ್ಸೆಲಿಂಗ್ ಮೂಲಕ ವರ್ಗಾವಣೆ ಮಾಡಲು ಸರ್ಕಾರ, 2024ರ ಜುಲೈನಲ್ಲಿ ಕ್ರಮ ತೆಗೆದುಕೊಂಡಿತ್ತು. ಇದೊಂದು ಒಳ್ಳೆಯ ನಿರ್ಧಾರವಾಗಿತ್ತು.ಆದರೆ, ಕೌನ್ಸೆಲಿಂಗ್ ಮಾಡುವ ಮುನ್ನ ವರ್ಗಾವಣೆಗೆ ಸಂಬಂಧಪಟ್ಟಂತೆ ನಿಯಮಾನುಸಾರ ಮಾರ್ಗಸೂಚಿ ರಚಿಸದ ಸರ್ಕಾರ, ಸಣ್ಣ ತಾಲೂಕುಗಳಲ್ಲಿರುವ ಸಬ್‌ರಿಜಿಸ್ಟ್ರಾರ್‌ಗಳ ಕಚೇರಿಗಳಲ್ಲಿ ಹಿರಿಯ ಸಬ್ ರಿಜಿಸ್ಟ್ರಾರ್‌ಗಳನ್ನು ವರ್ಗಾಯಿಸಿ, ಅಲ್ಲಿ ಕಾರ್ಯನಿರ್ವಹಿಸುತ್ತಿರುವ ಕಿರಿಯ ಅಧಿಕಾರಿಗಳನ್ನು ಬೆಂಗಳೂರು ಸುತ್ತಮುತ್ತ ಜಿಲ್ಲೆಗಳ ಕಚೇರಿಗಳಿಗೆ ವರ್ಗಾಯಿಸಲಾಗಿತ್ತು. ಕೌನ್ಸೆಲಿಂಗ್‌ನಲ್ಲಿರುವ ಲೋಪದೋಷ ಅಂಶ ಪ್ರಶ್ನಿಸಿ ಅಧಿಕಾರಿಗಳು, ಕೆಎಟಿ ಮೆಟ್ಟಿಲೇರಿದ್ದರು. ಅರ್ಜಿ ವಿಚಾರಣೆ ನಡೆಸಿದ ಕೆಎಟಿ, ವರ್ಗಾವಣೆ ಆದೇಶವನ್ನು ಒಪ್ಪಿ ಸರ್ಕಾರದ ಪರವಾಗಿ ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿದ ಅಧಿಕಾರಿಗಳು ಹೈಕೋರ್ಟ್ ಮೊರೆ ಹೋಗಿದ್ದರು. ಕಳೆದ ಡಿ.16ರಂದು ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್ ದ್ವಿಸದಸ್ಯ ನ್ಯಾಯಪೀಠ, ಅರ್ಜಿದಾರರಿಗೆ ಹಿಂದಿನ ಸಬ್ ರಿಜಿಸ್ಟ್ರಾರ್‌ಗಳ ಕಚೇರಿಗಳಲ್ಲಿ ಲಾಗಿನ್ ರುಜುವಾತು ನೀಡಬೇಕು. ಮೊದಲಿನಂತೆ ಕೆಲಸ ಮಾಡಲು ಅವಕಾಶ ನೀಡಬೇಕೆಂದು ಹೈಕೋರ್ಟ್ ಆದೇಶ ಹೊರಡಿಸಿತ್ತು. ಈ ಕುರಿತು ಡಿ.31 ಮತ್ತು ೆ.18ರಂದ ಸಹ ಅಧಿಕಾರಿಗಳ ಪರವಾಗಿ ಹೈಕೋರ್ಟ್ ಆದೇಶ ಹೊರಡಿಸಿತ್ತು. ಆದರೆ, ಹೈಕೋರ್ಟ್ ಆದೇಶ ಪ್ರಶ್ನಿಸಿ, ಇಲಾಖೆ, ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಅರ್ಜಿ ವಿಚಾರಣೆ ನಡೆಸಿರುವ ಸುಪ್ರೀಂಕೋರ್ಟ್, ಹೈಕೋರ್ಟ್ ಆದೇಶಕ್ಕೆ ತಡೆ ನೀಡಿದ್ದು, ವಿಚಾರಣೆ ಸದ್ಯ ಮುಂದುವರಿದಿದೆ. ಈ ಸಮಸ್ಯೆಯಿಂದ 14 ಹಿರಿಯ ಸಬ್ ರಿಜಿಸ್ಟ್ರಾರ್‌ಗಳಿಗೆ ಲಾಗಿನ್ ಐಡಿ ಸಿಕ್ಕಿಲ್ಲ.
ಅನುಭವ ಇಲ್ಲದ ಅಧಿಕಾರಿಗಳಿಗೆ ಹೊಣೆ
ಕೌನ್ಸೆಲಿಂಗ್‌ನಲ್ಲಿ ಸೇವೆಯ ಹಿರಿತನ ಆಧಾರದ ಮೇರೆಗೆ ಸಬ್ ರಿಜಿಸ್ಟ್ರಾರ್‌ಗಳನ್ನು ವರ್ಗಾವಣೆ ಮಾಡಬೇಕಿತ್ತು. ಆದರೆ, ಹಿರಿಯರ ಬದಲು ಕಿರಿಯ ಅಧಿಕಾರಿಗಳನ್ನು ಪ್ರಮುಖ ಹುದ್ದೆಗಳನ್ನು ನೀಡಲಾಗಿದೆ. ಇದರಿಂದಾಗಿ ಸಾಕಷ್ಟು ಸಬ್ ರಿಜಿಸ್ಟ್ರಾರ್‌ಗಳಲ್ಲಿ ಕಿರಿಯ ಅಥವಾ ಅನುಭವ ಇಲ್ಲದ ಅಧಿಕಾರಿಗಳನ್ನು ಕುಳ್ಳಿರಿಸಿರುವ ಪರಿಣಾಮ, ಉಪ ನೋಂದಣಿ ಕಚೇರಿಗಳಲ್ಲಿ ಇಸಿ (ಋಣಭಾರ ಪ್ರಮಾಣ ಪತ್ರ), ಸಿಸಿ (ದೃಢೀಕರಣ ಪತ್ರ), ಆಸ್ತಿ, ಸ್ಥಿರಾಸ್ತಿ, ಕರಾರು ಪತ್ರ, ಸಾಲ ತಿರುವಳಿ, ಸಾಗುವಳಿ ಜಮೀನು ಒಪ್ಪಂದ ನೋಂದಣಿ ಕಾರ್ಯಗಳು ನಿಧಾನವಾಗಿ ಸಾಗುತ್ತಿದ್ದು, ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ.
ಕಚೇರಿಗಳ ಕಡೆಗಣನೆ
ಉಪ ನೋಂದಣಿ ಕಚೇರಿಗಳಿಗೆ ಬೇಕಾದ ಕಂಪ್ಯೂಟರ್, ವಿದ್ಯುತ್, ಇಂಟರ್‌ನೆಟ್, ಜನರೇಟರ್, ಯುಪಿಎಸ್, ಕಾಗದ, ಟೋನರ್ ಹಾಗೂ ಪ್ರಿಂಟರ್‌ಗಳನ್ನು ಒದಗಿಸಿಲ್ಲ. ಕೆಲ ಉಪನೋಂದಣಿ ಕಚೇರಿಗಳಲ್ಲಿ ಮೂಲಸೌಕರ್ಯ ಕೊರತೆಯಿಂದ ಸಮಪರ್ಕವಾಗಿ ನೋಂದಣಿ ಪ್ರಕ್ರಿಯೆಗಳು ನಡೆಯುತ್ತಿಲ್ಲ. ಸರ್ವರ್ ಸಮಸ್ಯೆಗಳನ್ನು ಬಗೆಹರಿಸಲು ತಜ್ಞರ ಕೊರತೆ ಕಾಡುತ್ತಿದೆ. ಎಲ್ಲ ಸ್‌ಟಾವೇರ್ ಕಾರ್ಯಗಳನ್ನು ಬೆಂಗಳೂರಿನಲ್ಲಿ ಮಾತ್ರ ದುರಸ್ತಿ ಕಾರ್ಯ ಮಾಡಲಾಗುತ್ತಿದೆ. ಆದರೆ, ವಿಭಾಗಮಟ್ಟದಲ್ಲಿ ಈ ಸೌಲಭ್ಯವಿಲ್ಲದಂತಾಗಿದೆ.