ಬೆಂಗಳೂರು:ರೈತರ ಆದಾಯ ಭದ್ರಪಡಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಯೋಜನೆಗೆ ರಾಜ್ಯದಲ್ಲಿ ಗ್ರಹಣ ಹಿಡಿದಿದೆ.
ರಾಜ್ಯದ 6.72 ಲಕ್ಷ ಹೆಕ್ಟೇರ್ ಪ್ರದೇಶಗಳಲ್ಲಿ ರಾಗಿ ಬೆಳೆಯಲಾಗುತ್ತಿದೆ. ತುಮಕೂರು, ರಾಮನಗರ, ಮಂಡ್ಯ, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಹಾಸನ, ಮೈಸೂರು, ಚಿತ್ರದುರ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಗಳ ರೈತರು ಹಿಂಗಾರಿನಲ್ಲಿ ಹೆಚ್ಚು ರಾಗಿ ಬೆಳೆಯುತ್ತಾರೆ. ದಕ್ಷಿಣ ಕರ್ನಾಟಕ ಭಾಗದ ಜಿಲ್ಲೆಗಳ ರೈತರು, ಮುಂಗಾರು ಮತ್ತು ಹಿಂಗಾರಿನಲ್ಲಿ ಭತ್ತ ಬೆಳೆದರೆ, ಉತ್ತರ ಕರ್ನಾಟಕ ಭಾಗದ ರೈತರು ಬಿಳಿ ಜೋಳ ಬೆಳೆಯುತ್ತಾರೆ. ಯೋಜನೆಯಡಿ ಪ್ರತಿ ವರ್ಷ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಘೋಷಿಸಿ ರಾಗಿ, ಭತ್ತ, ಗೋಧಿ ಸೇರಿ 23ಕ್ಕೂ ಅಧಿಕ ಆಹಾರ ಧಾನ್ಯಗಳನ್ನು ಖರೀದಿ ಕೇಂದ್ರಗಳಲ್ಲಿ ಖರೀದಿಸುವುದು ನಿಯಮ. ಆದರೆ 2024-25ರಲ್ಲಿ ಇಲಾಖೆ 8 ಲಕ್ಷ ಮೆ.ಟನ್ ರಾಗಿ ಪೈಕಿ 3.44 ಲಕ್ಷ ಮೆ.ಟನ್, 2 ಲಕ್ಷ ಮೆ.ಟನ್ ಜೋಳ ಪೈಕಿ 1.70 ಲಕ್ಷ ಮೆ.ಟನ್ ಹಾಗೂ 5 ಲಕ್ಷ ಮೆ.ಟನ್ ಭತ್ತ ಪೈಕಿ ಬರೀ 510 ಮೆ.ಟನ್ ಖರೀದಿಸಿದೆ. ಇದರಿಂದ ನಿಗದಿಪಡಿಸಿದ್ದ ಆಹಾರ ಧಾನ್ಯಗಳನ್ನು ಖರೀದಿಸಲು ಅಧಿಕಾರಿಗಳು ವಿಲರಾಗಿದ್ದಾರೆ. ಅಲ್ಲದೆ, ಪ್ರಸಕ್ತ ಸಾಲಿನಲ್ಲಿ ಆಹಾರ ಧಾನ್ಯ ಖರೀದಿ ಪ್ರಕ್ರಿಯೆ ನಡೆದಿಲ್ಲ.
ಆರಂಭವಾಗುತ್ತಿಲ್ಲ ಕೇಂದ್ರಗಳು: ಜಿಲ್ಲಾಧಿಕಾರಿಗಳ ನೇತೃತ್ವದ ಜಾಗೃತಿ ದಳದ ಸಭೆಯಲ್ಲಿ ಖರೀದಿ ಕೇಂದ್ರಗಳು ಹಾಗೂ ವೇಳಾಪಟ್ಟಿ ಸಿದ್ಧಪಡಿಸಿ ರೈತರ ನೋಂದಣಿಗೆ ಆದೇಶಿಸಲಾಗುತ್ತದೆ. ನಂತರ, ಆಹಾರ ಧಾನ್ಯಗಳ ಖರೀದಿಸುವ ಪ್ರಕ್ರಿಯೆ ಶುರುವಾಗುತ್ತದೆ. ಪ್ರತಿ ಎಕರೆಗೆ 10 ಕ್ವಿಂಟಾಲ್‌ನಂತೆ 50 ಕ್ವಿಂಟಾಲ್‌ವರೆಗೆ ಖರೀದಿಸಲಾಗುತ್ತದೆ. ಆದರೆ, ಸೂಕ್ತ ಸಂದರ್ಭದಲ್ಲಿ ಖರೀದಿ ಕೇಂದ್ರಗಳು ಆರಂಭವಾಗುತ್ತಿಲ್ಲ. ಬೆಲೆ ಕುಸಿತ ಸಂದರ್ಭದಲ್ಲಿ ಖರೀದಿ ಕೇಂದ್ರ ಆರಂಭಿಸಲು ಮೀನಮೇಷ ಎಣಿಸಲಾಗುತ್ತಿದೆ.
ತೂಕದಲ್ಲೂ ವಂಚನೆ: ಧಾನ್ಯ ಮಾರಾಟ ಮಾಡುವ ಸಂದರ್ಭದಲ್ಲಿ ರೈತರಿಗೆ ಪ್ರತಿ ಕ್ವಿಂಟಾಲ್‌ನಲ್ಲಿ 2-5 ಕೆಜಿಯನ್ನು ತೂಕದಲ್ಲಿ ಮೋಸ ಮಾಡುತ್ತಿದ್ದಾರೆ. ಎಲೆಕ್ಟ್ರಾನಿಕ್ ತೂಕದ ಯಂತ್ರ ಸೇರಿ ಇತರ ತೂಕದ ಯಂತ್ರಗಳಲ್ಲಿ ವರ್ತಕರು ರೈತರಿಗೆ ಮೋಸ ಮಾಡುತ್ತಿದ್ದಾರೆ. ಅಲ್ಲದೆ ಭತ್ತ, ರಾಗಿ, ಬಿಳಿ ಜೋಳ ಖರೀದಿ, ದಾಸ್ತಾನು ಮಾಡಿರುವುದು, ಗುಣಮಟ್ಟ, ಸಾಗಣೆ ಮತ್ತು ಖರೀದಿಯಲ್ಲಿ ಸಾಕಷ್ಟು ಅಕ್ರಮ ನಡೆಯುತ್ತಿವೆ.
ಖರೀದಿ ಪ್ರಕ್ರಿಯೆ ಎಫ್ಸಿಐಗೆ ಒಪ್ಪಿಸಿ:
ಸಮರ್ಪಕವಾಗಿ ಆಹಾರ ಧಾನ್ಯ ಖರೀದಿಸಲು ರಾಜ್ಯ ಸರ್ಕಾರ ವಿಫಲವಾಗಿದೆ. ಹಾಗಾಗಿ, ಯೋಜನೆಯಡಿ ಆಹಾರ ಧಾನ್ಯಗಳನ್ನು ಖರೀದಿಸಲು ಸರ್ಕಾರ ಭಾರತೀಯ ಆಹಾರ ನಿಗಮ (ಎಫ್ಸಿಐ)ಕ್ಕೆ ಅನುಮತಿ ನೀಡಬೇಕು. ಈ ಬಗ್ಗೆ ಸಚಿವರಿಗೆ ಪತ್ರ ಬರೆಯಲಾಗುವುದು ಎಂದು ಎಫ್ಸಿಐ ಕರ್ನಾಟಕ ಘಟಕದ ಸಮಿತಿ ಸದಸ್ಯ ಮತ್ತು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 2012ಕ್ಕಿಂತ ಮುನ್ನ ಎಫ್ಸಿಐಯಿಂದ ಖರೀದಿಸಲಾಗುತ್ತಿತ್ತು. 2013ರಿಂದ ರಾಜ್ಯದ ಆಹಾರ ಇಲಾಖೆ, ಮಾರುಕಟ್ಟೆ ಒಕ್ಕೂಟಗಳು ಹಾಗೂ ಕೃಷಿ ಮಾರಾಟ ಇಲಾಖೆ, ವಿವಿಧ ಆಹಾರ ಧಾನ್ಯಗಳನ್ನು ಖರೀದಿಸುತ್ತಿವೆ. ಖರೀದಿ ಪ್ರಕ್ರಿಯೆಯಲ್ಲಿ ಇಲಾಖೆಗಳ ಅಧಿಕಾರಿಗಳು ಹಿಂದುಳಿದಿದ್ದಾರೆ. ಎಂಎಸ್‌ಪಿ ಖರೀದಿಗೆ ಆಯುಕ್ತರನ್ನು ನಿಯೋಜಿಸಬೇಕು. ಪ್ರತಿ ವರ್ಷ ಎಷ್ಟು ಆಹಾರ ಧಾನ್ಯಗಳನ್ನು ಉತ್ಪಾದಿಸಲಾಗುತ್ತದೆ ಎಂಬುದರ ಬಗ್ಗೆ ಕೃಷಿ ಇಲಾಖೆ ಮಾಹಿತಿ ಪಡೆಯಬೇಕು. ಮಾರುಕಟ್ಟೆಗೆ ಆಹಾರ ಧಾನ್ಯಗಳನ್ನು ತರುವ ಮುನ್ನ ಮುಂಚಿತವಾಗಿ ಖರೀದಿ ಕೇಂದ್ರಗಳನ್ನು ತೆರೆಯಬೇಕು. ಇದರಿಂದ ರೈತರಿಗೆ ಅನುಕೂಲವಾಗುತ್ತದೆ ಎಂದು ಹೇಳಿದರು.
ರಾಜ್ಯ ಸರ್ಕಾರ ಕಮಿಷನ್ ಆಸೆಗಾಗಿ ‘ಅನ್ನಭಾಗ್ಯ’ಯೋಜನೆಯಡಿ ಅಕ್ಕಿ ಬದಲು ಕಾರ್ಡ್‌ದಾರರಿಗೆ ‘ಇಂದಿರಾ’ ಕಿಟ್ ನೀಡಲು ಹೊರಟಿರುವುದು ಸರಿಯಲ್ಲ. ಪ್ರತಿ ತಿಂಗಳು ಕಡಿಮೆ ದರದಲ್ಲಿ ಸರ್ಕಾರಕ್ಕೆ ಅಕ್ಕಿ ಒದಗಿಸಲಾಗುತ್ತಿದೆ. 56 ಲಕ್ಷ ಮೆ.ಟನ್ ಆಹಾರ ಧಾನ್ಯ ದಾಸ್ತಾನು ಸಾಮರ್ಥ್ಯವನ್ನು ಎಫ್ಸಿಐ ಹೊಂದಿದೆ. ಪ್ರಸ್ತುತ 45 ಲಕ್ಷ ಮೆ.ಟನ್ ದಾಸ್ತಾನು ಮಾಡಲಾಗಿದೆ.
| ಈರಣ್ಣ ಕಡಾಡಿ, ರಾಜ್ಯಸಭಾ ಸದಸ್ಯ.
ಕರಾವಳಿ, ಮಲೆನಾಡಲ್ಲಿ ಮಳೆ ಬಿರುಸು:ನಾಳೆಯಿಂದ 8 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್
M