ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಸಮಾಜದಲ್ಲಿ ನೈತಿಕ ಮೌಲ್ಯಗಳು ಕಣ್ಮರೆಯಾಗುತ್ತಿದ್ದು, ಅದರಲ್ಲೂ ಮುಖ್ಯವಾಗಿ ಯುವಜನತೆ ನೈತಿಕತೆ ಕಳೆದುಕೊಳ್ಳುತ್ತಿರುವುದು ಅಪಾಯಕಾರಿ ಎಂದು ನಿವೃತ್ತ ಲೋಕಾಯುಕ್ತ ಎನ್.ಸಂತೋಷ ಹೆಗ್ಡೆ ಕಳವಳ ವ್ಯಕ್ತಪಡಿಸಿದ್ದಾರೆ.
ಪರಿಮಳ ಗೆಳೆಯರ ಬಳಗದ 49ನೇ ವಾರ್ಷಿಕೋತ್ಸವ ಮತ್ತು ಹರಿದಾಸ ಸಾಹಿತ್ಯ ಸಂಶೋಧಕ ಡಾ. ಎಸ್. ಜಯಸಿಂಹ ಅವರ ‘ಶ್ರೀಧೀರೇಂದ್ರ ದರ್ಶನ’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ನೈತಿಕತೆ ಮತ್ತು ಪ್ರಾಮಾಣಿಕತೆ ಎರಡೂ ಒಂದೇ ನಾಣ್ಯದ ಎರಡು ಮುಖಗಳು, ಇವೆರಡರ ಅಭಾವ ಮನುಷ್ಯನನ್ನು ಪಶುವಿಗಿಂತಲೂ ಹೀನವಾಗಿ ವರ್ತಿಸುವಂತೆ ಪ್ರೇರೇಪಿಸುತ್ತವೆ. ಭ್ರಷ್ಟಾಚಾರವಿಲ್ಲದ ಯಾವುದೇ ಇಲಾಖೆಯನ್ನು ಮತ್ತು ಅಧಿಕಾರಿಯನ್ನು ಈ ಸಂದರ್ಭದಲ್ಲೇ ನೋಡುವುದೇ ಅಸಾಧ್ಯವಾಗಿದೆ. ಜೈಲಿನಿಂದ ಬಂದವರನ್ನು ಹೀರೋಗಳಂತೆ ಸ್ವಾಗತಿಸಿ ಅವರನ್ನು ವೈಭವೀಕರಿಸುವ ಸಮಾಜದಲ್ಲಿ ನಾವಿಂದು ಬದುಕಿದ್ದೇವೆ. ಮನಸ್ಸಾಕ್ಷಿ ಮತ್ತು ಕೃತಿ ಮಾತುಗಳ ನಡುವೆ ಅಂತರವಿಲ್ಲದ ವ್ಯಕ್ತಿತ್ವ ಇಂದು ಮರೀಚಿಕೆಯಾಗಿದೆ ಎಂದು ಸಂತೋಷ್ ಹೆಗ್ಡೆ ಹೇಳಿದರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ವಿ. ಶ್ರೀಶಾನಂದ, ರಮೇಶ್ ಅರವಿಂದ್, ಎಂ. ಮುತ್ತೂರಾಯ, ಎಚ್.ಡುಂಡಿರಾಜ್, ಎಸ್.ಅಹಲ್ಯ, ಶ್ಯಾಮಸುಂದರ್ ವಟ್ಟಂ, ಸುಧೀಂದ್ರ ಬಿಂದಗಿ ಮೊದಲಾದ ಸಾಧಕರಿಗೆ ‘ಪರಿಮಳ ಪ್ರಶಸ್ತಿ’ ಪ್ರದಾನ ಮಾಡಲಾಯಿತು.
‘ಶ್ರೀಧೀರೇಂದ್ರ ದರ್ಶನ’ ಪುಸ್ತಕವನ್ನು ಶ್ರೀ ಸುವಿದ್ಯೇಂದ್ರ ತೀರ್ಥರು ಲೋಕಾರ್ಪಣೆಗೊಳಿಸಿದರು. ಕಾಣಿಯೂರು ಮಠಾಧೀಶ ಶ್ರೀವಿದ್ಯಾವಲ್ಲಭತೀರ್ಥರು ಸಾನ್ನಿಧ್ಯ ವಹಿಸಿದ್ದರು. ರಾಯಚೂರು ಶೇಷಗಿರಿದಾಸ್ ಮತ್ತು ತಂಡದವರಿಂದ ಹರಿದಾಸ ಕೀರ್ತನೆಗಳ ಗಾಯನ ನಡೆಯಿತು.