ಬೆಂಗಳೂರು: ಕಳೆದ ಹತ್ತು ದಿನಗಳಿಂದ ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ನಡೆಯುತ್ತಿದ್ದ ಸ್ವಾತಂತ್ರ್ಯೋತ್ಸವದ ಫಲಪುಷ್ಪ ಪ್ರದರ್ಶನಕ್ಕೆ ಸೋಮವಾರ ತೆರೆ ಬಿದ್ದಿದೆ.
ಗಣರಾಜ್ಯೋತ್ಸವ ಹಾಗೂ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ತೋಟಗಾರಿಕಾ ಇಲಾಖೆಯು ಹೊಸ ಹೊಸ ವಿಷಯವಸ್ತುವನ್ನಿರಿಸಿಕೊಂಡು ಫಲಪುಷ್ಪ ಪ್ರದರ್ಶನವನ್ನು ಆಯೋಜಿಸುತ್ತದೆ. ಅಂತೇಯೇ 78ನೇ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಬದುಕು ಬರಹವನ್ನಾಧರಿಸಿ ಲಾಲ್‌ಬಾಗ್‌ನಲ್ಲಿ 216ನೇ ಫಲಪುಷ್ಪ ಪ್ರದರ್ಶನ ಏರ್ಪಡಿಸಲಾಗಿತ್ತು.
ಆ.9ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಿ ಪ್ರದರ್ಶನಕ್ಕೆ ಚಾಲನೆ ನೀಡಿದ್ದರು. ಸೋಮವಾರಕ್ಕೆ ಫಲಪುಷ್ಪ ಪ್ರದರ್ಶನಕ್ಕೆ ತೆರೆ ಬಿತ್ತು.
ಹತ್ತು ದಿನಗಳ ಫಲಪುಷ್ಪ ಪ್ರದರ್ಶನಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಒಟ್ಟು 9 ಲಕ್ಷಕ್ಕೂ ಹೆಚ್ಚು ಜನರು ಫಲಪುಷ್ಪ ಪ್ರದರ್ಶನವನ್ನು ವೀಕ್ಷಿಸುವ ಮೂಲಕ ಬಾಬಾಸಾಹೇಬರ ವ್ಯಕ್ತಿತ್ವದ ಚಿತ್ರಣವನ್ನು ಕಣ್ತುಂಬಿಕೊಂಡರು. ಕೊನೆಯ ದಿನವೂ ಜನರ ಉತ್ಸಾಹ ಬತ್ತಿತರಲಿಲ್ಲ. ಸೋಮವಾರ ಸುಮಾರು 65 ಸಾವಿರ ಜನ ಲಾಲ್ಬಾಗ್ಗೆ ಭೇಟಿ ನೀಡಿದ್ದಾರೆ.
ಸಾರ್ವಜನಿಕರ ಭೇಟಿಯಿಂದ ತೋಟಗಾರಿಕೆ ಇಲಾಖೆಗೆ ಸುಮಾರು 3 ಕೋಟಿ ರೂಪಾಯಿ ಸಂಗ್ರಹವಾಗಿದ್ದು, ಸ್ಟಾಲ್ ಮತ್ತಿತರ ಮೂಲಗಳಿಂದ ಸುಮಾರು 40 ಲಕ್ಷ ಆದಾಯ ಬಂದಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.