ನೂತನ ಚುನಾವಣಾ ಆಯುಕ್ತರಾಗಿ ನಿವೃತ್ತ ಐಎಎಸ್​ ಅಧಿಕಾರಿ ಅರುಣ್​ ಗೋಯೆಲ್​ ಅಧಿಕಾರ ಸ್ವೀಕಾರ

Election Commission
Published on

ನವದೆಹಲಿ: ನಿವೃತ್ತ ಐಎಎಸ್ ಅಧಿಕಾರಿ ಅರುಣ್ ಗೋಯೆಲ್ ಅವರು ಸೋಮವಾರ ಭಾರತದ ಚುನಾವಣಾ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದರು. ಶನಿವಾರವಷ್ಟೇ (ನ.19) ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಆಯುಕ್ತರ ಹುದ್ದೆಗೆ ಗೋಯೆಲ್​ ಅವರನ್ನು ನೇಮಿಸಿದರು.

ತ್ರಿಸದಸ್ಯ ಚುನಾವಣಾ ಆಯೋಗದಲ್ಲಿ ಒಬ್ಬ ಚುನಾವಣಾ ಆಯುಕ್ತರ ಹುದ್ದೆಯು ಮೇ 15 ರಿಂದ ಖಾಲಿಯಾಗಿದೆ. ಸುಶೀಲ್ ಚಂದ್ರ ಅವರು ಹುದ್ದೆಯಿಂದ ನಿವೃತ್ತರಾದ ನಂತರ ಅಂದಿನ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರು ಮುಖ್ಯ ಚುನಾವಣಾ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡರು. ಅವರಿಂದ ತೆರವಾಗಿರುವ ಸ್ಥಾನಕ್ಕೆ ಗೋಯೆಲ್​ ನೇಮಕವಾಗಿದ್ದಾರೆ.

ಗೋಯೆಲ್​ ಈವರೆಗೂ ಭಾರಿ ಕೈಗಾರಿಕೆಗಳ ಸಚಿವಾಲಯದ ಕಾರ್ಯದರ್ಶಿಯಾಗಿದ್ದರು. ಸ್ವಯಂ ನಿವೃತ್ತಿ ಪಡೆದ ಬಳಿಕ ಅವರ ಸ್ಥಾನಕ್ಕೆ ಉತ್ತರ ಪ್ರದೇಶ ಕೇಡರ್ ಅಧಿಕಾರಿ ಕಮ್ರಾನ್ ರಿಜ್ವಿ ಅವರನ್ನು ಕೇಂದ್ರ ನೇಮಕಾತಿ ಸಮಿತಿ ನೇಮಿಸಿದೆ. ಕೈಗಾರಿಕೆಗಳ ಸಚಿವಾಲಯದ ಕಾರ್ಯದರ್ಶಿಯಾಗುವ ಮುನ್ನ ಸಾಂಸ್ಕೃತಿಕ ಸಚಿವಾಲಯದ ಕಾರ್ಯದರ್ಶಿಯಾಗಿದ್ದರು. ಅಲ್ಲದೆ, ದೆಹಲಿ ಅಭಿವೃದ್ಧಿ ಪ್ರಾಧಿಕಾರದ ಚೇರ್ಮನ್​ ಸಹ ಆಗಿದ್ದರು.

ಇದೀಗ ಗೋಯೆಲ್​ ಅವರು ನೂತನ ಚುನಾವಣಾ ಆಯುಕ್ತರಾಗಿ ನೇಮಕವಾಗಿದ್ದು, ಮುಖ್ಯ ಚುನಾವಣಾ ಆಯುಕ್ತ ರಾಜೀವ್​ ಕುಮಾರ್​ ಅವರನ್ನೊಳಗೊಂಡ ಚುನಾವಣಾ ಆಯೋಗದ ತ್ರಿಸದಸ್ಯರಲ್ಲಿ ಒಬ್ಬರಾಗಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net