ಇತರ ಕಾಯಿಲೆಗಳ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗಳ ಪುನರಾರಂಭ: ಮೋದಿ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಬಿಎಸ್‌ವೈ

cm video
Published on

ಬೆಂಗಳೂರು: ನಾನ್‌ಕೋವಿಡ್ ರೋಗಿಗಳ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗಳು, ಚಿಕಿತ್ಸಾಲಯಗಳನ್ನು ತೆರೆಯುವ ಕುರಿತು ಶೀಘ್ರ ನಿರ್ಧಾರ ಕೈಗೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಆಗ್ರಹಿಸಿದ್ದಾರೆ.

ಕರೊನಾ ಹಿನ್ನೆಲೆಯಲ್ಲಿ ಇತರ ವೈದ್ಯಕೀಯ ಚಿಕಿತ್ಸೆಗಳು ನಿರ್ಲಕ್ಷ್ಯಕ್ಕೆ ಒಳಗಾಗಿವೆ. ಇದರಿಂದ ಜನರಿಗೆ ತೊಂದರೆಯಾಗುತ್ತಿದೆ. ಆದ್ದರಿಂದ ಕೋವಿಡ್‌ಗೆ ಸಂಬಂಧಿಸದ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಸಣ್ಣ ಕ್ಲಿನಿಕ್‌ಗಳು ಮತ್ತು ಖಾಸಗಿ ಆಸ್ಪತ್ರೆಗಳನ್ನು ಪುನರಾರಂಭಿಸಲು ಕೇಂದ್ರ ಸರ್ಕಾರ ಕಟ್ಟುನಿಟ್ಟಿನ ಆದೇಶ ಹೊರಡಿಸಬೇಕು ಎಂದು ಸಲಹೆ ನೀಡಿದರು.

ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಜತೆ ಪ್ರಧಾನಿ ನಡೆಸಿದ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಪಾಲ್ಗೊಂಡ ಯಡಿಯೂರಪ್ಪ, ಕನಿಷ್ಠ ಮೇ ಅಂತ್ಯದವರೆಗೆ ದೇಶದಲ್ಲಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರಯಾಣಗಳನ್ನು ಪ್ರಾರಂಭಿಸಬಾರದು ಎಂದು ಹೇಳಿದರು.

ಅಂತಾರಾಷ್ಟ್ರೀಯ ಪ್ರಯಾಣಿಕರನ್ನು ಕಡ್ಡಾಯವಾಗಿ 14 ದಿನಗಳ ಸಾಂಸ್ಥಿಕ ಕ್ವಾರಂಟೈನ್ ಗೆ ಒಳಪಡಿಸಬೇಕು. ಅಂತಾರಾಜ್ಯ ಪ್ರಯಾಣಿಕರನ್ನು ಸಹ ಕಡ್ಡಾಯವಾಗಿ ಸಾಂಸ್ಥಿಕ ಕ್ವಾರಂಟೈನ್ ಮತ್ತು ಪರೀಕ್ಷೆಗೆ ಒಳಪಡಿಸಬೇಕು ಎಂದು ಹೇಳಿದರು.

ಉಳಿದಂತೆ ಅವರು ನೀಡಿರುವ ಸಲಹೆಗಳು ಇಂತಿವೆ.

ಕೆಂಪು, ಕಿತ್ತಳೆ ಮತ್ತು ಹಸಿರು ವಲಯಗಳನ್ನು ಜಿಲ್ಲಾವಾರು ಗುರುತಿಸಬಾರದು. ಕಂಟೇನ್‌ಮೆಂಟ್ ವಲಯಗಳನ್ನು ಮಾತ್ರ ಕಟ್ಟುನಿಟ್ಟಾಗಿ ನಿರ್ಬಂಧಿಸಬೇಕು. ಕ್ಲಸ್ಟರುಗಳ ಸುತ್ತಲಿನ 50 ರಿಂದ 100 ಮೀಟರ್ ಪ್ರದೇಶವನ್ನು ಕಂಟೇನ್‌ಮೆಂಟ್ ವಲಯ ಎಂದು ಘೋಷಿಸಬೇಕು. ಇತರ ಸ್ಥಳಗಳಲ್ಲಿ ವಾಣಿಜ್ಯ ಚಟುವಟಿಕೆಗಳು ಹಾಗೂ ಸಾರ್ವಜನಿಕ ಸಾರಿಗೆಗೆ ಅನುಮತಿ ನೀಡಬೇಕು. ಇದರಿಂದ ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ನೀಡಲು ಸಾಧ್ಯವಾಗುವುದಲ್ಲದೆ, ರಾಜ್ಯಗಳು ಹಣಕಾಸು ಬಿಕ್ಕಟ್ಟಿನಿಂದ ಹೊರಬರಲು ಸಾಧ್ಯವಾಗುತ್ತದೆ.

ಅಂತಾರಾಜ್ಯ ಪ್ರಯಾಣಿಕರು ತಾವು ಹೊರಡುವ ಸ್ಥಳದಲ್ಲಿ ಆರೋಗ್ಯ ಪ್ರಮಾಣ ಪತ್ರವನ್ನು ಸ್ಥಳೀಯ ಆರೋಗ್ಯ ಅಧಿಕಾರಿಗಳಿಂದ ಪಡೆದುಕೊಳ್ಳಬೇಕು. ಆರೋಗ್ಯ ಪ್ರಮಾಣ ಪತ್ರ ಹೊಂದಿಲ್ಲದವರನ್ನು ಕಡ್ಡಾಯವಾಗಿ ಕ್ವಾರಂಟೈನ್‌ನಲ್ಲಿ ಇರಿಸಬೇಕು.

ಕರೊನಾ ಪರೀಕ್ಷೆ ನಡೆಸುವ ಕುರಿತು ಒಂದು ಸಮಗ್ರ ಮಾರ್ಗಸೂಚಿಗಳನ್ನು ಹೊರಡಿಸಬೇಕು. ಪ್ರತಿ 10 ಲಕ್ಷಕ್ಕೆ ಕನಿಷ್ಠ ಎಷ್ಟು ಪರೀಕ್ಷೆ ನಡೆಸಬೇಕು ಎಂದು ಈ ಮಾರ್ಗಸೂಚಿಯಲ್ಲಿ ಸ್ಪಷ್ಟಪಡಿಸಬೇಕು. ಕೇವಲ ಸೋಂಕಿನ ಲಕ್ಷಣ ಹೊಂದಿರುವವರು ಮತ್ತು ಆಸ್ಪತ್ರೆಗೆ ದಾಖಲಾಗುವ ಅಗತ್ಯ ಹೊಂದಿರುವವರಿಗೆ ಮಾತ್ರ ಪರೀಕ್ಷೆ ನಡೆಸಬೇಕು.

ಈ ಸೋಂಕಿಗೆ ಚಿಕಿತ್ಸೆ ನೀಡಲು ಟೆಲಿ-ಮೆಡಿಸಿನ್ ಅನ್ನು ವ್ಯಾಪಕವಾಗಿ ಬಳಸಬೇಕು. ತೀವ್ರ ರೋಗ ಲಕ್ಷಣ ಹೊಂದಿರುವವರನ್ನು ಮಾತ್ರ ಆಸ್ಪತ್ರೆಗೆ ದಾಖಲಿಸಬೇಕು.

ರೋಗಲಕ್ಷಣಗಳಿಲ್ಲದ ಅಥವಾ ತೀವ್ರವಲ್ಲದ ಪ್ರಕರಣಗಳಲ್ಲಿ ಮನೆಯಲ್ಲಿಯೇ ಕಟ್ಟು ನಿಟ್ಟಿನ ಐಸೋಲೇಷನ್‌ನಲ್ಲಿ ಇರುವ ಮೂಲಕ ಹಾಗೂ ಟೆಲಿ ಮೆಡಿಸಿನ್ ಮೂಲಕ ಚಿಕಿತ್ಸೆ ಪಡೆಯಲು ಸಲಹೆ ನೀಡಬಹುದು.

ಕೋವಿಡ್ ಕುರಿತು ಜನರ ಪೂರ್ವಾಗ್ರಹಗಳನ್ನು ತೊಡೆಯಲು ಇದು ಫ್ಲೂ ನಂತೆಯೇ ಒಂದು ವೈರಲ್ ಸೋಂಕು; ಆದರೆ ಇತರ ದೀರ್ಘಕಾಲಿಕ ಕಾಯಿಲೆಯಿಂದ ಬಳಲುತ್ತಿರುವವರಿಗೆ ಅಪಾಯಕಾರಿ ಎಂಬ ಅರಿವು ಮೂಡಿಸಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net