ಬೈಂದೂರು: ಪರಿಸರ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದ್ದು, ಗ್ರಾಮದ ಪ್ರತಿ ಮನೆಗಳ ಕಸಗಳನ್ನು ಸಂಗ್ರಹಿಸಿ ವಿಲೇ ಮಾಡಲು ಬೈಂದೂರು ಪಪಂ ವ್ಯಾಪ್ತಿಯ ತಗ್ಗರ್ಸೆ ಗ್ರಾಮದ ಸ.ನಂ.176ರಲ್ಲಿ ಸುಮಾರು 8.06 ಎಕರೆ ಸರ್ಕಾರಿ ಸ್ಥಳದಲ್ಲಿ 492.99 ಲಕ್ಷ ವೆಚ್ಚದಲ್ಲಿ ಘನತ್ಯಾಜ್ಯ ಸಂಸ್ಕರಣಾ ಮತ್ತು ವಿಲೇವಾರಿ ಘಟಕ ನಿರ್ಮಾಣವಾಗಲಿದೆ. ಇಲ್ಲಿ ಸಂಗ್ರಹಿಸಿದ ಕಸಗಳನ್ನು ವಿಂಗಡಿಸಿ (ಹಸಿ ಮತ್ತು ಒಣ) ವೈಜ್ಞಾನಿಕ ರೀತಿಯಲ್ಲಿ ವಿಲೇವಾರಿ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ ಹೇಳಿದರು.
ಇಲ್ಲಿನ ಅಂಬೇಡ್ಕರ್ ಭವನದಲ್ಲಿ ಮಂಗಳವಾರ ಪಪಂನ ಘಟಕ ನಿರ್ಮಾಣದ ಪ್ರಸ್ತಾವನೆಯಂತೆ ಯೋಜನೆ ಸಾಧಕ-ಬಾಧಕಗಳ ಚರ್ಚೆ ಕುರಿತು ನಡೆದ ಸಾರ್ವಜನಿಕ ಪರಿಸರ ಸಭೆಯಲ್ಲಿ ಮಾತನಾಡಿದರು.
ತಾಂತ್ರಿಕ ವಿಭಾಗದ ಪ್ರಬಂಧಕ ಮುನಿರಾಜು ಮಾತನಾಡಿ, ಪ್ರಸ್ತುತ ಬೈಂದೂರು ಪಪಂ ಯಲ್ಲಿ 9.5 ಟನ್‌ನಷ್ಟು ಕಸ ಉತ್ಪಾದನೆಯಾಗುತ್ತಿದ್ದು, ಪಪಂ ವ್ಯಾಪ್ತಿಯ ಕಸ ಸಂಗ್ರಹಿಸಿ ಹಸಿ ಮತ್ತು ಒಣ ಕಸ ಪ್ರತ್ಯೇಕಿಸಿ ಸಣ್ಣ ಮಟ್ಟದಲ್ಲಿ ಗೊಬ್ಬರ ತಯಾರಿಸುತ್ತಿದೆ. ಮುಂದಿನ 20 ವರ್ಷಗಳಲ್ಲಿ ಕಸದ ಪ್ರಮಾಣ 25 ಟನ್ ಆಗುವುದಾಗಿ ಅಂದಾಜಿಸಿ ಕಸ ವೈಜ್ಞಾನಿಕವಾಗಿ ಸಂಸ್ಕರಣೆ ಮತ್ತು ವಿಲೇವಾರಿ ಘಟಕ ವಿನ್ಯಾಸ ಒಳಗೊಂಡ ಯೋಜನೆ ತಯಾರು ಮಾಡಲಾಗಿದೆ ಎಂದರಲ್ಲದೆ, ಮುನ್ನೆಚ್ಚರಿಕೆ ಕ್ರಮವಾಗಿ ಪ್ರಸ್ತುತ ಯೋಜನೆಯಿಂದ ಉಂಟಾಗಬಹುದಾದ ಪರಿಸರದ ಮೇಲಿನ ಪರಿಣಾಮಗಳ ಅಧ್ಯಯನ ಬಗ್ಗೆ ವಿವರಣೆ ನೀಡಿದರು.
25 ಟನ್ ಸೌಲಭ್ಯದ ಘನತ್ಯಾಜ್ಯ ಸಂಸ್ಕರಣ ಮತ್ತು ವಿಲೇವಾರಿ ಘಟಕ ನಿರ್ಮಿಸುವ ಪ್ರಸ್ತಾವನೆಗೆ ಸ್ಥಳಿಯ ಹಲವರು ವಿರೋಧ ವ್ಯಕ್ತಪಡಿಸಿದರು. ಉತ್ತರಿಸಿದ ಡಿಸಿ, ಯಾವುದೇ ಸಮಸ್ಯೆ ಬರದಂತೆ ಈ ಘಟಕ ಕಾರ್ಯನಿರ್ವಹಿಸಲಿದೆ. ಗ್ರಾಮಸ್ಥರು ತಿಳಿಸಿದಂತೆ ಸ.ನಂ 127 ಅನ್ನು ಕೂಡ ಪರಿಶೀಲಿಸಲಾಗಿದ್ದು, ಮುಂದಿನ ದಿನಗಳಲ್ಲಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಪರಿಸರ ರಕ್ಷಣೆ ಹಾಗೂ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಅವರು ಮನವಿ ಮಾಡಿದರು.
ಪರಿಸರ ಇಲಾಖೆ ಮಂಗಳೂರು ವಲಯಾಧಿಕಾರಿ ವಿಜಯಲಕ್ಷ್ಮೀ ಹೆಗಡೆ ಇದ್ದರು. ಜಿಲ್ಲಾ ಪರಿಸರ ಇಲಾಖಾಧಿಕಾರಿ ಕಿರ್ತಿಕುಮಾರ್ ಕಾರ್ಯಕ್ರಮ ನಿರ್ವಹಿಸಿದರು, ಪಪಂ ಮುಖ್ಯಾಧಿಕಾರಿ ಅಜಯ್ ಭಂಡಾರ್‌ಕರ್ ವಂದಿಸಿದರು.
ಪ್ರಸ್ತುತ ಯೋಜನೆಯಲ್ಲಿ ಪರಿಸರ ಪರಿಣಾಮ ಮೌಲ್ಯ ಮಾಪನ ಮುಖ್ಯವಾಗಿ ಪರಿಸರ ನಿರ್ವಹಣಾ ಯೋಜನೆಗೆ ಪ್ರಧಾನ ಒತ್ತು ನೀಡಲಾಗುತ್ತದೆ. ಸಭೆಗೆ ಆಗಮಿಸಿರುವ ಆಸಕ್ತ ಸ್ಥಳೀಯ ಸಾರ್ವಜನಿಕರ ಸಲಹೆ ಮತ್ತು ಅಭಿಪ್ರಾಯ ತಿಳಿದುಕೊಳ್ಳುವುದು ಮುಖ್ಯ ಉದ್ದೇಶವಾಗಿರುವ ನೆಲೆಯಲ್ಲಿ ಈ ಸಭೆ ಆಯೋಜಿಸಲಾಗಿದೆ.
-ಡಾ.ವಿದ್ಯಾಕುಮಾರಿ, ಜಿಲ್ಲಾಧಿಕಾರಿ