

ಆಯುರ್ವೆದದಲ್ಲಿ ಕೆಮ್ಮಿಗೆ ಕಾಸ ಎಂಬ ನಾಮಧೇಯ. ಶೀತ ಕೆಮ್ಮು, ಕಫ ಕೆಮ್ಮು, ಒಣ ಕೆಮ್ಮು, ಕೆಮ್ಮು ದಮ್ಮು ಈ ನಾಲ್ಕು ಪ್ರಾಸ ಪದಗಳನ್ನು ರೂಢಿಯಲ್ಲಿ ನಾವೆಲ್ಲ ಬಳಸುತ್ತೇವೆ. ಮೂಗಿನಲ್ಲಿ ಶೀತ ನೆಗಡಿಯೊಂದಿಗೆ ಕೆಮ್ಮು ಬಂದಾಗ ಶೀತ ಕೆಮ್ಮು, ಗಂಟಲಿನಲ್ಲಿ ಕಫವಿದ್ದು ಜೊತೆಯಲ್ಲಿ ಕೆಮ್ಮು ಇದ್ದಾಗ ಕಫ ಕೆಮ್ಮು, ಕಫವಿಲ್ಲದೆ ಕೇವಲ ಕೆಮ್ಮು ಮಾತ್ರ ಬರುತ್ತಿದ್ದಾಗ ಒಣ ಕೆಮ್ಮು, ಶ್ವಾಸಕೋಶದಲ್ಲಿ ಕಫ ತುಂಬಿದ್ದು ಉಸಿರಾಟದ ತೊಂದರೆಯೊಂದಿಗೆ ಕೆಮ್ಮು ಬರುತ್ತಿದ್ದಾಗ ಕೆಮ್ಮು ದಮ್ಮು ಎಂಬ ಪದಗಳ ಪ್ರಯೋಗವನ್ನು ಸಾಮಾನ್ಯವಾಗಿ ಮಾಡುತ್ತೇವೆ. ಇಲ್ಲಿ ಕೆಮ್ಮು ತಮ್ಮನಾದರೆ ದಮ್ಮು ಅಣ್ಣ! ಉಸಿರಾಟದ ತೊಂದರೆ ಇರುವ ಎಲ್ಲಾ ವಿಧವಾದ ವ್ಯಾಧಿಗಳಲ್ಲೂ ಜನರು ದಮ್ಮು ಪದದ ಬಳಕೆ ಮಾಡುವುದನ್ನು ಕಾಣುತ್ತೇವೆ. ಆಯುರ್ವೆದದಲ್ಲಿ ವಾತಜ ಕಾಸ, ಪಿತ್ತಜ ಕಾಸ, ಕಫಜ ಕಾಸ, ಕ್ಷತಜ ಕಾಸ, ಕ್ಷಯಜ ಕಾಸ ಎಂಬುದಾಗಿ ಕೆಮ್ಮಿನ ಐದು ವಿಧಗಳನ್ನು ಹೇಳಲಾಗಿದೆ. ಹದಿಮೂರು ವೇಗಗಳನ್ನು ನಮ್ಮ ನಿತ್ಯ ಜೀವನದಲ್ಲಿ ತಡೆಯಬಾರದು, ಹಾಗೆ ತಡೆಯುವುದರಿಂದ ಬರಬಹುದಾದಂತಹ ರೋಗಗಳನ್ನು ಹೇಳಲಾಗಿದ್ದು ಈ ಹದಿಮೂರರಲ್ಲಿ ಕೆಮ್ಮು ಕೂಡಾ ಒಂದು. ಕೆಮ್ಮು ಒಳ್ಳೆಯದೆಂದು ಇದರರ್ಥವಲ್ಲ. ಅದಕ್ಕೆ ಬೇಕಾದ ಚಿಕಿತ್ಸೆ
ಯನ್ನು ಮಾಡಬೇಕು. ಆದರೆ ಕೆಮ್ಮು ಬರುತ್ತಿರುವ ವೇಳೆ ಅದನ್ನು ತಡೆಹಿಡಿಯಬಾರ ದೆಂದು ಇದರರ್ಥ.
ವಾಯುವು ಮೇಲ್ಮುಖವಾಗಿ ಚಲಿಸಿ ಪ್ರಯತ್ನಪೂರ್ವಕವಾಗಿ ಕಫದೊಂದಿಗೆ ಅಥವಾ ಕಫರಹಿತವಾಗಿ ಹೊರಹಾಕುವಾಗ ಕಸ್ ಎಂಬ ಅಹಿತಕರ ಶಬ್ದದೊಂದಿಗೆ ಕೆಮ್ಮು ಬರುವುದರಿಂದ ಕಾಸ ಎಂಬ ಹೆಸರು ಬಂದಿದೆ. ವಾತದೋಷದ ಸಹಯೋಗವಿಲ್ಲದೆ ಶ್ವಾಸರೋಗವಿಲ್ಲ, ಕಫದೋಷದ ಭಾಗಿತ್ವವಿಲ್ಲದೆ ಕಾಸರೋಗವಿಲ್ಲ ಎಂಬ ಮಾತು ಆಯುರ್ವೆದದಲ್ಲಿದೆ. ತುಂಡಾದ ಹಿತ್ತಾಳೆಯ (ಕಾಂಸ್ಯ) ಪಾತ್ರೆಗೆ ಹೊಡೆದರೆ ಬರುವ ಶಬ್ದವನ್ನು ಕಾಸರೋಗವು ಹೋಲುವುದು ವಿಶೇಷ. ಸಾಮಾನ್ಯವಾಗಿ ರೋಗಿಯ ಪರೀಕ್ಷೆಯ ಬಳಿಕ ರೋಗಲಕ್ಷಣಗಳು ವೈದ್ಯರಿಗೆ ತಿಳಿಯುತ್ತವೆ. ಆದರೆ ಕಾಸ ರೋಗದಲ್ಲಿ ರೋಗಿಯು ಕಾಣುವುದಕ್ಕಿಂತಲೂ ಮೊದಲೇ ಕಾಸರೋಗಿ ಬರುತ್ತಿರುವುದರ ಅರಿವಾಗುತ್ತದೆ. ವೈದ್ಯರಲ್ಲದವರಿಗೂ ದೂರದಿಂದಲೇ ಆ ವ್ಯಕ್ತಿಗೆ ಇದೇ ಕಾಯಿಲೆ ಇದೆ ಎಂಬುದು ಗೊತ್ತಾಗುವುದು ಕಾಸರೋಗದ ವಿಶಿಷ್ಟತೆ! ಹೊಗೆ ಅಥವಾ ಧೂಳಿನ ಕಣಗಳು ಶ್ವಾಸ ತೆಗೆದುಕೊಳ್ಳುವಾಗ ದೇಹದ ಒಳಗೆ ಪ್ರವೇಶಿಸುವುದರಿಂದ, ಉಸಿರುಗಟ್ಟುವಂತಹ ವಾತಾವರಣದಿಂದ, ಅತಿಯಾದ ವ್ಯಾಯಾಮದಿಂದ, ದೈಹಿಕ ಶ್ರಮದಾಯಕ ಕೆಲಸಗಳಿಂದ, ಅತಿಯಾಗಿ ಒಣ ಆಹಾರ ಸೇವಿಸುವುದರಿಂದ, ಅಕಸ್ಮಾತ್ತಾಗಿ ಆಹಾರ ದ್ರವ್ಯಗಳು ಶ್ವಾಸನಾಳ ಪ್ರವೇಶಿಸುವುದರಿಂದ, ಸೀನು, ಕೆಮ್ಮು, ಮಲವೇ ಮುಂತಾದ ಪ್ರಾಕೃತಿಕ ವೇಗಗಳನ್ನು ತಡೆಯುವುದರಿಂದ, ಅನ್ಯರೋಗಗಳ ಪರಿಣಾಮದಿಂದಲೂ ಕಾಸರೋಗ ಉಂಟಾಗುತ್ತದೆ ಎಂಬ ಸುಶ್ರುತ ಸಂಹಿತೆಯ ವಿವರಣೆ ಮಾರ್ವಿುಕವಾಗಿದೆ.
ಪ್ರಾಣವಾಯು ಹಾಗೂ ಉದಾನವಾಯುಗಳು ಧಾತುಗಳ ಕ್ಷಯದಿಂದ ಅಥವಾ ಚಲನೆಯ ಮಾರ್ಗದಲ್ಲಿನ ಅಡೆತಡೆಗಳಿಂದ ದೂಷಿತಗೊಂಡು ಕಫದೋಷದ ಭಾಗಿತ್ವದೊಂದಿಗೆ ಪ್ರಾಣವಹ ಸ್ರೋತಸ್ನಲ್ಲಿ ಕಾಸವು ಉಂಟಾಗುತ್ತದೆ. ಗಂಟಲು ಹಾಗೂ ಬಾಯಿಯಲ್ಲಿ ಮುಳ್ಳಿನಿಂದ ಚುಚ್ಚಿದಂತೆ ಕಿರಿಕಿರಿಯ ಅನುಭವ, ಗಂಟಲಿನಲ್ಲಿ ನವೆ, ಆಹಾರವನ್ನು ನುಂಗಲು ಕಷ್ಟವಾಗುವುದು ಇವು ಕೆಮ್ಮು ರೋಗವಾಗಿ ಕಾಡುವ ಆರಂಭದಲ್ಲಿ ಕಂಡುಬರುವ ಚಿಹ್ನೆಗಳು. ಇದಕ್ಕೆ ರೋಗದ ಪೂರ್ವರೂಪ ಎನ್ನುತ್ತೇವೆ. ಈ ಹಂತದಲ್ಲಿ ಆಹಾರ ವಿಹಾರಗಳಲ್ಲಿ ಮಾಡುವ ಬದಲಾಣೆ ಗಳಿಂದಲೇ ಕಾಸರೋಗವನ್ನು ನಿವಾರಿಸಲು ಸಾಧ್ಯವಿದೆ. ಕಾಸರೋಗದ ಲಕ್ಷಣಗಳನ್ನು ಸರಿಯಾಗಿ ತಿಳಿದುಕೊಂಡು ಮುನ್ನಡೆಯುವುದು ಅಪೇಕ್ಷಣೀಯ.