

ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಲ್ಲೊಂದಾದ ಪದ್ಮಪ್ರಶಸ್ತಿಗಳನ್ನು ಕೇಂದ್ರ ಗೃಹ ಸಚಿವಾಲಯ, ಪ್ರತಿ ವರ್ಷದಂತೆ ಈ ವರ್ಷವೂ ಗಣರಾಜ್ಯೋತ್ಸವದ ಮುನ್ನಾದಿನದಂದು ಪ್ರಕಟಿಸಿದೆ. ಪದ್ಮವಿಭೂಷಣ ಪ್ರಶಸ್ತಿಗೆ ಐವರು, ಪದ್ಮಭೂಷಣ ಪುರಸ್ಕಾರಕ್ಕೆ 17 ಮತ್ತು ಪದ್ಮಶ್ರೀ ಪ್ರಶಸ್ತಿಗೆ 110 ಮಂದಿ ಸೇರಿದಂತೆ ಒಟ್ಟು 132 ಸಾಧಕರನ್ನು ಆಯ್ಕೆ ಮಾಡಲಾಗಿದೆ. ಇದರಲ್ಲಿ 30 ಮಹಿಳೆಯರು, 8 ಜನ ವಿದೇಶೀಯರು ಇದ್ದಾರೆ. 9 ಗಣ್ಯರಿಗೆ ಮರಣೋತ್ತರ ಪ್ರಶಸ್ತಿ ಪ್ರಕಟಿಸಲಾಗಿದೆ. ಕಲೆ, ಸಮಾಜಸೇವೆ, ವಿಜ್ಞಾನ-ತಂತ್ರಜ್ಞಾನ, ವ್ಯಾಪಾರ-ಉದ್ದಿಮೆ, ವೈದ್ಯಕೀಯ, ಸಾಹಿತ್ಯ, ಶಿಕ್ಷಣ, ಕ್ರೀಡೆ ಇತ್ಯಾದಿ ಹಲವು ಕ್ಷೇತ್ರಗಳ ಸಾಧಕರು ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
ಈ ಸಲ ಪ್ರಶಸ್ತಿಗೆ ಆಯ್ಕೆಯಾದವರ ಹೆಸರು- ವಿವರಗಳನ್ನು ಗಮನಿಸಿದರೆ, ಪ್ರಸಿದ್ಧ ಸಾಧಕರ ಜತೆಜತೆಗೇ ಎಲೆ ಮರೆ ಕಾಯಿಯಂತೆ ಸಾಧನೆ ಮಾಡಿದ ಹಲವಾರು ಮಂದಿಗೆ ಕೇಂದ್ರ ಸರ್ಕಾರ ಮನ್ನಣೆ ನೀಡಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಉದಾಹರಣೆಗೆ, ಸ್ವತಃ ಸುಟ್ಟ ಗಾಯಗಳ ಸಮಸ್ಯೆ ಅನುಭವಿಸಿ ಈಗ ತನ್ನಂತೆ ಸುಟ್ಟುಹೋದವರ ಸೇವೆಯಲ್ಲಿ ನಿರತರಾಗಿರುವ ಬೆಂಗಳೂರಿನ ಡಾ. ಪ್ರೇಮಾ ಧನರಾಜ್ ಅತ್ಯುತ್ತಮ ಆಯ್ಕೆ. ಅದೇ ರೀತಿ, ಭೂರಹಿತ ಆದಿವಾಸಿಗಳಿಗೆ ತಮ್ಮ 3-4 ದಶಕಗಳ ಹೋರಾಟದಿಂದ 6 ಸಾವಿರ ಎಕರೆ ಕೃಷಿ ಭೂಮಿ ದೊರಕಿಸಿಕೊಟ್ಟಿರುವ ಎಚ್.ಡಿ. ಕೋಟೆಯ ಜೇನುಕುರುಬರ ಮುಖಂಡ ಸೋಮಣ್ಣ. ಹಾಗೆಯೇ ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿರುವ ಕರ್ನಾಟಕ ಜ್ಞಾನ ಆಯೋಗದ ಸದಸ್ಯ ಕಾರ್ಯದರ್ಶಿಯಾಗಿದ್ದ ಪ್ರೊ. ಎಂ.ಕೆ. ಶ್ರೀಧರ್ ಮತ್ತು ಅಂಗವಿಕಲರ ಕಲ್ಯಾಣಕ್ಕಾಗಿ ದುಡಿದಿರುವ ಕೆ.ಎಸ್. ರಾಜಣ್ಣ ಕೂಡ ಅತ್ಯುತ್ತಮ ಆಯ್ಕೆ.
ದೇಶದ ಈ ಅತ್ಯುನ್ನತ ಪ್ರಶಸ್ತಿಗಳು ನೈಜ ಸಾಧಕರ ಮುಡಿಗೇರಲಿವೆ ಎಂಬುದು ಸಂತೋಷದ ಸಂಗತಿ. ಸಾಧಕರು ಪ್ರಶಸ್ತಿಯನ್ನು ಹುಡುಕಿಕೊಂಡು ಹೋಗುವುದಕ್ಕಿಂತ ಪ್ರಶಸ್ತಿಯೇ ಸಾಧಕರನ್ನು ಹುಡುಕಿಕೊಂಡು ಬರುವಂತಾಗಿರುವುದು ನಿಜಕ್ಕೂ ಸಮರ್ಥ ಆಡಳಿತದ ಸಂಕೇತ. ಹಿಂದೆಲ್ಲ ಪ್ರಶಸ್ತಿಗಳ ಆಯ್ಕೆಯಲ್ಲಿ ಸ್ವಜನ ಪಕ್ಷಪಾತ ಎದ್ದು ಕಾಣುತ್ತಿತ್ತು. ರಾಜಕೀಯ ಲೆಕ್ಕಾಚಾರದ ನೆರಳೂ ಇರುತ್ತಿತ್ತು. ಅರ್ಹರಲ್ಲದವರೂ ಪುರಸ್ಕಾರಗಳಿಗೆ ಪಾತ್ರರಾಗಿ ಜನಸಮುದಾಯದಲ್ಲಿ ಅಚ್ಚರಿ-ತಿರಸ್ಕಾರಕ್ಕೆ ಕಾರಣರಾಗುತ್ತಿದ್ದರು. ಆ ಮೂಲಕ ಪ್ರಶಸ್ತಿಗಳ ಮೌಲ್ಯವೇ ಕುಸಿದುಹೋಗುತ್ತಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಹಾಗಾಗುತ್ತಿಲ್ಲ. ದೇಶದ ವಿವಿಧ ಪ್ರದೇಶಗಳಿಂದ, ಅದರಲ್ಲೂ ಅತ್ಯಂತ ದುರ್ಗಮ ಎನಿಸುವ ಸ್ಥಳಗಳಿಂದ ಪ್ರತಿಭಾನ್ವಿತರನ್ನು, ಸಾಧಕರನ್ನು ಹೆಕ್ಕಿಹೆಕ್ಕಿ ತೆಗೆದು ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರ ವೈಯಕ್ತಿಕ ಆಸಕ್ತಿ, ಮಾರ್ಗದರ್ಶನ ಇದರ ಹಿಂದೆ ಇರುವುದನ್ನು ಯಾರೂ ಅಲ್ಲಗಳೆಯುವಂತಿಲ್ಲ. ಈ ವರ್ಷವಂತೂ ಲೋಕಸಭಾ ಚುನಾವಣೆ ನಡೆಯುವ ವರ್ಷ. ಆದರೂ ಈ ಸಲದ ಪ್ರಶಸ್ತಿ ಪಟ್ಟಿಯಲ್ಲಿ ರಾಜಕೀಯ ಲೆಕ್ಕಾಚಾರದ ನೆರಳು ಕಾಣಿಸುತ್ತಿಲ್ಲ.