More

    ಗೋಮೂತ್ರ ಮಾನವ ಬಳಕೆಗೆ ಅನರ್ಹ; ಹಾನಿಕಾರಕ ಬ್ಯಾಕ್ಟೀರಿಯಾ ಎಂದ ತಜ್ಞರು

    ನವದೆಹಲಿ: ಗೋಮೂತ್ರದಲ್ಲಿ ಹಾನಿಕಾರಕ ಬ್ಯಾಕ್ಟೀರಿಯಾ ಇರುವುದರಿಂದ ಅದು ಮಾನವನ ಸೇವನೆಗೆ ಯೋಗ್ಯವಲ್ಲ ಎಂದು ಹೊಸ ಅಧ್ಯಯನವೊಂದು ತಿಳಿಸಿದೆ. ಹಸುಗಳು ಮತ್ತು ಎತ್ತುಗಳ ಮೂತ್ರದ ಮಾದರಿಗಳ ಬಗ್ಗೆ ಭಾರತೀಯ ಪಶುವೈದ್ಯಕೀಯ ಸಂಶೋಧನಾ ಸಂಸ್ಥೆ (ಐವಿಆರ್​ಐ) ನಡೆಸಿದ ಅಧ್ಯಯನದಿಂದ ಈ ಅಂಶ ದೃಢಪಟ್ಟಿದೆ.

    ಗೋಮೂತ್ರದಲ್ಲಿ ಎಸ್ಚೆರಿಚಿಯಾ ಕೋಲಿ ಬ್ಯಾಕ್ಟೀರಿಯಂ ಸಹಿತ ಕನಿಷ್ಠ 14 ಬಗೆಯ ಹಾನಿಕಾರಕ ಬ್ಯಾಕ್ಟೀರಿಯಾಗಳು ಇರುವುದು ಪರೀಕ್ಷೆಗಳಿಂದ ತಿಳಿದುಬಂದಿದೆ. ಮಾನವರ ಹೊಟ್ಟೆ ನೋವಿಗೂ ಕೋಲಿ ಬ್ಯಾಕ್ಟೀರಿಯಾಕ್ಕೂ ಸಾಮಾನ್ಯವಾಗಿ ಸಂಬಂಧವಿರುತ್ತದೆ.

    73 ಸ್ಯಾಂಪಲ್​ಗಳ ವಿಶ್ಲೇಷಣೆ

    ಹಸು, ಎಮ್ಮೆ ಮತ್ತು ಮಾನವರ ಮೂತ್ರದ 73 ಸ್ಯಾಂಪಲ್​ಗಳ ಅಂಕಿಸಂಖ್ಯಾ ವಿಶ್ಲೇಷಣೆ ನಡೆಸಿದಾಗ, ಎಮ್ಮೆ ಮೂತ್ರದಲ್ಲಿನ ಬ್ಯಾಕ್ಟೀರಿಯಾ ವಿರೋಧಿ ಚಟುವಟಿಕೆಯು ಹಸುಗಳಲ್ಲಿನದ್ದಕ್ಕಿಂತ ಹೆಚ್ಚು ಉತ್ತಮವಾಗಿರುವುದು ಕಂಡು ಬಂದಿದೆ. ಎಮ್ಮೆ ಮೂತ್ರವು ಎಸ್​ಎಪರ್ವಿುಡಿಸ್ ಮತ್ತು ಇರ್ಹಾಪೊಂಟಿಸಿ ಮುಂತಾದ ಬ್ಯಾಕ್ಟೀರಿಯಾಗಳ ಮೇಲೆ ಹೆಚ್ಚು ಪರಿಣಾಮಕಾರಿ ಆಗಿರುವುದು ಪರೀಕ್ಷೆ ಗಳಿಂದ ದೃಢಪಟ್ಟಿದೆ ಎಂದು ಅಧ್ಯಯನದ ನೇತೃತ್ವ ವಹಿಸಿದ್ದ ಭೋಜ ರಾಜ್ ಸಿಂಗ್ ಹೇಳಿದ್ದಾರೆ.

    ಸಂಸ್ಥೆಯ ಸಾಂಕ್ರಾಮಿಕರೋಗಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಸಿಂಗ್, 2022 ಜೂನ್​ನಿಂದ ನವೆಂಬರ್ ನಡುವೆ ತಮ್ಮ ಮೂವರು ಪಿಎಚ್.ಡಿ ವಿದ್ಯಾರ್ಥಿಗಳೊಂದಿಗೆ ಸೇರಿಕೊಂಡು ಸಂಶೋಧನೆ ನಡೆಸಿದ್ದರು. ಸ್ಥಳೀಯ ಡೇರಿ ಫಾರ್ಮ್​ಗಳ ಸಹಿವಾಲ್, ಥಾರ್ಪರ್ಕರ್ ಮತ್ತು ವಿಂದವಾಣಿ (ಕ್ರಾಸ್ ಬ್ರೀಡ್) -ಈ ಮೂರು ಬಗೆಯ ಹಸುಗಳಲ್ಲಿ ಸಂಶೋಧನೆ ನಡೆಸಲಾಗಿತ್ತು. ಮಾನವರು ಮತ್ತು ಎಮ್ಮೆಗಳ ಮೂತ್ರವನ್ನು ಕೂಡ ಪರೀಕ್ಷೆಗೆ ಪರಿಗಣಿಸಲಾಗಿತ್ತು. ‘ಆರೋಗ್ಯವಂತ ಮಾನವರ ಮೂತ್ರದ ಗಣನೀಯ ಪ್ರಮಾಣದ ಸ್ಯಾಂಪಲ್​ನಲ್ಲಿ ಕೂಡ ರೋಗಕಾರಕ ಬ್ಯಾಕ್ಟೀರಿಯಾಗಳಿವೆ’ ಎಂದು ಸಿಂಗ್ ವಿವರಿಸಿದ್ದಾರೆ.

    ವ್ಯಾಪಕ ಭಾವನೆ: ತಾಜಾ ಗೋಮೂತ್ರಕ್ಕಿಂತ ಬಟ್ಟಿ ಇಳಿಸಿದ (ಡಿಸ್ಟಿಲ್ಡ್) ಗೋಮೂತ್ರದಲ್ಲಿ ಸೋಂಕುಕಾರಕ ಬ್ಯಾಕ್ಟೀರಿಯಾಗಳು ಇರುವುದಿಲ್ಲ ಎಂಬ ಭಾವನೆ ವ್ಯಾಪಕವಾಗಿದೆ. ಈ ವಿಚಾರದಲ್ಲಿ ಸಂಶೋಧನೆ ಮುಂದುವರಿದಿದೆ ಎಂದು ಸಿಂಗ್ ಹೇಳಿದ್ದಾರೆ. ಗೋಮೂತ್ರದಲ್ಲಿ ಬ್ಯಾಕ್ಟೀರಿಯಾ ನಿರೋಧಕ ಅಂಶಗಳಿವೆ ಎಂದು ಸಾರ್ವತ್ರಿಕಗೊಳಿಸಲು ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts