

ವಿಜಯವಾಣಿ ಸುದ್ದಿಜಾಲ ಕುಂದಾಪುರ
ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಮೂವತ್ತುಮುಡಿ ಸಮೀಪ ಹಾಳಾದ ಇಂಡಿಕೇಟರ್ ದೀಪವನ್ನು ದುರಸ್ತಿಗೊಳಿಸಲಾಗಿದ್ದು, ಕೊನೆಗೂ ವಾಹನ ಚಾಲಕರಿಗೆ ನೆಮ್ಮದಿ ದೊರೆತಿದೆ.
ಉಡುಪಿ ಜಿಲ್ಲೆಯ ಅತಿ ಉದ್ದದ ಸೇತುವೆಗಳಲ್ಲಿ ಒಂದಾದ ಕುಂದಾಪುರ ಸಮೀಪದ ಅರಾಟೆ ಸೇತುವೆ ದುರಸ್ತಿ ಉದ್ದೇಶದಿಂದ ಉಡುಪಿ ಜಿಲ್ಲಾಡಳಿತ ಎರಡು ತಿಂಗಳಿನಿಂದ ಸೇತುವೆ ಮೇಲೆ ವಾಹನ ಸಂಚಾರ ನಿಬರ್ಂಧಿಸಿದ್ದು, ಹೊಸ ಸೇತುವೆಯಲ್ಲಿ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಿಕೊಟ್ಟಿದೆ. ಹೀಗಾಗಿ ಹೊಸ ಸೇತುವೆಯಲ್ಲಿ ಕುಂದಾಪುರ ಮತ್ತು ಬೈಂದೂರು ಕಡೆ ಹೋಗುವ ವಾಹನಗಳು ಸಂಚರಿಸುತ್ತಿದ್ದು, ಹಳೇ ಸೇತುವೆ ಮೇಲೆ ವಾಹನಗಳು ಸಂಚರಿಸದಂತೆ ಮೂವತ್ತುಮುಡಿ ಮತ್ತು ಅರಾಟೆ ಸಮೀಪ ರಸ್ತೆ ತಿರುವು ನೀಡಲಾಗಿದೆ. ಎರಡೂ ಕಡೆಯಿಂದ ಬರುವ ವಾಹನಗಳಿಗೆ ರಸ್ತೆ ತಿರುವು ಇರುವುದು ತಿಳಿಯಲು ತಿರುವು ನೀಡಿದ ಸ್ಥಳದಲ್ಲಿ ಅಳವಡಿಸಲಾಗಿದ್ದ ಇಂಡಿಕೇಟರ್ ದೀಪ ಕೆಟ್ಟು ಹೋಗಿತ್ತು. ಇದರಿಂದ ರಾತ್ರಿ ವೇಳೆ ಸಂಚರಿಸುವ ವಾಹನ ಸವಾರರಿಗೆ ಕಂಟಕವಾಗುವ ಸಾಧ್ಯತೆಗಳಿತ್ತು.
ಮೂವತ್ತುಮುಡಿ ಮತ್ತು ಅರಾಟೆ ಬಳಿ ನಿರ್ಮಿಸಲಾದ ರಸ್ತೆ ತಿರುವು ಸಮೀಪ ಎರಡು ಪ್ರತ್ಯೇಕ ರಸ್ತೆ ಅಪಘಾತ ನಡೆದಿದ್ದು, ಓರ್ವ ಸಾವನ್ನಪ್ಪಿದ ಘಟನೆ ನಡೆದಿತ್ತು. ಈ ಬಗ್ಗೆ ವಿಜಯವಾಣಿ ವರದಿ ಪ್ರಕಟಿಸಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಗಮನ ಸೆಳೆದಿತ್ತು. ವರದಿ ಪ್ರಕಟಗೊಂಡ ಕೆಲವೇ ದಿನಗಳಲ್ಲಿ ಮೂವತ್ತುಮುಡಿ ಸಮೀಪದ ಇಂಡಿಕೇಟರ್ ದೀಪ ದುರಸ್ತಿಗೊಳಿಸಲಾಗಿದೆ.