

ಚಿತ್ರದುರ್ಗ: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಗುರುವಾರ ಚಿತ್ರದುರ್ಗದ ಅನು ಅಲಿಯಾಸ್ ಅನುಕುಮಾರ್ ಗುರುವಾರ ಪೊಲೀಸರಿಗೆ ಶರಣವಾಗಿದ್ದ. ಅನುಕುಮಾರ್ ಬಂಧನದ ವಿಚಾರ ತಿಳಿಯುತ್ತಿದ್ದಂತೆ ಅವರ ತಂದೆ ಚಂದ್ರಪ್ಪ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಸಿಹಿನೀರ ಹೊಂಡ ಏರಿಯಾದ ಅನುಕುಮಾರ್ 7ನೇ ಆರೋಪಿಯಾಗಿದ್ದ. ಪ್ರಕರಣದಲ್ಲಿ ಪುತ್ರ ಅನಿಲ್‌ಕುಮಾರ್ ಆಲಿಯಾಸ್ ಅನು ಹೆಸರು ನೆರೆಹೊರೆಯವರ ಮೂಲಕ ತಿಳಿದ ನಂತರ ದಿಗ್ಭ್ರಾಂತರಾಗಿದ್ದ ಚಂದ್ರಪ್ಪ ಅವರು ದಿಕ್ಕೇ ತೋಚದಂತಾಗಿ, ಕಂಗಾಲಾಗಿದ್ದರು. ತಾಯಿ ಜಯಮ್ಮ ಕೂಡ ಬಿಕ್ಕಿ-ಬಿಕ್ಕಿ ಅತ್ತು ಮಗನಿಗಾಗಿ ಮನೆಯ ಮುಂದೆ ಗೋಳಾಡಿದರು.
ದುಃಖದಲ್ಲಿ ಮುಳುಗಿದ್ದ ಚಂದ್ರಪ್ಪ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಕುಸಿದು ಬಿದ್ದಿದ್ದಾರೆ. ಲೊ-ಬಿಪಿ ಉಂಟಾಗಿದ್ದು, ಸಾರ್ವಜನಿಕರು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆಗೆ ಸ್ಪಂದಿಸದೆ, ಮೃತಪಟ್ಟಿದ್ದಾರೆ.
ಒಂದೆಡೆ ಪುತ್ರ ಪೊಲೀಸರ ಅತಿಥಿ, ಇದೇ ವಿಚಾರವಾಗಿ ನೊಂದು ಮೃತಪಟ್ಟ ಪತಿ. ಇದು ಜಯಮ್ಮ ಅವರಿಗೆ, ಅನು ಸಹೋದರ, ಸಹೋದರಿಗೆ ಬರಸಿಡಿಲು ಬಡಿದಂತಾಗಿದೆ. ಈ ಕುಟುಂಬವೀಗ ಶೋಕದಲ್ಲಿ ಮುಳುಗಿದೆ. ಚಂದ್ರಪ್ಪ ತಾಯಿ ರತ್ನಮ್ಮ ಅವರ ಆಕ್ರಂದನ ಕೂಡ ಮುಗಿಲುಮುಟ್ಟಿತ್ತು.