

ಮೈಸೂರು: ಕಾಂಗ್ರೆಸ್ ಎಂದಿಗೂ ಧ್ವೇಷದ ರಾಜಕಾರಣ ಮಾಡುವುದಿಲ್ಲ, ನಾವು ಈ ನೆಲದ ಕಾನೂನು ಪ್ರಕಾರ ನಡೆದುಕೊಳ್ಳುತ್ತೇವೆ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಮಾಜಿ ಸಂಸದ ಪ್ರಜ್ವಲ್ ರೇವಣ್ಣ, ನಟ ದರ್ಶನ್ ಪ್ರಕರಣಗಳಲ್ಲಿ ಸರ್ಕಾರ ಹಸ್ತಕ್ಷೇಪ ಮಾಡಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಪ್ರಕರಣ ನ್ಯಾಯಾಲಯದಲ್ಲಿ ಇದೆ. ನ್ಯಾಯಾಲಯದ ಆದೇಶದ ವಿಚಾರವಾಗಿ ನಾನು ಯಾವುದೇ ಪ್ರತಿಕ್ರಿಯೆ ನೀಡಲು ಬಯಸುವುದಿಲ್ಲ. ನಾವೇನಾದರು ಯಡಿಯೂರಪ್ಪ ವಿರುದ್ಧ ದೂರು ನೀಡಿದ್ದೇವಾ? ದೂರು ನೀಡಿದ್ದು ಸಂತ್ರಸ್ತೆಯ ತಾಯಿ. ಇದರಲ್ಲಿ ನಮ್ಮ ಹಸ್ತಕ್ಷೇಪ ಹೇಗೆ ಸಾಧ್ಯ? ನ್ಯಾಯಾಲಯ ನೀಡುವ ಆದೇಶವನ್ನು ಪ್ರತಿಯೊಬ್ಬರು ಪಾಲಿಸಬೇಕಾಗುತ್ತದೆ. ವಿರೋಧ ಪಕ್ಷದ ಎಲ್ಲ ಆರೋಪಗಳಿಗೆ ಉತ್ತರ ನೀಡುವ ಅವಶ್ಯಕತೆ ಇಲ್ಲ ಎಂದು ಬಿಜೆಪಿ ಹಾಗೂ ಜೆಡಿಎಸ್ ನಾಯಕರ ಟೀಕೆಗೆ ತಿರುಗೇಟು ನೀಡಿದರು.
ಶಾಮಿಯಾನ ಯಾಕೆ ಹಾಕಿದ್ದಾರೆ ಗೊತ್ತಿಲ್ಲ: ನಟ ದರ್ಶನ್ ಪ್ರಕರಣದ ವಿಚಾರಣೆಗೆ ಠಾಣೆ ಸುತ್ತ ಶಾಮಿಯಾನ ಹಾಕುವ ಅವಶ್ಯಕತೆ ಏನಿತ್ತು ಎಂಬುದು ನನಗೆ ಗೊತ್ತಿಲ್ಲ. ಯಾವ ಕಾರಣಕ್ಕೆ ಪೊಲೀಸರು ಈ ತೀರ್ಮಾನ ತೆಗೆದುಕೊಂಡಿದ್ದಾರೋ ಗೊತ್ತಿಲ್ಲ. ಅವರು ನಮ್ಮನ್ನು ಕೇಳಿಕೊಂಡು ಕೈಗೊಂಡ ತೀರ್ಮಾನ ಅಲ್ಲ ಅದು. ಇದರಿಂದ ಜನಸಾಮಾನ್ಯರಿಗೆ ತೊಂದರೆ ಆಗುತ್ತಿದೆ ಎಂದು ಯಾರು ಸಹ ನನಗೆ ದೂರು ನೀಡಿಲ್ಲ ಎಂದು ಹೇಳಿದರು.
ನಟ ದರ್ಶನ್ ಅವರನ್ನು ರಕ್ಷಿಸಲು ನನ್ನ ಬಳಿ ಯಾರು ಸಹ ಬಂದಿಲ್ಲ. ಬಿಜೆಪಿಯವರು ಬೇಕಂತಾ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ನಾವು ಈ ನೆಲದ ಕಾನೂನು ಪ್ರಕಾರ ನಡೆದುಕೊಳ್ಳುತ್ತಿದ್ದೇವೆ. ಕಾನೂನು ಬಿಟ್ಟು ಏನು ಮಾಡುವುದಿಲ್ಲ ಎಂದು ಹೇಳಿದರು.
ಮೈಸೂರಿನಲ್ಲಿ ನಮಗೆ ಹಿನ್ನಡೆಯಾಗಿರುವುದು ನಿಜ: ಲೋಕಸಭಾ ಚುನಾವಣೆಯಲ್ಲಿ ನಮ್ಮ ನಿರೀಕ್ಷೆಗೆ ತಕ್ಕಷ್ಟು ಸ್ಥಾನಗಳು ದೊರೆತ್ತಿಲ್ಲ. ಆದರೆ, ನಾವು ಕಳೆದ ಬಾರಿಗಿಂತ ಹೆಚ್ಚು ಸ್ಥಾನಗಳನ್ನು ಗೆದ್ದಿದ್ದೇವೆ. ಮೈಸೂರಿನಲ್ಲಿ ನಮಗೆ ಹಿನ್ನಡೆಯಾಗಿರುವುದು ನಿಜ. ಆದರೆ, ಮೈಸೂರು ಜಿಲ್ಲೆಯನ್ನು ಒಳಗೊಂಡಿರುವ ಚಾಮರಾಜನಗರ ಕ್ಷೇತ್ರದಲ್ಲಿ ಈ ಬಾರಿ ಗೆಲುವು ಸಾಧಿಸಿದ್ದೇವೆ. ಕಾಂಗ್ರೆಸ್‌ನ ಶೇಕಡವಾರು ಮತ ಗಳಿಕೆಯೂ ಹೆಚ್ಚಾಗಿದ್ದು, ಕಳೆದ ಬಾರಿಗಿಂತ ಶೇ.13 ರಷ್ಟು ಹೆಚ್ಚು ಮತ ಪಡೆದಿದ್ದೇವೆ ಎಂದರು.
ಗ್ಯಾರಂಟಿ ಯೋಜನೆ ನಿಲ್ಲಿಸುವ ಪ್ರಶ್ನೆಯೇ ಇಲ್ಲ : ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳು ಚುನಾವಣೆಗೋಸ್ಕರ ರೂಪಿಸಿದ ಯೋಜನೆಯಲ್ಲ. ಅದು ಬಡವರ ಪರವಾದ ಯೋಜನೆಯಾಗಿದೆ. ಈ ಯೋಜನೆಗಳು ಬಡವರಿಗೆ ಆರ್ಥಿಕ ಹಾಗೂ ಸಾಮಾಜಿಕವಾಗಿ ಶಕ್ತಿ ತುಂಬಿಸುತ್ತಿದೆ. ಹಾಗಾಗಿ ಯಾವುದೇ ಕಾರಣಕ್ಕೂ ಯೋಜನೆ ನಿಲ್ಲಿಸುವ ಪ್ರಶ್ನೆಯೇ ಇಲ್ಲ ಎಂದರು.
ಮುಂಗಾರು ದುರ್ಬಲಗೊಂಡಿದ್ದು, ಈ ಕುರಿತು ತಜ್ಞರೊಂದಿಗೆ ಚರ್ಚಿಸಿ ಮುಂದೆ ಏನು ಮಾಡಬೇಕು ಎಂಬ ಕುರಿತು ನಿರ್ಧಾರ ಕೈಗೊಳ್ಳಲಾಗುವುದು. ಮೋಡ ಬಿತ್ತನೆ ವಿಚಾರವಾಗಿ ಹೇಳಿಕೆ ನೀಡಲು ನಾನು ತಜ್ಞನಲ್ಲ. ಹಾಗಾಗಿ ತಜ್ಞರೊಂದಿಗೆ ಚರ್ಚಿಸಲಾಗುವುದು ಎಂದು ಹೇಳಿದರು. ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕರಣೆಯ 7ನೇ ವೇತನ ಆಯೋಗದ ಅನುಷ್ಠಾನದ ಕುರಿತು ಕೇಳಲಾದ ಪ್ರಶ್ನೆಗೆ ಸಿದ್ದರಾಮಯ್ಯ ಪ್ರತಿಕ್ರಿಯಿಸಲು ನಿರಾಕರಿಸಿದರು.