ರೇಣುಕಾಸ್ವಾಮಿ ಕೊಲೆ ಪ್ರಕರಣ; ದರ್ಶನ್ ಜಾಮೀನು ರದ್ದು ಅರ್ಜಿ ವಿಚಾರಣೆ ಏ.22ಕ್ಕೆ ಮುಂದೂಡಿಕೆ! Darshan

darshan bail case postponed
Published on

Darshan | ರೇಣುಕಾಸ್ವಾಮಿ ಕೊಲೆ ಆರೋಪ ಪ್ರಕರಣದಲ್ಲಿ ಈಗಾಗಲೇ ನಟ ದರ್ಶನ್​ ಜೈಲುವಾಸ ಅನುಭವಿಸಿ ಹೊರ ಬಂದಿದ್ದಾರೆ. ಆದರೆ ಜೈಲಿನಿಂದ ಹೊರಗಿದ್ದರೂ ಸಹ ದರ್ಶನ್​ಗೆ ನೆಮ್ಮದಿ ಇಲ್ಲದಂತಾಗಿದೆ. ರೇಣುಕಾ ಸ್ವಾಮಿ ಕೊಲೆ ಪ್ರಕರಣ ಸಂಬಂಧ ರಾಜ್ಯ ಸರ್ಕಾರ ಜಾಮೀನು ರದ್ದು ಕೋರಿ ಸುಪ್ರೀಂಕೋರ್ಟ್ ಮೊರೆ ಹೋಗಿತ್ತು. ಆದರೆ  ವಿಚಾರಣೆಯನ್ನು ಸುಪ್ರೀಂಕೋರ್ಟ್​ ಏಪ್ರಿಲ್ 22ಕ್ಕೆ ಮುಂದೂಡಿದೆ.

ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿಗಳು ಈಗಾಗಲೇ ಜಾಮೀನು ಪಡೆದು ಹೊರಗಿದ್ದಾರೆ. ರಾಜ್ಯ ಹೈಕೋರ್ಟ್ ಎಲ್ಲಾ ಆರೋಪಿಗಳಿಗೂ ಜಾಮೀನು ನೀಡಿದೆ. ಇದೀಗ ರಾಜ್ಯ ಪೊಲೀಸ್ ಇಲಾಖೆ ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಕೆಲ ಆರೋಪಿಗಳ ಜಾಮೀನು ರದ್ದು ಮಾಡಬೇಕೆಂದು ಕೋರಿ ಸುಪ್ರೀಂಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿದೆ.

ನಟ ದರ್ಶನ್ ಸೇರಿ ಏಳು ಆರೋಪಿಗಳ ಜಾಮೀನು ರದ್ದು ಕೋರಿ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿತ್ತು. ಇಂದು ಸುಪ್ರೀಂಕೋರ್ಟ್​ನಲ್ಲಿ ಪ್ರಕರಣದ ವಿಚಾರಣೆ ನಡೆಯಿತು. ರಾಜ್ಯದ ಪರವಾಗಿ ವಕೀಲ ಸಿದ್ಧಾರ್ಥ್ ಲೂಥ್ರಾ ಅವರು ಅರ್ಜಿ ಉಲ್ಲೇಖ ಮಾಡಿದರು. ಬಳಿಕ ನ್ಯಾಯಮೂರ್ತಿಗಳು ಪ್ರಕರಣದ ವಿಚಾರಣೆಯನ್ನು ಏಪ್ರಿಲ್ 22ಕ್ಕೆ ಮುಂದೂಡಿದರು. ಮುಂದಿನ ವಿಚಾರಣೆ ಏಪ್ರಿಲ್ 22ಕ್ಕೆ ನಡೆಯಲಿದ್ದು, ಸುಪ್ರೀಂಕೋರ್ಟ್​ನಲ್ಲಿ ದರ್ಶನ್ ಪರವಾಗಿ ವಕೀಲ ನಾಗೇಶ್ ವಕಾಲತ್ತು ವಹಿಸುವ ಸಾಧ್ಯತೆ ಇದೆ.

ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಹೈಕೋರ್ಟ್ ಡಿಸೆಂಬರ್ ತಿಂಗಳಲ್ಲಿ ದರ್ಶನ್, ಪವಿತ್ರಾ ಸೇರಿದಂತೆ ಹಲವು ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿತ್ತು. ಅದಕ್ಕೂ ಮುನ್ನ ನಟ ದರ್ಶನ್ ಅವರ ಬೆನ್ನು ನೋವಿನ ಚಿಕಿತ್ಸೆಗಾಗಿ ಮಧ್ಯಂತರ ಜಾಮೀನು ಮಂಜೂರು ಮಾಡಲಾಗಿತ್ತು. ಹೈಕೋರ್ಟ್​, ದರ್ಶನ್ ಹಾಗೂ ಇತರರಿಗೆ ಜಾಮೀನು ನೀಡಿದ ಬಳಿಕ ರಾಜ್ಯ ಪೊಲೀಸ್ ಇಲಾಖೆ ಗೃಹ ಇಲಾಖೆಯ ಅನುಮತಿ ಪಡೆದುಕೊಂಡು ಸುಪ್ರೀಂಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿದ್ದು, ಜಾಮೀನು ರದ್ದು ಮಾಡುವಂತೆ ಕೇಳಿಕೊಂಡಿದೆ.

Supreme Court

ದರ್ಶನ್ ಜಾಮೀನು ಸಿಗುತ್ತಿದ್ದಂತೆ ಸಿನಿಮಾ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ. ಇತ್ತೀಚೆಗಷ್ಟೆ ನ್ಯಾಯಾಲಯದ ಅನುಮತಿ ಪಡೆದುಕೊಂಡು ಡೆವಿಲ್​ ಸಿನಿಮಾ ಚಿತ್ರೀಕರಣಕ್ಕಾಗಿ ರಾಜಸ್ಥಾನಕ್ಕೆ ಹೋಗಿ ಬಂದರು. ರಾಜಸ್ಥಾನದಲ್ಲಿ ಚಿತ್ರೀಕರಣ ಮುಗಿಸಿ ಬೆಂಗಳೂರಿಗೆ ವಾಪಸ್ಸಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net