

| ಗೋವಿಂದರಾಜು ಚಿನ್ನಕುರ್ಚಿ ಬೆಂಗಳೂರು
ಕರೊನಾ ಸೋಂಕಿತರು ಆಸ್ಪತ್ರೆಯಲ್ಲಿ ಬೆಡ್, ಆಕ್ಸಿಜನ್ ಸೌಲಭ್ಯಕ್ಕಾಗಿ ಪರದಾಡುತ್ತಿರುವ ನಡುವೆಯೇ, ರೆಮ್ಡೆಸಿವಿರ್ ಚುಚ್ಚುಮದ್ದನ್ನು ದುಬಾರಿ ಬೆಲೆಗೆ ಕಾಳಸಂತೆಯಲ್ಲಿ ಮಾರಾಟ ಮಾಡುವ ಜಾಲ ರಾಜ್ಯದಲ್ಲಿ ಸಕ್ರಿಯವಾಗಿದೆ. ರೆಮ್ೆಸಿವಿರ್ ಜೀವರಕ್ಷಕ ಔಷಧವಲ್ಲ ಎಂದು ವೈದ್ಯರು ಮತ್ತು ಸರ್ಕಾರ ಹೇಳಿದರೂ ಜನರು ಕಾಳಸಂತೆಯಲ್ಲಿ ಇದನ್ನು ಖರೀದಿಸಲು ಯತ್ನಿಸಿ ಮೋಸ ಹೋಗುತ್ತಿದ್ದಾರೆ. ಸೋಂಕಿತರ ಅಸಹಾಯಕ ಪರಿಸ್ಥಿತಿಯನ್ನೇ ದುರ್ಬಳಕೆ ಮಾಡಿಕೊಂಡು 2500 ರೂ. ಬೆಲೆಯ ಇಂಜೆಕ್ಷನ್ಗೆ 35- 40 ಸಾವಿರ ರೂ. ಸುಲಿಗೆ ಮಾಡಲಾಗುತ್ತಿದೆ. ಪೊಲೀಸ್ ಇಲಾಖೆ ನಿರಂತರವಾಗಿ ಕಾರ್ಯಾಚರಣೆ ನಡೆಸುತ್ತಿದ್ದು, ರಾಜ್ಯದಲ್ಲಿ 50ಕ್ಕೂ ಅಧಿಕ ಪ್ರಕರಣಗಳಲ್ಲಿ ಅಂದಾಜು 122 ಆರೋಪಿಗಳನ್ನು ಈವರೆಗೆ ಬಂಧಿಸಿದ್ದಾರೆ. ಬೆಂಗಳೂರು ನಗರದಲ್ಲೇ ಅತಿ ಹೆಚ್ಚು ಪ್ರಕರಣಗಳು ವರದಿಯಾಗಿವೆ. ಮೊದಲು ರಾಜ್ಯದಲ್ಲಿ 5 ಏಜೆನ್ಸಿಗೆ ಮಾತ್ರ ರೆಮ್ಡೆಸಿವಿರ್ ಇಂಜೆಕ್ಷನ್ ಪೂರೈಕೆಗೆ ಅನುಮತಿ ನೀಡಲಾಗಿತ್ತು.
ಆದರೆ, ಕಾಳಸಂತೆಯಲ್ಲಿ ಹೆಚ್ಚು ಬೇಡಿಕೆ ಇರುವುದನ್ನು ತಿಳಿದು ಪ್ರಭಾವಿ ರಾಜಕಾರಣಿಗಳು ಮತ್ತು ಅಧಿಕಾರಿಗಳು ತಾವು ಹೇಳಿದ ಆಸ್ಪತ್ರೆಗಳಿಗೆ ಮತ್ತು ಮೆಡಿಕಲ್ ಶಾಪ್ಗೆ ಪೂರೈಕೆ ಮಾಡಿಸುತ್ತಿದ್ದರು. ಈ ವಿಷಯ ತಿಳಿದು ಸರ್ಕಾರವೇ ನೇರವಾಗಿ ಕಂಪನಿಯಿಂದ ರೆಮ್ಡೆಸಿವಿರ್ ಖರೀದಿ ಮಾಡಿ ಡ್ರಗ್ಸ್ ಕಂಟ್ರೋಲ್ ಬೋರ್ಡ್ನಿಂದ ಪೂರೈಕೆ ಮಾಡುತ್ತಿದೆ.
ರೋಗಿ ಹೆಸರಲ್ಲೇ ಕಳ್ಳಾಟ: ರೆಮ್ೆಸಿವಿರ್ ಮುಕ್ತ ಮಾರುಕಟ್ಟೆಯಲ್ಲಿ ಸಿಗುವುದಿಲ್ಲ. ಸರ್ಕಾರದ ವೆಚ್ಚದಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿ ಹೆಸರಿನಲ್ಲಿ ಆಸ್ಪತ್ರೆಗಳೇ ನೇರವಾಗಿ ಇಂಜೆಕ್ಷನ್ ಬುಕ್ ಮಾಡಿ ಡ್ರಗ್ ಕಂಟ್ರೋಲ್ ಬೋರ್ಡ್ನಿಂದ ತರಿಸಿಕೊಳ್ಳುತಿವೆ. ಎಲ್ಲರಿಗೂ ಔಷಧ ಕೊಡುವ ಅಗತ್ಯ ಇರುವುದಿಲ್ಲ. ಆದರೂ, ಎಲ್ಲರ ಹೆಸರಿನಲ್ಲಿ ಚುಚ್ಚುಮದ್ದು ತರಿಸಿಕೊಂಡು ಕೆಲವರಿಗೆ ಕೊಟ್ಟು ಉಳಿದ ಇಂಜೆಕ್ಷನ್ ಅನ್ನು ನರ್ಸ್ ಅಥವಾ ಹೌಸ್ಕೀಪಿಂಗ್ ನೌಕರರ ಮೂಲಕ ಕಾಳಸಂತೆಯಲ್ಲಿ ಮಾರಾಟಕ್ಕೆ ನೀಡಲಾಗುತ್ತಿದೆ. ಇವರು ಕೋವಿಡ್ ಆಸ್ಪತ್ರೆ ಬಳಿಗೆ ಬಂದು ಮಾರುತ್ತಿದ್ದಾರೆ. ಕೆಲ ವೈದ್ಯರೇ ಕಾಳಸಂತೆಕೋರರಿಗೆ ಸಂಪರ್ಕ ಕಲ್ಪಿಸುತ್ತಿದ್ದಾರೆ. ಕೆಲವರು ಕಾಳಸಂತೆಯಲ್ಲಿ ಔಷಧ ತಂದು ಬಳಕೆ ಮಾಡುತ್ತಿದ್ದಾಗ ರೋಗಿ ಮೃತಪಟ್ಟರೆ ಉಳಿಕೆ ರೆಮ್ಡೆಸಿವಿರ್ನ್ನು ಮತ್ಯಾರಿಗೋ ಮಾರಾಟ ಮಾಡುತ್ತಾರೆ. ಇದರಿಂದ ಪೊಲೀಸರು ಸಂಪೂರ್ಣವಾಗಿ ಅಕ್ರಮ ತಡೆಗಟ್ಟಲು ಸಾಧ್ಯವಾಗುತ್ತಿಲ್ಲ.
ನಕಲಿ ಔಷಧ ಬಗ್ಗೆ ಎಚ್ಚರ: ಕಾಳಸಂತೆಯಲ್ಲಿ ನಕಲಿ ರೆಮ್ಡೆಸಿವಿರ್ ಔಷಧವೂ ಮಾರಾಟವಾಗುತ್ತಿದೆ. ಇತ್ತೀಚೆಗೆ ಖಾಸಗಿ ಆಸ್ಪತ್ರೆ ಹೌಸ್ಕೀಪಿಂಗ್ ವ್ಯವಸ್ಥಾಪಕ, ಆಸ್ಪತ್ರೆಯಲ್ಲಿ ಬಳಸಿ ಖಾಲಿಯಾಗಿದ್ದ ಬಾಟಲ್ಗೆ ಎನ್ಎಸ್ ಔಷಧ ತುಂಬಿ ಪೆವಿಕಾಲ್ ಹಾಕಿ ಸೀಲ್ ಮಾಡಿ ಮಾರಾಟ ಮಾಡುತ್ತಿದ್ದ ಸಂಗತಿ ಬೆಳಕಿಗೆ ಬಂದಿತ್ತು. ಇದು ವೈದ್ಯರಿಗೂ ಪತ್ತೆಹಚ್ಚಲು ಸಾಧ್ಯವಾಗುವುದಿಲ್ಲ. ಮಾರಾಟಗಾರರಿಗೂ ಭಯ ಇರುವುದಿಲ್ಲ.
ರೆಮ್ಡೆಸಿವಿರ್ ಬಳಕೆ ಯಾವಾಗ?: ರೆಮ್ಡೆಸಿವಿರ್ ಚುಚ್ಚುಮದ್ದು ಪ್ರಾಯೋಗಿಕ, ತನಿಖಾ ಹಂತದ ಔಷಧ. ತುರ್ತು ವೇಳೆ ಮಾತ್ರ ಬಳಕೆಗೆ ಅವಕಾಶವಿದೆ. ಇದು ಕೋವಿಡ್ ಸೋಂಕಿಗೆ ಜೀವರಕ್ಷಕ ಔಷಧವಲ್ಲ. ರೆಮ್ೆಸಿವಿರ್ ಬಳಕೆಯಿಂದ ಮರಣ ಪ್ರಮಾಣ ಕಡಿಮೆಯಾಗಿದೆ ಎನ್ನುವುದಕ್ಕೆ ಪುರಾವೆಗಳಿಲ್ಲ. ಆಸ್ಪತ್ರೆಯಲ್ಲಿ ವೈದ್ಯರ ನಿಗಾದಲ್ಲಿರುವ ರೋಗಿಗಳು ಮಾತ್ರ ಇದನ್ನು ಪಡೆಯಬೇಕು. ಆಮ್ಲಜನಕ ಪಡೆಯುತ್ತಿರುವ ಸೋಂಕಿತರಿಗೆ ಮಾತ್ರ ಬಳಕೆ ಮಾಡಲಾಗುತ್ತಿದೆ. ಇದನ್ನು ಮನೆಯಲ್ಲಿ ಸ್ವಇಚ್ಛೆಯಿಂದ ಪಡೆಯಬಾರದು. ವೈದ್ಯರು ಸಹ ಲಿಖಿತವಾಗಿ ಚೀಟಿಯಲ್ಲಿ ಬರೆದು ಕೊಡಬಾರದು ಎಂದು ಸರ್ಕಾರವೇ ಸ್ಪಷ್ಟಪಡಿಸಿದೆ.
ಆರೋಗ್ಯ ಸೇವಕರೇ ಜಾಸ್ತಿ: ರೆಮ್ಡೆಸಿವಿರ್ ಕಾಳಸಂತೆ, ನಕಲಿ ದಂಧೆಯಲ್ಲಿ ಆರೋಗ್ಯ ಸೇವಕರೇ ಹೆಚ್ಚು ಭಾಗಿಯಾಗಿರುವ ವಿಚಾರ ಬೆಳಕಿಗೆ ಬಂದಿದೆ. ಆಸ್ಪತ್ರೆ ನರ್ಸ್ಗಳು, ಡಯಾಗ್ನಾಸ್ಟಿಕ್ ಸೆಂಟರ್ ಸಿಬ್ಬಂದಿ, ಔಷಧ ಅಂಗಡಿ, ಔಷಧ ಸರಬರಾಜು ಏಜೆನ್ಸಿ ನೌಕರರು ಹೆಚ್ಚು ಬಂಧನಕ್ಕೆ ಒಳಗಾಗಿದ್ದಾರೆ. ಕೆಲ ಪ್ರಕರಣದಲ್ಲಿ ವೈದ್ಯರೂ ಸಹ ಕೈ ಜೋಡಿಸಿ ಜೈಲು ಸೇರಿದ್ದಾರೆ.
ರೆಮ್ಡೆಸಿವಿರ್ ಚುಚ್ಚುಮದ್ದು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಸಿಕ್ಕರೆ ಪೊಲೀಸರಿಗೆ ತಿಳಿಸಿ. ಹೆಚ್ಚು ಬೆಲೆ ಕೊಟ್ಟು ಖರೀದಿಸಬೇಡಿ. ನಕಲಿ ಔಷಧವೂ ಮಾರಾಟವಾಗುತ್ತಿದ್ದು, ಈ ಬಗ್ಗೆಯೂ ಎಚ್ಚರಿಕೆ ಇರಲಿ.
| ಸಂದೀಪ್ ಪಾಟೀಲ್, ಜಂಟಿ ಪೊಲೀಸ್ ಆಯುಕ್ತ (ಅಪರಾಧ)