

ನವದೆಹಲಿ: ಅಮೆರಿಕದ ಮುಂಚೂಣಿ ಟೆಕ್ ಕಂಪನಿ ಕ್ವಾಲ್ಕಾಮ್ ಮತ್ತು ಭಾರತದ ಮುಂಚೂಣಿಯ ಟೆಲಿಕಾಂ ಸಂಸ್ಥೆ ರಿಲಯನ್ಸ್ ಜಿಯೋ 1 ಜಿಬಿಪಿಎಸ್ಗೂ ಅಧಿಕ ವೇಗದಲ್ಲಿ ಸೇವೆ ಒದಗಿಸುವ 5ಜಿ ತಂತ್ರಜ್ಞಾನವನ್ನು ಅಮೆರಿಕದಲ್ಲಿ ಯಶಸ್ವಿಯಾಗಿ ಪರೀಕ್ಷಿಸಿದೆ. ಪ್ರಸ್ತುತ ಅಮೆರಿಕ, ದಕ್ಷಿಣ ಕೊರಿಯಾ, ಆಸ್ಟ್ರೇಲಿಯಾ, ಸ್ವಿಜರ್ಲೆಂಡ್ ಮತ್ತು ಜರ್ಮನಿಯಂಥ ಕೆಲವು ದೇಶಗಳಲ್ಲಿ ಮಾತ್ರವೇ 5 ಜಿ ಗ್ರಾಹಕರಿಗೆ ಜಿಬಿಪಿಎಸ್ ವೇಗದ ಸೇವೆಯನ್ನು ಟೆಲಿಕಾಂ ಕಂಪನಿಗಳು ನೀಡುತ್ತಿವೆ ಎಂದು ಜಿಯೋ ಘಟಕದ ಅಧ್ಯಕ್ಷ ಮ್ಯಾಥ್ಯೂ ಉಮ್ಮನ್ ಹೇಳಿದ್ದಾರೆ.
ಅಮೆರಿಕದ ಸ್ಯಾನ್ ಡಿಯಾಗೋದಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಬಗ್ಗೆ ಮಾಹಿತಿ ನೀಡಲಾಗಿದ್ದು, ಬಳಕೆದಾರರಿಗೆ ಸೂಪರ್ಫಾಸ್ಟ್ 1 ಜಿಬಿಪಿಎಸ್ ವೇಗದ ಸೇವೆ ಒದಗಿಸುವ ಗುರಿಯನ್ನು ಜಿಯೋ ಹೊಂದಿದೆ. ಜಿಯೋ ಹಾಗೂ ಕ್ವಾಲ್ಕಾಮ್ ಸಂಸ್ಥೆ ಭಾರತದಲ್ಲಿ ಸ್ಥಳೀಯ 5ಜಿ ನೆಟ್ವರ್ಕ್ ಮೂಲಸೌಕರ್ಯ ಸೌಲಭ್ಯ ಮತ್ತು ಸೇವೆಗಳ ತ್ವರಿತ ಅಭಿವೃದ್ಧಿ ಮತ್ತು ಅನುಷ್ಠಾನಕ್ಕಾಗಿ ಕೆಲಸ ಮಾಡುತ್ತಿವೆ. ಕ್ವಾಲ್ಕಾಮ್ ಸಹಯೋಗದೊಂದಿಗೆ 5ಜಿ ರಾನ್ ರೇಡಿಯೊ ಆಕ್ಸೆಸ್ ನೆಟ್ವರ್ಕ್ ಅನ್ನು ಅಭಿವೃದ್ಧಿಪಡಿಸಲಾಗಿದೆ. ಅದರಲ್ಲೂ ಜಿಬಿಪಿಎಸ್ ವೇಗವನ್ನು ಪಡೆಯಬಹದು ಎಂದು ತಿಳಿಸಿದೆ.
ಈ ವರ್ಷದ ಆರಂಭದಲ್ಲಿ 730 ಕೋಟಿ ರೂ. ಹೂಡಿಕೆಯೊಂದಿಗೆ ರಿಲಯನ್ಸ್ ಜಿಯೋದಲ್ಲಿನ ಶೇ.0.15ರಷ್ಟು ಪಾಲನ್ನು ಕ್ವಾಲ್ಕಾಮ್ ಖರೀದಿಸಿದೆ. ಈ ಪ್ರಯೋಗ ಯಶಸ್ವಿಯಾಗುವುದರೊಂದಿಗೆ ಶೀಘ್ರವೇ ಭಾರತದಲ್ಲೂ 5ಜಿ ನೆಟ್ವರ್ಕ್ ಕೆಲಸ ಶುರುವಾಗುವ ನಿರೀಕ್ಷೆ ಇದೆ. (ಏಜೆನ್ಸೀಸ್)