ಉಜ್ಜಯಿನಿ ಶ್ರೀಶೈಲ ಕಾಶೀ ಜಗದ್ಗುರುಗಳಿಂದ ವೀರಶೈವ ಪಂಚಸೂತ್ರಾಣಿ ಕೃತಿ ಬಿಡುಗಡೆ

pancha
Published on

ಬೆಂಗಳೂರು: ವೀರಶೈವ ಸಿದ್ಧಾಂತದ ದಾರ್ಶನಿಕ ವಿಚಾರಗಳನ್ನು ಪ್ರತಿಪಾದಿಸುವ ಕಾಶೀ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ರಚಿಸಿರುವ ‘ವೀರಶೈವ ಪಂಚಸೂತ್ರಾಣಿ’ ಗ್ರಂಥವು ಬುಧವಾರ ಲೋಕಾರ್ಪಣೆಯಾಯಿತು.

ವಿಜಯನಗರದ ಶ್ರೀಬಸವೇಶ್ವರ ಸುಜ್ಞಾನ ಮಂಟಪದಲ್ಲಿ ಶ್ರೀ ಜಗದ್ಗುರು ವಿಶ್ವಾರಾಧ್ಯ ಜನಕಲ್ಯಾಣ ಪ್ರತಿಷ್ಠಾನದ ಆಯೋಜಿಸಿದ್ದ ಸಮಾರಂಭದಲ್ಲಿ ಶ್ರೀ ಉಜ್ಜಯಿನಿ ಜಗದ್ಗುರು ಸಿದ್ಧಲಿಂಗ ರಾಜದೇಶೀಕೇಂದ್ರ ಶಿವಾಚಾರ್ಯ ಭಗವತ್ಪಾದರು, ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು, ಕಾಶೀ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಹಾಗೂ ಡಾ.ಮಲ್ಲಿಕಾರ್ಜುನ ವಿಶ್ವಾರಾಧ್ಯ ಭಗವತ್ಪಾದರು ಸಾನ್ನಿಧ್ಯ ವಹಿಸಿದ್ದರು.

ಸಮಾರಂಭದಲ್ಲಿ ಆಶೀರ್ವಚನ ನೀಡಿದ ಉಜ್ಜಯಿನಿ ಜಗದ್ಗುರುಗಳು, ವೀರಶೈವ ಸಿದ್ಧಾಂತಕ್ಕೆ ದಾರ್ಶನಿಕ ಮಹತ್ವವನ್ನು ಒದಗಿಸಿ ಕೊಡುವಲ್ಲಿ ವೀರಶೈವ ಪಂಚಸೂತ್ರಾಣಿ ಗ್ರಂಥ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ. ಇಂತಹ ಕಾರ್ಯವನ್ನು ಮಾಡಿದ ಕಾಶೀ ಜಗದ್ಗುರುಗಳಿಗೆ ಸಮಾಜ ಎಂದೆಂದೂ ಋಣಿಯಾಗಿರಬೇಕು. ವೀರಶೈವ ಸೂತ್ರ-ಗೋತ್ರಗಳ ಬಗ್ಗೆ ಬಹಳ ಸಂಕ್ಷಿಪ್ತವಾದ ಸಾಹಿತ್ಯವಿತ್ತು. ಅದನ್ನು ವಿಸ್ತೃತಗೊಳಿಸಿ ಶಾಸೀಯವಾಗಿ ಪ್ರತಿಪಾದಿಸುವಲ್ಲಿ ಕಾಶೀ ಜಗದ್ಗುರುಗಳ ಬಹು ವರ್ಷದ ಶ್ರಮ ಎದ್ದು ಕಾಣುತ್ತದೆ ಎಂದರು.

ಶ್ರೀಶೈಲ ಜಗದ್ಗುರುಗಳು ತಮ್ಮ ಆಶೀರ್ವಚನದಲ್ಲಿ, ಜಗದ್ಗುರು ಪಂಚಾಚಾರ್ಯರ ಪಂಚಸೂತ್ರಗಳು ಜಗತ್ತಿನ ಆದಿ ಸೂತ್ರಗಳಾಗಿದ್ದು, ಹುಟ್ಟಿದ ಜೀವಾತ್ಮ, ಪರಮಾತ್ಮನ ಸ್ವರೂಪವಾಗಲು ಬೇಕಾದ ಶಿವಾದ್ವೆತ ಸಿದ್ಧಾಂತದ ಸಾರ ಸಂಗ್ರಹವಾಗಿದ್ದು, ಕೇವಲ ಪಟದಲ್ಲಿದ್ದ ಸೂತ್ರಗಳನ್ನು ಕಾಶೀ ಜಗದ್ಗುರುಗಳು ಭಕ್ತರ ಸ್ಮತಿಪಟಲಕ್ಕೆ ಶಾಶ್ವತವಾಗಿ ನೀಡಿದ್ದಾರೆ. ಈ ಕಾರಣಕ್ಕೆ ಜಗದ್ಗುರುಗಳ ಕಾರ್ಯ ಶಾಶ್ವತವಾಗಿದೆ ಎಂದರು.

ಗ್ರಂಥ ಬಿಡುಗಡೆಗೂ ಮುನ್ನ ಜಗದ್ಗುರು ಪಂಚಪೀಠಾಧೀಶ್ವರರ ಅಡ್ಡಪಲ್ಲಕ್ಕಿ ಮಹೋತ್ಸವ ನಡೆಯಿತು. ಸಮಾರಂಭದಲ್ಲಿ ಕೆರೂರು,ಶಿವಗಂಗೆ, ವಿಭೂತಿಪುರ, ಕೊಟ್ಟೂರು, ಶಹಾಪುರ, ನಾಗಣಸೂರ ಮಠದ ಶ್ರೀಗಳು ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಬಿ.ಎಸ್.ಪರಮಶಿವಯ್ಯ, ಪ್ರತಿಷ್ಠಾನದ ಉಪಾಧ್ಯಕ್ಷರಾದ ಬಿ.ಎಸ್.ಚನ್ನಬಸವಾರಾಧ್ಯ, ಎಂ.ಮಾದಯ್ಯ, ಕಾರ್ಯದರ್ಶಿ ಡಾ.ಸಿ.ಯು.ಉಮಾದೇವಿ, ಸಹ ಕಾರ್ಯದರ್ಶಿ ಕೆ.ಎಸ್.ಗಾಯತ್ರಿ, ಪೋಷಕ ಮಂಡಳಿ ಸದಸ್ಯರಾದ ಡಾ.ಸಿ.ಶಿವಕುಮಾರಸ್ವಾಮಿ, ಕೋ.ರಂ.ಬಸವರಾಜ್, ಶಾಂತ ವಿ.ಗೌಡ್, ಪ್ರಣವ್ ಜಯಲಿಂಗಪ್ಪ, ಜಯಂತ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

"ಸೂತ್ರಗಳು ಕಡಿಮೆ ಅಕ್ಷರಗಳಿಂದ ಕೂಡಿದ್ದರೂ, ಸಮಗ್ರ ಸಿದ್ಧಾಂತದ ಸಾರ ರೂಪವಾಗಿರುತ್ತವೆ. ಆ ನಿಟ್ಟಿನಲ್ಲಿ ಜಗತ್ತಿಗೆ ಬಂದಿರುವ ಎಲ್ಲ ಸೂತ್ರಗಳಿಗಿಂತ ಮೊದಲು ಜಗದ್ಗುರು ಪಂಚಾಚಾರ್ಯರು ಐದು ಮಹಾಸೂತ್ರಗಳನ್ನು ಬೋದಿಸಿದ್ದಾರೆ. ಪಡ್ವಿಡಿ, ವೃಷ್ಟಿ, ಲಂಬನ, ಮುಕ್ತಾಗುಚ್ಛ, ಪಂಚವರ್ಣ ಸೂತ್ರಗಳ ಮೂಲಕ ಜೀವಾತ್ಮ, ಪರಮಾತ್ಮ, ಜಗತ್ತು, ಬಂಧ ಮತ್ತು ಮೋಕ್ಷದ ಕುರಿತು ದಾರ್ಶನಿಕ ವಿಚಾರಗಳನ್ನು ತಿಳಿಸಿದ್ದಾರೆ. ಆ ಸೂತ್ರಗಳ ವ್ಯಾಖ್ಯಾನದ ವಿಸ್ತೃತ ಗ್ರಂಥ ‘ವೀರಶೈವ ಪಂಚಸೂತ್ರಾಣಿ’"

-ಡಾ.ಚಂದ್ರಶೇಖರ ಭಗವತ್ಪಾದರು, ಕಾಶೀ ಜಗದ್ಗುರುಗಳು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net