

ನಿಜಾಮಾಬಾದ್(ತೆಲಂಗಾಣ): ಮದುವೆಗೆ ಬಂದವರಿಗೆ ಬಾಡೂಟ ಹಾಕುವ ಪದ್ಧತಿ ಹಲವು ಸಮುದಾಯಗಳಲ್ಲಿದೆ. ಅದೇ ರೀತಿಯ ಸಂಪ್ರದಾಯವಿದ್ದ ನಿಜಾಮಾಬಾದ್ನ ನಂದಿಪೇಟೆ ಮಂಡಲದ ಯುವಕನೊಬ್ಬ ನವಿಪೇಟೆಯ ಯುವತಿಯನ್ನು ಛತ್ರದಲ್ಲಿ ಅದ್ಧೂರಿಯಾಗಿ ಮದುವೆಯಾದ.
ಮದುವೆಮಂಟಪದಲ್ಲಿ ಭರ್ಜರಿ ಬಾಡೂಟವೂ ಇತ್ತು. ಆದರೆ, ವರನ ಪರವಾಗಿ ಬಂದ ಕೆಲ ಯುವಕರು ಕುರಿ ಮಾಂಸದ ಪೀಸ್ಗಳನ್ನು ಹಾಕಿಲ್ಲ ಎಂದು ಅಡುಗೆ ಬಡಿಸುತ್ತಿದ್ದವರೊಂದಿಗೆ ಜಗಳವಾಡಿದ್ದಾರೆ. ಆಗ ವಧುವಿನ ಸಂಬಂಧಿಕರು ಅವರನ್ನು ಸಮಾಧಾನಪಡಿಸಲು ಪ್ರಯತ್ನಿಸಿದ್ದಾರೆ. ಆದರೆ ಈ ಸಂದರ್ಭದಲ್ಲಿ ಮಾತಿಗೆ ಮಾತು ಬೆಳೆದು ಎರಡೂ ಕಡೆಯವರು ಕೈ ಕೈ ಮಿಲಾಯಿಸಿಕೊಂಡಿದ್ದಾರೆ.
ಕೊನೆಗೆ ಉಭಯ ಗುಂಪುಗಳು ಅಡುಗೆ ಸೌದೆ ಮತ್ತು ಕೋಲುಗಳಿಂದ ಪರಸ್ಪರ ಹಲ್ಲೆ ನಡೆಸಿದ್ದಾರೆ. ಇದರಿಂದ ಇಡೀ ಪ್ರದೇಶ ರಣರಂಗವಾಗಿ ಮಾರ್ಪಟ್ಟಿದೆ. ಘರ್ಷಣೆಯಲ್ಲಿ ಹಲವರಿಗೆ ತಲೆಗೆ ಪೆಟ್ಟು ಬಿದ್ದು ರಕ್ತಸ್ರಾವವಾಗಿದೆ. ವಿಷಯ ತಿಳಿದ ಪೊಲೀಸರು ಕೂಡಲೇ ಸ್ಥಳಕ್ಕೆ ಆಗಮಿಸಿ ಎರಡೂ ಕಡೆಯವರನ್ನು ಬಂಧಿಸಿದ್ದಾರೆ.
ಗಾಯಾಳುಗಳನ್ನು ನಿಜಾಮಾಬಾದ್ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ವರನ ಕಡೆಯ 11 ಮಂದಿ ಹಾಗೂ ವಧುವಿನ ಕಡೆಯ ಆರು ಮಂದಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.