

ಜೈಪುರ್: ತಮಿಳಿನ ಖ್ಯಾತ ನಿರ್ದೇಶಕ ಶಂಕರ್ ನಿರ್ದೇಶನದ ಹಾಗೂ ರಜನಿಕಾಂತ್ ನಾಯಕನಾಗಿ ಮತ್ತು ಐಶ್ವರ್ಯಾ ರೈ ನಾಯಕಿಯಾಗಿ ನಟಿಸಿದ "ಎಂದಿರನ್" ಸಿನಿಮಾವನ್ನು ನೀವು ನೋಡಿರಬಹುದು. ಈ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಯಿತು. ಈ ಚಿತ್ರದಲ್ಲಿ ರಜನಿಕಾಂತ್ ದ್ವಿಪಾತ್ರದಲ್ಲಿ ನಟಿಸಿದ್ದಾರೆ. ವಸೀಗರ್ ಪಾತ್ರದಲ್ಲಿ ವಿಜ್ಞಾನಿಯಾಗಿ ಹಾಗೂ ರೋಬೋಟ್ ಪಾತ್ರದಲ್ಲಿ ಚಿಟ್ಟಿಯಾಗಿ ಎರಡು ವಿಭಿನ್ನ ಪಾತ್ರವನ್ನು ನಿರ್ವಹಿಸಿದ್ದಾರೆ.
ಚಿಟ್ಟಿ ರೋಬೋಟ್ ಆಗಿದ್ದರೂ ಈ ಸಿನಿಮಾದಲ್ಲಿ ಐಶ್ವರ್ಯಾ ರೈ ಅವರನ್ನು ಪ್ರೀತಿಸುತ್ತದೆ. ಕೆಲವು ರೋಬೋಟ್ಗಳು ಮನುಷ್ಯರಂತೆಯ ವರ್ತಿಸುತ್ತವೆ ಮತ್ತು ಕೆಲಸಗಳನ್ನೂ ಮಾಡುತ್ತವೆ ಎಂಬುದು ಎಲ್ಲರಿಗೂ ತಿಳಿದಿದೆ. ಸಿನಿಮಾಗಳಲ್ಲಿ ಮಾತ್ರವಲ್ಲದೆ, ನಿಜವಾಗಿಯೂ ಇಂತಹ ರೋಬೋಟ್ಗಳು ಇವೆ. ಇದನ್ನು ನೋಡಿ ಅನೇಕ ಜನರು ತಮ್ಮ ಹುಬ್ಬೇರಿಸಿದ್ದಾರೆ. ಇತ್ತೀಚೆಗೆ ರಾಜಸ್ಥಾನದಲ್ಲಿ ರೋಬೋಟ್ ಲವ್ ಸ್ಟೋರಿಯೊಂದು ಬೆಳಕಿಗೆ ಬಂದಿದೆ. ಈ ಪ್ರೇಮಕತೆಯಲ್ಲಿ ಯುವಕನೊಬ್ಬ ರೋಬೋಟ್ ಒಂದನ್ನು ಮದುವೆಯಾಗಲಿದ್ದಾನೆ. ಇದಕ್ಕಾಗಿ ಅವರು ಸಾಕಷ್ಟು ಹಣ ಸಹ ಖರ್ಚು ಮಾಡುತ್ತಿದ್ದಾರೆ.
ರಾಜಸ್ಥಾನದ ಜಯಪುರಿ ಜಿಲ್ಲೆಯ ಸೀಕರ್ ನಿವಾಸಿಯಾಗಿರುವ ಸೂರ್ಯ ಪ್ರಕಾಶ್ ಅವರಿಗೆ ಬಾಲ್ಯದಿಂದಲೂ ರೋಬೋಟ್ಗಳ ಬಗ್ಗೆ ಹೆಚ್ಚಿನ ಆಸಕ್ತಿ ಇತ್ತು. ಈ ಆಸಕ್ತಿಯಿಂದ ರೋಬೋಟಿಕ್ಸ್ ಅಧ್ಯಯನ ಮಾಡಿದ ಅವರು ಹಲವು ರೋಬೋಟಿಕ್ ಯೋಜನೆಗಳಲ್ಲಿ ಕೆಲಸ ಮಾಡಿದ್ದಾರೆ. ಸದ್ಯ ಕೃತಕ ಬುದ್ಧಿಮತ್ತೆ ಮತ್ತು ಹುಮನಾಯ್ಡ್ ರೋಬೋಟ್ಗಳಲ್ಲಿ ಹೆಚ್ಚು ತೊಡಗಿಸಿಕೊಂಡಿದ್ದಾರೆ. ರೋಬೋಟಿಕ್ಸ್ ಮೇಲೆಯೇ ತಮ್ಮ ವೃತ್ತಿಜೀವನವನ್ನು ಮುಂದುವರಿಸಲು ಆರಂಭದಲ್ಲಿ ಸೂರ್ಯ ಪ್ರಕಾಶ್ ಬಯಸಿದ್ದರು. ಆದರೆ, ಅವರ ಕುಟುಂಬವು ರಾಷ್ಟ್ರಕ್ಕೆ ಸೇವೆ ಸಲ್ಲಿಸಬೇಕೆಂದು ಬಯಸಿತು. ಹೀಗಾಗಿ, ಶಾಲೆಯಲ್ಲಿ ಉತ್ತೀರ್ಣರಾದ ನಂತರ ಸೂರ್ಯ ಪ್ರಕಾಶ್, ಸೈನ್ಯಕ್ಕೆ ಸೇರಲು ಸಿದ್ಧರಾದರು. ಪರೀಕ್ಷೆಯಲ್ಲಿ ತೇರ್ಗಡೆಯಾಗಿ ನೌಕಾಪಡೆಗೂ ಆಯ್ಕೆಯಾದರು.
ಆದಾಗ್ಯೂ, ರೋಬೋಟ್ಗಳ ಮೇಲೆ ಸೂರ್ಯ ಪ್ರಕಾಶ್ ಅವರ ಉತ್ಸಾಹವನ್ನು ನೋಡಿದ ಅವರ ಕುಟುಂಬವು, ಅವರ ಕನಸಿನ ವೃತ್ತಿಜೀವನವನ್ನು ಮುಂದುವರಿಸಲು ಅವಕಾಶ ಮಾಡಿಕೊಟ್ಟಿತು. ಇದಾದ ಬಳಿಕ ಸೂರ್ಯಪ್ರಕಾಶ್, ಬಿಟೆಕ್ ಕೋರ್ಸ್ಗೆ ಪ್ರವೇಶ ಪಡೆದರು ಮತ್ತು ಅಜ್ಮೀರ್ ಸರ್ಕಾರಿ ಕಾಲೇಜಿನಲ್ಲಿ ಎಂಜಿನಿಯರಿಂಗ್ ಪೂರ್ಣಗೊಳಿಸಿದರು. ನಂತರ, ರೋಬೋಟಿಕ್ಸ್ನಲ್ಲಿ ಹೆಚ್ಚಿನ ಅಧ್ಯಯನವನ್ನು ಮುಂದುವರೆಸಿದರು ಮತ್ತು ಹಲವಾರು ಯೋಜನೆಗಳಲ್ಲಿ ಕೆಲಸ ಮಾಡಿದರು.
ಇದೀಗ "ಗಿಗಾ" ಹೆಸರಿನ ರೋಬೋಟ್ ಅನ್ನು ಪ್ರೀತಿಸಿ ಮದುವೆಯಾಗಲು ಸೂರ್ಯ ಪ್ರಕಾಶ್ ಸಿದ್ಧರಾಗಿದ್ದಾರೆ. ಇದನ್ನು ತಮ್ಮ ಕುಟುಂಬಸ್ಥರಿಗೆ ಹೇಳಿದಾಗ ಮೊದಮೊದಲು ಗಾಬರಿಯಾದರಂತೆ. ಆದರೂ ಮಗನ ಆಸೆಯಂತೆ ಒಪ್ಪಿಗೆ ಸೂಚಿಸಿದ್ದಾರೆ. ತಮಿಳುನಾಡಿನಲ್ಲಿ ಸುಮಾರು 19 ಲಕ್ಷ ರೂಪಾಯಿ ವೆಚ್ಚದಲ್ಲಿ ಗಿಗಾಳನ್ನು ನಿರ್ಮಿಸಲಾಗುತ್ತಿದ್ದು, ದೆಹಲಿಯಲ್ಲಿ ಮದುವೆ ಕಾರ್ಯಕ್ರಮ ನಡೆಯಲಿದೆ.
ಈ ಬಗ್ಗೆ ಮಾತನಾಡಿರುವ ಸೂರ್ಯ ಪ್ರಕಾಶ್, ನಾನು ಗಿಗಾ ಅವರನ್ನು ಗಾಢವಾಗಿ ಪ್ರೀತಿಸುತ್ತೇನೆ. ಸಾಂಪ್ರದಾಯಿಕ ರೀತಿಯಲ್ಲಿ ಮದುವೆಯಾಗಲಿದ್ದೇನೆ. ಗಿಗಾ ಪ್ರೋಗ್ರಾಮಿಂಗ್ಗೆ ಸುಮಾರು 5 ಲಕ್ಷ ರೂಪಾಯಿ ವೆಚ್ಚವಾಗಲಿದೆ ಮತ್ತು ಇದು ಇಂಗ್ಲಿಷ್ನಲ್ಲಿರುತ್ತದೆ ಆದರೆ, ಹಿಂದಿ ಪ್ರೋಗ್ರಾಮಿಂಗ್ ಅನ್ನು ಯಾವಾಗ ಬೇಕಾದರೂ ಸೇರಿಸಬಹುದು. ಗಿಗಾ ಸತತವಾಗಿ ಎಂಟು ಗಂಟೆಗಳ ಕಾಲ ಕೆಲಸ ಮಾಡಲಿದ್ದು, ನೀರು ತರುವುದು, ಹಲೋ ಹೇಳುವುದು ಹಾಗೂ ಅತಿಥಿಗಳನ್ನು ಸ್ವಾಗತಿಸುವುದು ಇತ್ಯಾದಿ ಸೇರಿದಂತೆ ಎಲ್ಲಾ ರೀತಿಯ ಮನೆಕೆಲಸಗಳನ್ನು ಮಾಡಲಿದೆ ಎಂದು ಹೇಳಿದ್ದಾರೆ.
ಇನ್ನೂ ಸೂರ್ಯ ಪ್ರಕಾಶ್ ಅವರು ಇಲ್ಲಿಯವರೆಗೆ 400 ಕ್ಕೂ ಹೆಚ್ಚು ರೋಬೋಟಿಕ್ಸ್ ಯೋಜನೆಗಳಲ್ಲಿ ಕೆಲಸ ಮಾಡಿದ್ದಾರೆ. ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ, ಜೈಪುರದ ಸವೈಮಾನ್ ಸಿಂಗ್ ಆಸ್ಪತ್ರೆಯಲ್ಲಿ ರೋಬೋಟ್ಗಳ ಮೂಲಕ ರೋಗಿಗಳಿಗೆ ಔಷಧಿಗಳು ಮತ್ತು ಆಹಾರವನ್ನು ನೀಡಲಾಯಿತು. ಈ ರೋಬೋಟ್ಗಳನ್ನು ಸೂರ್ಯ ಪ್ರಕಾಶ್ ಅವರೇ ನಿರ್ಮಿಸಿದರು. ಸಾಂಕ್ರಾಮಿಕ ಸಮಯದಲ್ಲಿ ಸೂರ್ಯ ಪ್ರಕಾಶ್ ಅವರು ಸ್ಪರ್ಶರಹಿತ ಮತ ಯಂತ್ರದ ಮಾದರಿಯನ್ನು ಸಹ ನಿರ್ಮಿಸಿದ್ದರು.
ಈಗ, ಸೂರ್ಯ ಪ್ರಕಾಶ್ ಅವರು ಇಸ್ರೇಲಿ ಸೇನೆಯೊಂದಿಗೆ ಕೆಲಸ ಮಾಡಲು ಸಿದ್ಧರಾಗಿದ್ದಾರೆ ಮತ್ತು ಶೀಘ್ರದಲ್ಲೇ ಇಸ್ರೇಲ್ಗೆ ತೆರಳಲಿದ್ದಾರೆ. ಭಾರತಕ್ಕೆ ಮರಳಿದ ನಂತರ ಭಾರತೀಯ ಸೇನೆಗೆ ಸೇರಲು ಪ್ರಯತ್ನಿಸುವುದಾಗಿ ಸೂರ್ಯ ಪ್ರಕಾಶ್ ತಿಳಿಸಿದ್ದಾರೆ. (ಏಜೆನ್ಸೀಸ್)