More

  ಬರಪರಿಹಾರ ಬಿಡುಗಡೆ ವಿಚಾರ: ಮೇ 6ಕ್ಕೆ ಪ್ರಕರಣ ಮುಂದೂಡಿದ ಸುಪ್ರೀಂಕೋರ್ಟ್​

  ನವದೆಹಲಿ: ಕರ್ನಾಟಕಕ್ಕೆ ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಬರಪರಿಹಾರ ಮೊತ್ತ ತುಂಬಾ ಕಡಿಮೆ ಇದೆ. ಹೀಗಾಗಿ ಹೆಚ್ಚಿನ ಹಣ ಬಿಡುಗಡೆ ಮಾಡಲು ಸೂಚನೆ ನೀಡುವಂತೆ ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್​ ಮೆಟ್ಟಿಲೇರಿದ್ದು, ಇಂದು ವಿಚಾರಣೆ ನಡೆಸಿದ ನ್ಯಾಯಾಲಯ ಪ್ರಕರಣವನ್ನು ಸೋಮವಾರ (ಮೇ 6)ಕ್ಕೆ ಮುಂದೂಡಿದೆ.

  ನಾವು ಕೇಳಿದ್ದು 18 ಸಾವಿರ ಕೋಟಿ ರೂಪಾಯಿ ಪರಿಹಾರ ಆದರೆ, ಕೇಂದ್ರ ಸರ್ಕಾರ ಕೇವಲ 3456 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ. ಪರಿಹಾರ ಬಿಡುಗಡೆ ಮಾಡಿದ್ದಕ್ಕೆ ಧನ್ಯವಾದಗಳು ಆದರೆ, ಇಷ್ಟು ಕನಿಷ್ಠ ಹಣ ಬಿಡುಗಡೆ ಮಾಡಿರುವುದು ಅಸಮಂಜಸವಾಗಿದೆ. ಕೂಡಲೇ ಹೆಚ್ಚಿನ ಪರಿಹಾರ ಬಿಡುಗಡೆ ಮಾಡಲು ಕೇಂದ್ರಕ್ಕೆ ಆದೇಶ ನೀಡುವಂತೆ ಕರ್ನಾಟಕ ಪರ ವಕೀಲರು ನ್ಯಾಯಾಲಯದ ಮುಂದೆ ವಾದ ಮಂಡಿಸಿದರು.

  ಇದೇ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಪರ ಅಟಾರ್ನಿ ಜನರಲ್ ವೆಂಕಟರಮಣಿ ಹಾಜರಿದ್ದರು. ಅಗತ್ಯ ಬರ ಪರಿಹಾರವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ಅದು ಕೂಡ ಸಮಿತಿಯ ಶಿಫಾರಸ್ಸಿನಂತೆಯೇ ಮಾಡಲಾಗಿದೆ ಎಂದು ವಾದಿಸಿದರು.

  ವಾದ-ಪ್ರತಿವಾದಗಳನ್ನು ಆಲಿಸಿದ ಸುಪ್ರೀಂಕೋರ್ಟ್​ ಬರ ಪರಿಹಾರ ವೀಕ್ಷಣೆಯ ಸಮಿತಿ ಮಾಡಿರುವ ಶಿಫಾರಸುಗಳನ್ನು ಸೋಮವಾರ ನ್ಯಾಯಾಲಯಕ್ಕೆ ಹಾಜರುಪಡಿಸಲು ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿ, ಪ್ರಕರಣವನ್ನು ಸೋಮವಾರಕ್ಕೆ ಮುಂದೂಡಿದೆ.

  2023ರಲ್ಲಿ ರಾಜ್ಯದಲ್ಲಿ ಸರಿಯಾಗಿ ಮಳೆಯಾಗದ ಕಾರಣ ಭೀಕರ ಬರಗಾಲ ಬಂದಿತ್ತು. ಈ ಹಿನ್ನೆಲೆ ಎನ್‌ಡಿಆರ್‌ಎಫ್‌ನಿಂದ ಬರ ಪರಿಹಾರ ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರದ ಮುಂದೆ 18,174 ಕೋಟಿ ರೂಪಾಯಿ ಪರಿಹಾರವನ್ನು ರಾಜ್ಯ ಸರ್ಕಾರ ಕಳೆದ ಸೆಪ್ಟೆಂಬರ್​ನಲ್ಲಿ ಬೇಡಿಕೆ ಇಟ್ಟಿತ್ತು. ಕರ್ನಾಟಕದ ಮನವಿ ಮೇರೆಗೆ ಅಧ್ಯಯನ ನಡೆಸಿ ಕೇಂದ್ರದ ತಂಡವೂ ವರದಿ ಸಲ್ಲಿಸಿತ್ತು. ಆದರೆ ಬರ ಪರಿಹಾರದ ಹಣವನ್ನು ಬಿಡುಗಡೆ ಮಾಡಿರಲಿಲ್ಲ.

  ಬರ ಪರಿಹಾರ ಬಿಡುಗಡೆ ಸಂಬಂಧ ರಾಜ್ಯ ಸರ್ಕಾರ ಹಲವು ಬಾರಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿತ್ತು. ಆದರೆ, ಸಕಾರಾತ್ಮಕ ಸ್ಪಂದನೆ ಸಿಗದೇ ಇದ್ದುದರಿಂದ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ತಾರತಮ್ಯ ಮಾಡುತ್ತಿದ್ದು, ಬರ ಪರಿಹಾರ, ತೆರಿಗೆ ಪಾಲು ನೀಡದೆ ರಾಜ್ಯಕ್ಕೆ ದ್ರೋಹ ಎಸಗಿದೆ ಎಂದು ಆರೋಪಿಸಿ ಮುಖ್ಯಮಂತ್ರಿ ಒಳಗೊಂಡಂತೆ ರಾಜ್ಯ ಕಾಂಗ್ರೆಸ್​ ಸರ್ಕಾರದ ಶಾಸಕರು, ಸಚಿವರು ದೆಹಲಿಯಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ದರು.

  ಬರ ಪರಿಹಾರ ವಿಳಂಬದ ಕಾರಣ ಕರ್ನಾಟಕ ಸರ್ಕಾರ ಕೇಂದ್ರ ಸರ್ಕಾರದ ವಿರುದ್ಧ ಸುಪ್ರೀಂ ಕೋರ್ಟ್‌ ಮೊರೆ ಹೋಗಿತ್ತು. ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಯಲ್ಲಿ ಬರ ಪರಿಹಾರ ಬಿಡುಗಡೆಯ ಕುರಿತು ಒಂದು ವಾರದೊಳಗೆ ನಿರ್ಧರಿಸುತ್ತೇವೆ ಎಂದು ಕೇಂದ್ರ ಸರ್ಕಾರ ಹೇಳಿತ್ತು. ಅದರಂತೆ ಶನಿವಾರ 3,454 ಕೋಟಿ ರೂ. ಬರ ಪರಿಹಾರವನ್ನು ಕರ್ನಾಟಕಕ್ಕೆ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ಆದರೆ, ಇದು ಕಡಿಮೆ ಮೊತ್ತ ಎಂದು ಹೇಳಿ ರಾಜ್ಯ ಸರ್ಕಾರ ಮತ್ತೊಮ್ಮೆ ನ್ಯಾಯಾಲಯದ ಮೆಟ್ಟಿಲೇರಿದೆ.

  ಕರ್ನಾಟಕಕ್ಕೆ 3,454 ಕೋಟಿ ರೂ. ಬರ ಪರಿಹಾರ ಘೋಷಿಸಿದ ಕೇಂದ್ರ ಸರ್ಕಾರ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts