More

    ಚುನಾವಣೆ ಮುಗಿದ ತಕ್ಷಣ ಬರಪರಿಹಾರ ಕ್ರಮ ಕೈಗೊಳ್ಳಿ

    ಹುಬ್ಬಳ್ಳಿ : ರಾಜ್ಯದಲ್ಲಿ ತೀವ್ರ ಬರ ಆವರಿಸಿದೆ. ಲೋಕಸಭೆ ಚುನಾವಣೆ ಮುಗಿದ ಕೂಡಲೇ ಮೇ 8ರಿಂದ ತಕ್ಷಣ ಬರ ಪರಿಹಾರ ಕ್ರಮಕೈಗೊಳ್ಳುವಂತೆ ಕೇಂದ್ರ ಸಚಿವ ಪಲ್ಹಾದ ಜೋಶಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

    ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ ಗ್ಯಾರಂಟಿ ಯೋಜನೆಗಳಡಿ ಜನರಿಗೆ ಯಾವ ರೀತಿ ಸಹಾಯ ಮಾಡಿದೆಯೋ ಅಥವಾ ಇಲ್ಲವೋ ಎಂಬ ಮಾಹಿತಿ ಇಲ್ಲ. ಆದರೆ, ಬರಪರಿಹಾರಕ್ಕೆ ಕಾಲಹರಣ ಮಾಡಬಾರದು. ಬರ ನಿರ್ವಹಣೆಗೆ ತಾಲೂಕು ಮಟ್ಟದಲ್ಲಿ ಟಾಸ್ಕ್​ಫೋರ್ಸ್ ರಚಿಸಬೇಕು ಎಂದು ಒತ್ತಾಯ ಮಾಡಿದರು.

    ಮೇವು ಬ್ಯಾಂಕ್ ಸ್ಥಾಪನೆ, ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಬರಗಾಲದ ಹಿನ್ನೆಲೆಯಲ್ಲಿ ಕೈಗೊಳ್ಳಬೇಕಾದ ತುರ್ತು ಕಾರ್ಯಗಳಿಗೆ ಜಿಲ್ಲಾಧಿಕಾರಿ ಬಳಿ ಹಣ ಇಲ್ಲ. ರಾಜ್ಯವನ್ನು ಆರ್ಥಿಕ ದುಸ್ಥಿತಿಗೆ ತಂದಿದ್ದು ರಾಜ್ಯ ಕಾಂಗ್ರೆಸ್ ಸರ್ಕಾರ ಎಂದು ದೂರಿದರು.

    ಸರ್ಕಾರದ ಗ್ಯಾರಂಟಿ ಯೋಜನೆಗಳು ಸುಸ್ಥಿರತೆ ಹೊಂದಿಲ್ಲ. ರೈತರು ಹಾಗೂ ಜನಮಾನ್ಯರಿಗೆ ಈ ಯೋಜನೆಗಳು ಮರಣ ಶಾಸನವಾದಂತಾಗಿವೆ. ರೈತರಿಗೆ ಹಾಲಿನ ಪ್ರೋತ್ಸಾಹ ಧನ ಕೊಟ್ಟಿಲ್ಲ. ವೃದ್ಧಾಪ್ಯ ವೇತನ, ವಿಧವಾ ವೇತನ ಮತ್ತಿತರ ಯೋಜನೆಗಳಿಗೆ ನೀಡುತ್ತಿದ್ದ ಹಣವನ್ನು ಬಿಡುಗಡೆ ಮಾಡಿಲ್ಲ ಎಂದು ಆರೋಪಿಸಿದರು.

    ಕಾಂಗ್ರೆಸ್ ಚುನಾವಣೆ ಪ್ರಣಾಳಿಕೆ ಮುಸ್ಲಿಂ ಲೀಗ್ ರೀತಿಯಲ್ಲಿ ಇದೆ. ಮುಸ್ಲಿಂರ ತುಷ್ಟೀಕರಣ ಬಿಟ್ಟು ಕಾಂಗ್ರೆಸ್ ಬೇರೆ ಯಾವುದೇ ಕೆಲಸ ಮಾಡುತ್ತಿಲ್ಲ. ಸಂಪೂರ್ಣ ಮುಸ್ಲಿಂ ಸಮುದಾಯವನ್ನು ಒಬಿಸಿ ಮೀಸಲಾತಿಗೆ ತರಲು ಮುಂದಾಗಿದ್ದಾರೆ. ನೇಹಾ ಹಿರೇಮಠ ಪ್ರಕರಣದಲ್ಲಿಯೂ ತುಷ್ಟೀಕರಣ ಮಾಡಿದರು ಎಂದು ದೂರಿದರು.

    ಕಾಂಗ್ರೆಸ್ ಯುವರಾಜ ರಾಹುಲ್ ಗಾಂಧಿ ಟೂರಿಂಗ್ ಟಾಕೀಸ್​ನಂತೆ ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ಓಡಾಡುತ್ತಿದ್ದಾಎ. ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಉತ್ತರ ಪ್ರದೇಶ ಬಿಟ್ಟು ಕೇರಳಕ್ಕೆ ಓಡಿದರು. ಅಲ್ಲಿನ ಜನರಿಗೆ ಸುಳ್ಳು ಹೇಳಿ, ಮಾಹಿತಿ ನೀಡದೇ, ಉತ್ತರ ಪ್ರದೇಶದ ರಾಯಬರೇಲಿಯಲ್ಲಿ ಸ್ಪರ್ಧೆಗೆ ಇಳಿದಿದ್ದಾರೆ ಎಂದು ವ್ಯಂಗ್ಯವಾಡಿದರು.

    ಕಳೆದ 10 ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ದೇಶದಲ್ಲಿ ಅಭೂತಪೂರ್ವ ಬದಲಾವಣೆಗಳಾಗಿವೆ. 13 ಕೋಟಿಗಿಂತ ಹೆಚ್ಚು ಜನ ಬಡತನದಿಂದ ಮೇಲೆ ಬಂದಿದಾರೆ ಎಂದರು.

    ತುಷ್ಟೀಕರಣ ರಾಜಕಾರಣ ಸಮಾಪ್ತಿಗೆ ಮತದಾರರು ಕಾಂಗ್ರೆಸ್ ಅನ್ನು ಅಧಿಕಾರದಿಂದ ದೂರ ಇಡಬೇಕು. ಒಬಿಸಿ ಮೀಸಲಾತಿ ಯಥಾವತ್ತಾಗಿ ಮುಂದುವರೆಯುವುದು ಸೇರಿದಂತೆ ದೇಶದ ಅಭಿವೃದ್ಧಿಗೆ ಬಿಜೆಪಿಗೆ ಮತ ಹಾಕಬೇಕು ಎಂದು ಮನವಿ ಮಾಡಿದರು.

    ಧಾರವಾಡ ಲೋಕಸಭೆ ಕ್ಷೇತ್ರದಲ್ಲಿ ನಿರೀಕ್ಷೆ ಮೀರಿ ಅಭಿವೃದ್ಧಿ ಕೆಲಸಗಳು ಆಗಿವೆ. ಮುಂದಿನ ದಿನಗಳಲ್ಲಿ ಲಾಜಿಸ್ಟಿಕ್​ನಲ್ಲಿ ಮತ್ತಷ್ಟು ಅಭಿವೃದ್ಧಿ ಅಭಿವೃದ್ಧಿ ಮಾಡುವ ಯೋಚನೆ ಇದೆ. ತುಮಕೂರು-ದಾವಣಗೆರೆ ರೈಲು ಮಾರ್ಗ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು. ಧಾರವಾಡ-ಬೆಂಗಳೂರು ಮಧ್ಯೆ ರೈಲಿನಲ್ಲಿ ನಾಲ್ಕೂವರೆ ತಾಸಿನಲ್ಲಿ ಪ್ರಯಾಣ ಮಾಡಲು ವ್ಯವಸ್ಥೆ ಮಾಡುವ ಬಗ್ಗೆಯೂ ಯೋಚನೆ ಇದೆ ಎಂದರು.

    ಶಾಸಕರಾದ ಮಹೇಶ ಟೆಂಗಿನಕಾಯಿ, ಎಂ.ಆರ್. ಪಾಟೀಲ, ಮುಖಂಡರಾದ ಎಂ. ನಾಗರಾಜ, ತಿಪ್ಪಣ್ಣ ಮಜ್ಜಗಿ, ನಿಂಗಪ್ಪ ಸುತ್ತಗಟ್ಟಿ ಹಾಗೂ ಇತರರು ಸುದ್ದಿಗೋಷ್ಠಿಯಲ್ಲಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts