ಹೇಳಿದ್ದೇ ಒಂದು, ಮಾಡಿದ್ದೇ ಇನ್ನೊಂದು; ಸುಶಾಂತ್​ ಸಿಂಗ್​ ಬದುಕಲ್ಲಿ ರೀಲು​ ರಿಯಲ್ಲಾಗಲಿಲ್ಲ...

Sushanth singh2
Published on

ಮುಂಬೈ: ಬಾಲಿವುಡ್​ ನಟ ಸುಶಾಂತ್​ ಸಿಂಗ್​ ರಜಪೂತ್​ ಸಾವು ಆತ್ಮಹತ್ಯೆಯಿಂದಾಗಿ ಎನ್ನುವುದು ಪೊಲೀಸರ ಹೇಳಿಕೆ. ಅದಕ್ಕೆ ಕಾರಣವೇನು ಎನ್ನುವುದನ್ನು ಪೊಲಿಸರು ಇನ್ನಷ್ಟೇ ಖಚಿತಪಡಿಸಬೇಕಿದೆ.

ಆದರೆ, ಸುಶಾಂತ್​ ಸಿಂಗ್​ ತನ್ನ ಇತ್ತೀಚಿನ ಚಿತ್ರಗಳಿಂದ ನೀಡಿದ ಸಂದೇಶವೇನು? ಜೀವನೋತ್ಸಾಹವನ್ನೇ ಪ್ರತಿಪಾದಿಸುತ್ತಿದ್ದ ಸಿನಿಮಾಗಳಲ್ಲಿ ನಾಯಕನದ್ದು ಪ್ರೇರಣಾದಾಯಿ ವ್ಯಕ್ತಿತ್ವ. ಆದರೆ, ನಿಜ ಜೀವನದಲ್ಲಿ ಈ ನಾಯಕ ಸೋತದ್ದೇಕೆ? ಇದು ನಿಜಕ್ಕೂ ಕೆಟ್ಟ ಸಂದೇಶ ಎಂದೇ ಸಾಮಾಜಿಕ ಜಾಲತಾಣಗಳಲ್ಲಿ ನಟನ ಕುರಿತು ಬರುತ್ತಿರುವ ಕಾಮೆಂಟ್​ಗಳ ಸಾರಾಂಶವಾಗಿದೆ.

ಎಂ.ಎಸ್​. ಧೋನಿ; ಅನ್​ಟೋಲ್ಡ್​ ಸ್ಟೋರಿಯಲ್ಲಿ ಸುಶಾಂತ್​ ಹೇಳಿದ್ದು, ಬದುಕಿನಲ್ಲೇ ಎಂಥದ್ದೇ ಕಷ್ಟ ಎದುರಾದರೂ ಹಿಂಜರಿಯಬಾರದು. ಗುರಿಯಿಂದ ವಿಚಲಿತರಾಗಬಾರದು. ಹಾಗಿದ್ದರಷ್ಟೇ ಯಶಸ್ಸು ನಮ್ಮದಾಗುತ್ತದೆ ಎಂಬ ಸಂದೇಶ ಚಿತ್ರದ್ದಾಗಿತ್ತು. ಕೇದಾರನಾಥ್​ ಚಿತ್ರದಲ್ಲಿ ಯಾವುದೇ ಧರ್ಮವಾದರೂ ಸ್ವಾರ್ಥ ಇರಕೂಡದು ಎಂಬುದನ್ನು ಸಾರುತ್ತಿತ್ತು.

ಇನ್ನು, ಚಿಚೋರೆ ಚಿತ್ರದಲ್ಲಿ ಆತ್ಮಹತ್ಯೆಗೆ ಮುಂದಾಗಿ ಮರಣಶಯ್ಯೆಯಲ್ಲಿರುವ ಮಗನನ್ನು ಉಳಿಸಿಕೊಳ್ಳಲು ತನ್ನ ಜೀವನವೇ ನಿನಗೊಂದು ಪಾಠವೆಂದು ಗತಕಾಲದ ಜೀವನವನ್ನೆಲ್ಲ ನಿರೂಪಿಸುತ್ತಾನೆ. ಆತ್ಮಹತ್ಯೆ ಯಾವುದಕ್ಕೂ ಪರಿಹಾರವಲ್ಲ ಎಂಬುದನ್ನು ತಿಳಿಸುತ್ತಾನೆ. ಅಂಥದದ್ದರಲ್ಲಿ, ನಿಜ ಜೀವನದಲ್ಲಿ ಸುಶಾಂತ್​ ಮಾಡಿದ್ದೇನು ಎಮದು ನೆಟ್ಟಿಗರು ಕಂಬನಿ ಮಿಡಿದಿದ್ದಾರೆ.

ಯಶಸ್ಸಿನ ಬಳಿಕ ಏನು ಮಾಡಬೇಕು ಎಂಬ ಯೋಜನೆ ಎಲ್ಲರ ಬಳಿಯೂ ಇದೆ. ಆದರೆ, ಸೋತರೆ ಅದನ್ನು ಹೇಗೆ ನಿರ್ವಹಿಸಬೇಕು ಎಂಬುದನ್ನು ಯಾರೂ ಮಾತನಾಡಲು ಇಷ್ಟಪಡುವುದಿಲ್ಲ ಎನ್ನುವುದು ಚಿಚೋರೆ ಚಿತ್ರದ ಫೇಮಸ್​ ಡೈಲಾಗ್​ ಹಾಗೂ ತಿರುಳು ಕೂಡ ಹೌದು. ಇದಕ್ಕೆ ವಿರುದ್ಧವಾಗಿ ಸುಶಾಂತ್​ ಸಿಂಗ್​ ನಡೆದುಕೊಂಡರಲ್ಲ ಎಂದು ಅಭಿಮಾನಿಯೊಬ್ಬ ಕಣ್ಣೀರು ಹಾಕಿದ್ದಾನೆ.

ಆತ್ಮಹತ್ಯೆಗೆ ಶರಣಾಗಬಾರದು ಎಂದು ಹೇಳಿದ ವ್ಯಕ್ತಿಯೇ ಅದಕ್ಕೆ ಬಲಿಯಾದರೆ...? ಬದುಕು ಅಷ್ಟೊಂದು ಸಂಕೀರ್ಣವೇ ಎಂದು ಮತ್ತೊಬ್ಬ ಪ್ರಶ್ನಿಸಿದ್ದಾನೆ.

ರಾಷ್ಟ್ರಮಟ್ಟದ ಎಐಇಇಇ ಪರೀಕ್ಷೆಯಲ್ಲಿ 7ನೇ ಸ್ಥಾನ, ಭೌತಶಾಸ್ತ್ರದಲ್ಲಿ ರಾಷ್ಟ್ರೀಯ ಒಲಿಂಪಿಯಾಡ್​ ವಿನ್ನರ್​, ಚೊಚ್ಚಲ ಚಿತ್ರದಲ್ಲಿ ಉತ್ತಮ ನಟ ಪ್ರಶಸ್ತಿಗೆ ನಾಮ ನಿರ್ದೇಶನ, ಉತ್ತಮ ನಟ ಪ್ರಶಸ್ತಿಗೆ ನಾಮ ನಿರ್ದೇಶನ ಮೊದಲಾದ ಸಾಧನೆಗಳ ಮೂಲಕ ಮಧ್ಯಮ ವರ್ಗದ ಕುಟುಂಬಕ್ಕೆ ಕುಟುಂಬಕ್ಕೆ ಯಾವುದು ಅಸಾಧ್ಯವಲ್ಲ ಎಂಬುದನ್ನು ತೋರಿಕೊಟ್ಟ ಸುಶಾಂತ್​ ಸಿಂಗ್​ ಎಂದು ಅಭಿಮಾನಿಗಳು ಸುಶಾಂತ್​ನನ್ನು ಕೊಂಡಾಡಿದ್ದಾರೆ. ಆದರೆ, ಆತ್ಮಹತ್ಯೆ ಮೂಲಕ ಅವರು ತಿಳಿಸಿದ್ದೇನು ಎನ್ನುವುದು ಕೂಡ ಚರ್ಚೆಯಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net