

ತುಮಕೂರು: ಇಂದು ಸಿದ್ದಗಂಗಾ ಮಠಕ್ಕೆ ಭೇಟಿಯಾದ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಮಾತನಾಡಿ, ಕಾಂಗ್ರೆಸ್ ತ್ಯಜಿಸಿ ಮತ್ತೊಮ್ಮೆ ಬಿಜೆಪಿಗೆ ಸೇರ್ಪಡೆಯಾದ ಜಗದೀಶ್ ಶೆಟ್ಟರ್ ಅವರು ಯಾವುದೋ ಕಾರಣಕ್ಕೆ ಪಕ್ಷ ಬಿಟ್ಟುಹೋಗಿದ್ದರು. ದೇಶದಲ್ಲಿ ಮತ್ತೊಮ್ಮೆ ಮೋದಿ ಅವರನ್ನು ಪ್ರಧಾನಮಂತ್ರಿ ಮಾಡಬೇಕು ಎಂಬ ಉದ್ದೇಶದಿಂದ ಸಂಘಟನೆ ಮಾಡಲು ಅವರು ಬಂದಿದ್ದಾರೆ ಎಂದರು.
ಲೋಕಸಭೆಯ 28 ಕ್ಷೇತ್ರಗಳನ್ನು ಗೆಲ್ಲಿಸಲು ಜಗದೀಶ್ ಶೆಟ್ಟರ್ ಪುನರ್ ಸೇರ್ಪಡೆಯಾಗಿದ್ದಾರೆ. ಇಡೀ ರಾಜ್ಯದ ಮುಖಂಡರು ಮತ್ತು ಕಾರ್ಯಕರ್ತರಿಗೆ ಶೆಟ್ಟರ್ ವಾಪಸ್ ಬಂದಿರುವುದಕ್ಕೆ ಸಂತಸವಿದೆ. ಅವರು ಪಕ್ಷ ಬಿಟ್ಟಾಗ ನಾನು ಯಾವತ್ತೂ ವಾಗ್ದಾಳಿ ಮಾಡಿರಲಿಲ್ಲ. ಟಿಕೆಟ್ ಸಿಗದಿದ್ದಕ್ಕೆ ನನಗೂ ನೋವಿತ್ತು. ಅವರ ವಿರುದ್ಧ ನಾನು ಮಾತಾಡಿದ್ದಿದ್ರೆ ರಾಜಕಾರಣವನ್ನೇ ಬಿಡ್ತೀನಿ ಎಂದರು.
ಜಗದೀಶ್ ಅವರು ಸೋತ ಬಳಿಕ ನಾನು ನಿರಂತರವಾಗಿ ಅವರ ಸಂಪರ್ಕದಲ್ಲಿದ್ದೆ. ಶೆಟ್ಟರಿಗೆ ಲೋಕಸಭಾ ಟಿಕೆಟ್ ಕೊಡುವ ವಿಚಾರ ಅದು ನಮ್ಮ ರಾಷ್ಟ್ರೀಯ ನಾಯಕರಿಗೆ ಬಿಟ್ಟಿದ್ದು, ಪಕ್ಷ ಬಿಟ್ಟಾಗ ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದ್ದು ಸತ್ಯ. ಹಾಗಂತ ಪ್ರತಿದಿನವೂ ಯುದ್ಧ ಮಾಡಲಿಕ್ಕೆ ಆಗುತ್ತಾ? ಸಂಘರ್ಷದ ನಂತರ ಸಾಮರಸ್ಯ ಇರಬೇಕಲ್ವಾ, ಹಳೆಯದನ್ನು ಮರಿಯಬೇಕಲ್ವಾ ಎಂದರು.
ವಿ.ಸೋಮಣ್ಣ ತುಮಕೂರಿನ ಬಿಜೆಪಿಯ ಅಭ್ಯರ್ಥಿ ಎನ್ನುವ ವಿಚಾರ ನನಗೆ ಗೊತ್ತಿಲ್ಲ. ಅದನ್ನು ನಮ್ಮ ರಾಷ್ಟ್ರೀಯ ನಾಯಕರು ತೀರ್ಮಾನ ಮಾಡುತ್ತಾರೆ. ದಾವಣಗೆರೆ ಕ್ಷೇತ್ರದಿಂದ ನಾನು ಆಕಾಂಕ್ಷಿಯಾಗಿದ್ದೇನೆ. ಸಮೀಕ್ಷೆ ಮಾಡಿ ಲೋಕಸಭೆ ಟಿಕೆಟ್ ಕೊಡಲಿ ಎಂದು ಹೇಳಿದರು.