ಚಳಿಗಾಲದಲ್ಲಿ ಬ್ರೈನ್​ ಸ್ಟ್ರೋಕ್ ಅಪಾಯ ಹೆಚ್ಚು! ಕಾರಣವೇನು? ಯಾರಿಗೆ ಹೆಚ್ಚು ತೊಂದರೆ? ಇಲ್ಲಿದೆ ಉಪಯುಕ್ತ ಮಾಹಿತಿ... Brain Stroke

Brain Stroke
Published on

Brain Stroke : ಚಳಿಗಾಲವು ಅನೇಕ ರೋಗಗಳನ್ನು ತರುತ್ತದೆ. ಇವುಗಳಲ್ಲಿ ಒಂದು ಬ್ರೈನ್ ಸ್ಟ್ರೋಕ್. ವಾಸ್ತವವಾಗಿ, ಚಳಿಗಾಲದಲ್ಲಿ ದೇಹದಲ್ಲಿನ ರಕ್ತನಾಳಗಳು ಸಂಕುಚಿತಗೊಳ್ಳುತ್ತವೆ. ಇದು ರಕ್ತ ಪರಿಚಲನೆಯ ಮೇಲೆ ತೀವ್ರ ಪರಿಣಾಮವನ್ನು ಬೀರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಬ್ರೈನ್​ ಸ್ಟ್ರೋಕ್ ಅಪಾಯವು ಹೆಚ್ಚಾಗುತ್ತದೆ. ಹೀಗಾಗಿ ಚಳಿಗಾಲದಲ್ಲಿ ತುಂಬಾ ಎಚ್ಚರಿಕೆ ವಹಿಸಬೇಕೆಂದು ಆರೋಗ್ಯ ತಜ್ಞರು ಸಲಹೆ ನೀಡಿದ್ದಾರೆ.

ಅಧಿಕ ರಕ್ತದೊತ್ತಡ, ಮಧುಮೇಹ, ಬೊಜ್ಜು ಅಥವಾ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವವರು ಚಳಿಗಾಲದಲ್ಲಿ ಸ್ವಲ್ಪ ಎಚ್ಚರದಿಂದಿರಬೇಕು. ಸೂರ್ಯನ ಬೆಳಕಿನ ಕೊರತೆ, ಬಲವಾದ ಶೀತ ಗಾಳಿ ಹಾಗೂ ವಾತಾವರಣದಲ್ಲಿ ಹೆಚ್ಚಿನ ಆರ್ದ್ರತೆಯಂತಹ ಪರಿಸ್ಥಿತಿಗಳಲ್ಲಿ, ನಮ್ಮ ದೇಹದಲ್ಲಿ ತಾಪಮಾನವನ್ನು ಹೆಚ್ಚಿಸುವ ಸಾಮರ್ಥ್ಯವು ಕಡಿಮೆಯಾಗುತ್ತದೆ. ಇದರ ಪರಿಣಾಮ ನೇರವಾಗಿ ಆಂತರಿಕ ಅಂಗಗಳ ಮೇಲೆ ಬೀರುತ್ತದೆ. ರಕ್ತನಾಳಗಳು ಶೀತಕ್ಕೆ ಪ್ರತಿಕ್ರಿಯಿಸಿ, ಅಪಧಮನಿಗಳಲ್ಲಿ ರಕ್ತದೊತ್ತಡ ಹೆಚ್ಚುತ್ತದೆ ಮತ್ತು ತೀವ್ರ ನಡುಕ ಮತ್ತು ಹೃದಯಾಘಾತವಾಗುವ ಸಾಧ್ಯತೆ ಇದೆ. ಅಲ್ಲದೆ, ತಾಪಮಾನ ಕಡಿಮೆಯಾಗುವುದುರಿಂದ ರಕ್ತವು ದಪ್ಪವಾಗಲು ಪ್ರಾರಂಭಿಸುತ್ತದೆ. ಇದು ರಕ್ತ ಪರಿಚಲನೆಯಲ್ಲಿ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಇದರಿಂದ ಬ್ರೈನ್ ಸ್ಟ್ರೋಕ್ ಉಂಟಾಗುತ್ತದೆ.

ಈ ಸಮಸ್ಯೆಯಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು ನೀವು ಬಯಸಿದರೆ, ನಿಮ್ಮ ಜೀವನಶೈಲಿಯಲ್ಲಿ ನೀವು ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಬೇಕು. ಇದರಿಂದ ಬ್ರೈನ್​ ಸ್ಟ್ರೋಕ್ ಅಪಾಯವನ್ನು ಕಡಿಮೆ ಮಾಡಬಹುದು. ನೀವು ನಿಯಮಿತವಾಗಿ ವ್ಯಾಯಾಮ ಮಾಡಬೇಕು. ದಿನಕ್ಕೆ ಕನಿಷ್ಠ 30 ನಿಮಿಷಗಳ ಕಾಲ ವ್ಯಾಯಾಮ ಮಾಡಿ. ಪೌಷ್ಟಿಕ ಆಹಾರ ತೆಗೆದುಕೊಳ್ಳಬೇಕು. ಉತ್ಕರ್ಷಣ ನಿರೋಧಕಗಳು, ಜೀವಸತ್ವಗಳು, ಖನಿಜಗಳು ಮತ್ತು ಒಮೆಗಾ -3 ಕೊಬ್ಬಿನಾಮ್ಲಗಳಲ್ಲಿ ಸಮೃದ್ಧವಾಗಿರುವ ಆಹಾರವನ್ನು ಸೇವಿಸಿ. ದೇಹದಿಂದ ಕಲ್ಮಶಗಳನ್ನು ಹೊರಹಾಕಲು ನೀರು ಅವಶ್ಯಕ. ಸಾಕಷ್ಟು ನೀರು ಕುಡಿಯುವುದರಿಂದ ದೇಹವು ತನ್ನ ಕಾರ್ಯಗಳನ್ನು ಸರಿಯಾಗಿ ನಿರ್ವಹಿಸಲು ಸಹಾಯ ಮಾಡುತ್ತದೆ. ಹಾಗಾಗಿ ದಿನಕ್ಕೆ ಕನಿಷ್ಠ 8 ಲೋಟ ನೀರು ಸೇವಿಸಬೇಕು. ಸಾಕಷ್ಟು ನಿದ್ದೆ ಮಾಡುವುದರಿಂದ ಬ್ರೈನ್ ಸ್ಟ್ರೋಕ್ ಅನ್ನು ತಡೆಯಬಹುದು.

ಬ್ರೈನ್ ಸ್ಟ್ರೋಕ್ ಲಕ್ಷಣಗಳು ಯಾವುವು?

ಬ್ರೈನ್​ ಸ್ಟ್ರೋಕ್​ನ ಲಕ್ಷಣಗಳೆಂದರೆ, ಮುಖ, ತೋಳುಗಳು ಮತ್ತು ಕಾಲುಗಳಲ್ಲಿ ದೌರ್ಬಲ್ಯ ಕಾಣಿಸಿಕೊಳ್ಳುತ್ತದೆ. ಮಾತನಾಡಲು ತೊಂದರೆ, ತಡವಾದ ಗ್ರಹಿಕೆ, ನೋಡಲು ಅಸಮರ್ಥತೆ ಹಾಗೂ ತೀವ್ರ ತಲೆನೋವು ಕಾಡುತ್ತದೆ.

ಯಾವ ರೀತಿಯ ಜನರು ಬ್ರೈನ್ ಸ್ಟ್ರೋಕ್ ಅಪಾಯ ಹೊಂದಿರುತ್ತಾರೆ?

ಹಿರಿಯರು, ಮಧುಮೇಹ ಸಮಸ್ಯೆ ಇರುವವರು, ಧೂಮಪಾನಿಗಳು, ಹೃದಯ ಸಮಸ್ಯೆಗಳು ಹಾಗೂ ಅಧಿಕ ರಕ್ತದೊತ್ತಡ ಹೊಂದಿರುವ ಜನರು ಬ್ರೈನ್ ಸ್ಟ್ರೋಕ್ ಅಪಾಯವನ್ನು ಹೊಂದಿರುತ್ತಾರೆ. ಹೀಗಾಗಿ ಆದಷ್ಟು ಬೆಚ್ಚನೆಯ ವಾತಾವರಣದಲ್ಲಿ ಇದ್ದರೆ ಒಳ್ಳೆಯದು. ಯಾವುದೇ ಕಾರಣಕ್ಕೂ ಚಳಿಗೆ ಹೆಚ್ಚು ಒಡ್ಡಿಕೊಳ್ಳಬಾರದು.

ಹಕ್ಕು ನಿರಾಕರಣೆ: ಲೇಖನದಲ್ಲಿ ಉಲ್ಲೇಖಿಸಲಾದ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರ. ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ ಯಾವಾಗಲೂ ನಿಮ್ಮ ವೈದ್ಯರನ್ನು ಸಂಪರ್ಕಿಸಿ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net