

ಬೆಂಗಳೂರು: ಆಸ್ಟ್ರೆಲಿಯಾದಲ್ಲಿ ನಿಗದಿಯಾಗಿದ್ದ 2020ರ ಟಿ20 ವಿಶ್ವಕಪ್ ಮುಂದೂಡಿಕೆಯಾದ ಬೆನ್ನಲ್ಲೆ 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಚಟುವಟಿಕೆಗಳು ಗರಿಗೆದರಿವೆ. ಕೇಂದ್ರ ಸರ್ಕಾರ ಅನುಮತಿ ನೀಡಿದರೆ ಯುಎಇಯಲ್ಲಿ ಲೀಗ್ ಆಯೋಜಿಸಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತುದಿಗಾಲಲ್ಲಿ ನಿಂತಿದೆ. ಯುಎಇಯಲ್ಲಿ ಲೀಗ್ ನಡೆದ 3 ಬಾರಿ ರನ್ನರ್ಅಪ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡಕ್ಕೆ ಅನುಕೂಲ ಎಂಬ ಮಾತುಗಳು ಕ್ರಿಕೆಟ್ ವಲಯದಲ್ಲಿ ಈಗಾಗಲೇ ಕೇಳಿ ಬರುತ್ತಿವೆ. ಮಾಜಿ ಕ್ರಿಕೆಟಿಗ ಹಾಗೂ ವೀಕ್ಷಕ ವಿವರಣೆಗಾರ ಆಕಾಶ್ ಚೋಪ್ರಾ ಯೂಟ್ಯೂಬ್ ಚಾನೆಲ್ ಜತೆ ಮಾತನಾಡುತ್ತಾ ಈ ಅಭಿಪ್ರಾಯ ಹೊರಹಾಕಿದ್ದಾರೆ.
ಇದನ್ನೂ ಓದಿ: ದೀಪಾವಳಿವರೆಗೆ ನಡೆಯುತ್ತಾ ಐಪಿಎಲ್ ಹಬ್ಬ?
ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ 2009ರಲ್ಲಿ ಸಂಪೂರ್ಣ ಟೂನಿರ್ಯನ್ನೇ ದಕ್ಷಿಣ ಆಫ್ರಿಕಾದಲ್ಲಿ ಆಯೋಜಿಸಲಾಗಿತ್ತು. ಬಳಿಕ 2014ರಲ್ಲೂ ಲೀಗ್ನ ಅರ್ಧದಷ್ಟು ಪಂದ್ಯಗಳನ್ನು ಯುಎಇಯಲ್ಲಿ ಆಯೋಜಿಸಲಾಗಿತ್ತು. ಟಿ20 ವಿಶ್ವಕಪ್ ಮುಂದೂಡಿಕೆ ವಿಚಾರಕ್ಕೆ ಸಂಬಂಧಪಟ್ಟಂತೆ ಐಸಿಸಿ ಕಳೆದ ಎರಡು ತಿಂಗಳಿಂದ ಹಗ್ಗಜಗ್ಗಾಟದಲ್ಲೇ ಮುಳುಗಿತ್ತು. ಸೆಪ್ಟೆಂಬರ್ 26 ರಿಂದ ನವೆಂಬರ್ 7 ಅಥವಾ 8ರವರೆಗೆ ಯುಎಇಯಲ್ಲಿ ಲೀಗ್ ನಡೆಯುವ ಸಾಧ್ಯತೆಗಳಿವೆ. ಆದರೆ, ಕೇಂದ್ರ ಸರ್ಕಾರದ ನಿರ್ಧಾರದ ಮೇಲೆ ಐಪಿಎಲ್ ಭವಿಷ್ಯದ ನಿಂತಿದೆ.