ಎಂಥಾ ವಿಚಿತ್ರ! 18 ವರ್ಷದ ನಂತ್ರ ಅದೇ ದಿನ, ಅದೇ ಗ್ರೌಂಡ್​, ಅದೇ ದೃಶ್ಯ ರಿಪೀಟ್​: ಕೊಹ್ಲಿ ಮುಖದಲ್ಲೂ ಅದೇ ನಿರಾಸೆ | Virat Kohli

Virat Kohli
Published on

Virat Kohli : ಐಪಿಎಲ್ ಆರಂಭವಾದಾಗಿನಿಂದ ಇಂದಿನವರೆಗೂ ಆಡುತ್ತಿರುವ ಕೆಲವೇ ಆಟಗಾರರಲ್ಲಿ ವಿರಾಟ್ ಕೊಹ್ಲಿ ಕೂಡ ಒಬ್ಬರು. 2008ರಲ್ಲಿ ಐಪಿಎಲ್ ಪ್ರಾರಂಭವಾದಾಗಿನಿಂದ ಕೊಹ್ಲಿ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಒಮ್ಮೆಯೂ ಫ್ರಾಂಚೈಸಿ ಬದಲಿಸದ ಏಕೈಕ ಆಟಗಾರನೆಂದರೆ ಅದು ಕೊಹ್ಲಿ ಮಾತ್ರ. ಹೀಗಾಗಿಯೇ ಕರ್ನಾಟಕದ ದತ್ತು ಪುತ್ರನೆಂದೇ ಜನಮನ್ನಣೆ ಗಳಿಸಿದ್ದಾರೆ.

ಅಂದಹಾಗೆ, ಶುಕ್ರವಾರ (ಏಪ್ರಿಲ್​ 18) ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್​ ನಡುವೆ ಪಂದ್ಯ ನಡೆಯಿತು. ಈ ಪಂದ್ಯವನ್ನು ಪಂಜಾಬ್​ ಗೆದ್ದುಕೊಂಡಿದ್ದು ಎಲ್ಲರಿಗೂ ಗೊತ್ತೇ ಇದೆ. ಆದರೆ, ಗಮನಾರ್ಹ ಸಂಗತಿ ಏನೆಂದರೆ, ಇದೇ ಪಂದ್ಯದಲ್ಲಿ ಒಂದು ಕಾಕತಾಳೀಯ ಘಟನೆ ಸಂಭವಿಸಿದೆ.

2008, ಏಪ್ರಿಲ್​ 18ರಂದು ಐಪಿಎಲ್ ಪ್ರಾರಂಭವಾಯಿತು. ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಕೋಲ್ಕತ್ತ ನೈಟ್ ರೈಡರ್ಸ್ ತಂಡವನ್ನು ಎದುರಿಸಿತು. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆ ಪಂದ್ಯದಲ್ಲಿ, ಆರ್‌ಸಿಬಿ ಪರ ಮೈದಾನಕ್ಕೆ ಇಳಿದ ವಿರಾಟ್ ಕೊಹ್ಲಿ ಐದು ಎಸೆತಗಳಲ್ಲಿ ಕೇವಲ ಒಂದು ರನ್ ಗಳಿಸಿ ಪೆವಿಲಿಯನ್ ತಲುಪಿದರು. ಕೆಕೆಆರ್ ವೇಗಿ ಅಶೋಕ್ ದಿಂಡಾ ಕೊಹ್ಲಿಯನ್ನು ಔಟ್ ಮಾಡಿದರು. ಈ ಪಂದ್ಯದಲ್ಲಿ ಆರ್‌ಸಿಬಿ 140 ರನ್‌ಗಳ ಭಾರೀ ಸೋಲನ್ನು ಅನುಭವಿಸಿತು. ಇದು ಭೂತಕಾಲ.

ಈಗ ವರ್ತಮಾನಕ್ಕೆ ಬರೋಣ. ಸುಮಾರು 17 ವರ್ಷಗಳ ನಂತರ ಅದೇ ಏಪ್ರಿಲ್​ 18ರಂದು, ಅದೇ ಕ್ರೀಡಾಂಗಣದಲ್ಲಿ ಮತ್ತೆ ಆಡುವ ಅವಕಾಶ ಆರ್​ಸಿಬಿ ಸಿಕ್ಕಿತು. ಆದರೆ, ಈ ಬಾರಿ ಎದುರಾಳಿ ಮಾತ್ರ ಬೇರೆ. ಪಂಜಾಬ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮುಖಾಮುಖಿಯಾದವು. ಈ ಪಂದ್ಯದಲ್ಲಿ ಕೊಹ್ಲಿ ಮೂರು ಎಸೆತಗಳನ್ನು ಎದುರಿಸಿ ಒಂದು ರನ್​ ಗಳಿಸಿ ಪೆವಿಲಿಯನ್ ತಲುಪಿದರು. ಪಂಜಾಬ್ ಬೌಲರ್ ಅರ್ಷದೀಪ್​ ಸಿಂಗ್ ಬೌಲಿಂಗ್​ನಲ್ಲಿ ಔಟಾದರು. ಅಂದು ಕೊಲ್ಕತ್ತ ವಿರುದ್ಧ 9 ಓವರ್​ಗಲ್ಲಿ 7 ವಿಕೆಟ್​ ನಷ್ಟಕ್ಕೆ 43 ರನ್​ ಗಳಿಸಿತ್ತು. ನಿನ್ನೆಯೂ ಕೂಡ 9 ಓವರ್​ಗಳಲ್ಲಿ 43 ರನ್​ಗೆ ಆರ್​ಸಿಬಿ 7 ವಿಕೆಟ್​ ಕಳೆದುಕೊಂಡಿತು. ಅಂದು 5 ಎಸೆತ ಆಡಿ 1 ರನ್​ ಗಳಿಸಿದ್ದ ಕೊಹ್ಲಿ, ಇಂದು 3 ಎಸೆತ ಆಡಿ 1 ರನ್​ ಕಲೆ ಹಾಕಿದರು. ಇದನ್ನು ನೋಡಿದರೆ ಎಂಥಾ ಕಾಕತಾಳೀಯ ಎನಿಸದೇ ಇರದು. ಇದನ್ನು ನೋಡಿದ ಅಭಿಮಾನಿಗಳು 18 ವರ್ಷಗಳ ನಂತರ ಅದೇ ದೃಶ್ಯ ಪುನರಾವರ್ತನೆಯಾಗುತ್ತಿದೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

ಅಂದಹಾಗೆ ಕೊಹ್ಲಿ ಐಪಿಎಲ್‌ನ ಅತ್ಯಂತ ಯಶಸ್ವಿ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರು. ಇಲ್ಲಿಯವರೆಗೆ ಕೊಹ್ಲಿ 259 ಐಪಿಎಲ್ ಪಂದ್ಯಗಳನ್ನು ಆಡಿದ್ದಾರೆ. ಅವರು 38.9 ಸರಾಸರಿ ಮತ್ತು 132.2 ಸ್ಟ್ರೈಕ್ ರೇಟ್‌ನಲ್ಲಿ 8253 ರನ್ ಗಳಿಸಿದ್ದಾರೆ. ಇದರಲ್ಲಿ 8 ಶತಕಗಳು ಮತ್ತು 58 ಅರ್ಧಶತಕಗಳು ಸೇರಿವೆ.

ನಿನ್ನೆ ಬೆಂಗಳೂರಿನಲ್ಲಿ ಸುರಿದ ಮಳೆಯಿಂದಾಗಿ 14 ಓವರ್​ಗಳಿಗೆ ಮೊಟಕುಗೊಳಿಸಲಾದ ಪಂದ್ಯದಲ್ಲಿ ಆರ್​ಸಿಬಿ ಕೇವಲ 95 ರನ್ ಗಳಿಸಿತು. ಈ ಪಂದ್ಯವನ್ನು ಪಂಜಾಬ್ 5 ವಿಕೆಟ್​ಗಳಿಂದ ಗೆದ್ದುಕೊಂಡಿತು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net