

Varun Chakravarthy : ಗುರುವಾರ (ಏಪ್ರಿಲ್ 17) ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ (ಎಸ್ಆರ್ಎಚ್) ತಂಡವನ್ನು ನಾಲ್ಕು ವಿಕೆಟ್ಗಳಿಂದ ಸೋಲಿಸುವ ಮೂಲಕ ಮುಂಬೈ ಇಂಡಿಯನ್ಸ್ ತಂಡ ಐಪಿಎಲ್ 2025ರ ಸೀಸನ್ನಲ್ಲಿ ಮತ್ತೊಂದು ಗೆಲುವು ದಾಖಲಿಸಿತು. ಇದೇ ಪಂದ್ಯದಲ್ಲಿ ವಿಕೆಟ್ ಕೀಪರ್ ಹೆನ್ರಿಚ್ ಕ್ಲಾಸೆನ್ ಅವರು ಎಂಸಿಸಿ 27.3 ಕೋಡ್ ಅನ್ನು ಉಲ್ಲಂಘಿಸಿದರು. ಈ ಬಗ್ಗೆ ಮಿಸ್ಟರಿ ಸ್ಪಿನ್ನರ್ ಎಂದೇ ಖ್ಯಾತಿ ಪಡೆದಿರುವ ವರುಣ್ ಚಕ್ರವರ್ತಿ ಅಸಮಾಧಾನ ಹೊರಹಾಕಿದ್ದಾರೆ.
ಮುಂಬೈ ತಂಡದ ಬ್ಯಾಟಿಂಗ್ ವೇಳೆ ಎಸ್ಆರ್ಎಚ್ ತಂಡದ ಲೆಗ್-ಸ್ಪಿನ್ನರ್ ಜೀಶನ್ ಅನ್ಸಾರಿ ಅವರು 7ನೇ ಓವರ್ ಬೌಲಿಂಗ್ ಮಾಡಿದರು. ಆ ಓವರ್ನ ಐದನೇ ಎಸೆತದಲ್ಲಿ ರಯಾನ್ ರಿಕಲ್ಟನ್ ಕವರ್ಸ್ ಕಡೆಗೆ ಶಾಟ್ ಹೊಡೆದರು. ಅಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಸನ್ರೈಸರ್ಸ್ ನಾಯಕ ಪ್ಯಾಟ್ ಕಮ್ಮಿನ್ಸ್ ಉತ್ತಮ ಕ್ಯಾಚ್ ಪಡೆದರು. ಇದರೊಂದಿಗೆ, ರಿಕಲ್ಟನ್ ಹತಾಶೆಯಿಂದ ಪೆವಿಲಿಯನ್ಗೆ ನಡೆದರು. ಅಲ್ಲದೆ, ಬೌಂಡರಿ ಗೆರೆಯನ್ನು ದಾಟಿದರು. ಅದೇ ಸಮಯದಲ್ಲಿ ಮುಂದಿನ ಬ್ಯಾಟ್ಸ್ಮನ್ ಸೂರ್ಯಕುಮಾರ್ ಯಾದವ್ ಕೂಡ ಕ್ರೀಸ್ ಬಳಿ ಬಂದರು.
ಆದರೆ, ಬೌಂಡರಿ ಲೈನ್ ದಾಟಿ ಡಗೌಟ್ಗೆ ಹೋಗುತ್ತಿದ್ದ ರಯಾನ್ ರಿಕಲ್ಟನ್ ಅವರನ್ನು ನಾಲ್ಕನೇ ಅಂಪೈರ್ ತಡೆದರು. ಆ ಸಮಯದಲ್ಲಿ ಯಾರಿಗೂ ಏನೂ ನಡೆಯುತ್ತಿದೆ ಎಂಬುದು ಅರ್ಥವಾಗಲಿಲ್ಲ. ನಂತರ ಮೂರನೇ ಅಂಪೈರ್, ಇದು ಔಟ್ ಅಲ್ಲ ತೀರ್ಮಾನಿಸಿ, ಬ್ಯಾಟಿಂಗ್ ಮುಂದುವರಿಸಲು ರಿಕಲ್ಟನ್ಗೆ ಹೇಳಿದರು. ಹೀಗಾಗಿ ರಿಕಲ್ಟನ್ ಮತ್ತೆ ಮೈದಾನಕ್ಕೆ ಬಂದರು. ಇತ್ತ ಸೂರ್ಯ ಮತ್ತೆ ಡಗೌಟ್ಗೆ ಹೋದರು. ಆ ಹೊತ್ತಿಗೆ ರಯಾನ್ ಸ್ಕೋರ್ 21 ರನ್ ಆಗಿತ್ತು.
ಕ್ರೀಡಾಂಗಣದಲ್ಲಿದ್ದ ಪ್ರೇಕ್ಷಕರು ರಿಯಾನ್ ರಿಕಲ್ಟನ್ ಔಟಾಗದೇ ಇರಲು ಕಾರಣ ತಿಳಿಯದೆ ಸ್ವಲ್ಪ ಗೊಂದಲಕ್ಕೊಳಗಾದರು. ಅದು ಬೌಲರ್ ಎಸೆದ ಚೆಂಡು ನೋ-ಬಾಲ್ ಕೂಡ ಆಗಿರಲಿಲ್ಲ. ಆದರೆ, ಎಡವಟ್ಟು ಆಗಿದ್ದು ಎಲ್ಲಿ ಅಂದರೆ, ವಿಕೆಟ್ ಕೀಪರ್ ಹೆನ್ರಿಕ್ ಕ್ಲಾಸೆನ್ ತಪ್ಪು ಮಾಡಿದರು. ಬ್ಯಾಟರ್ ತನ್ನ ಬ್ಯಾಟ್ನಿಂದ ಚೆಂಡನ್ನು ಹೊಡೆಯುವ ಮುನ್ನವೇ, ಕ್ಲಾಸೆನ್ ಅವರ ಗ್ಲೌಸ್ಗಳು ವಿಕೆಟ್ಗಳ ಮುಂದೆ ಇದ್ದವು. ನಿಯಮ 27.3.1 ರ ಪ್ರಕಾರ, ಬೌಲರ್ ಚೆಂಡನ್ನು ಎಸೆದ ಕ್ಷಣದಿಂದ ಅದು ಸ್ಟ್ರೈಕರ್ನ ಬ್ಯಾಟ್ ಅಥವಾ ವ್ಯಕ್ತಿಯನ್ನು ಮುಟ್ಟುವವರೆಗೆ ಅಥವಾ ವಿಕೆಟ್ಗಳನ್ನು ದಾಟುವವರೆಗೆ ಅಥವಾ ಸ್ಟ್ರೈಕರ್ ರನ್ ಗಳಿಸಲು ಪ್ರಯತ್ನಿಸುವವರೆಗೆ ವಿಕೆಟ್-ಕೀಪರ್ ವಿಕೆಟ್ಗಳ ಹಿಂದೆಯೇ ಇರಬೇಕು. ತನ್ನ ಗ್ಲೌಸ್ ಅನ್ನು ವಿಕೆಟ್ಗಳ ಮುಂದೆ ತರಬಾರದು. ಒಂದು ವೇಳೆ ವಿಕೆಟ್-ಕೀಪರ್ ಈ ಕಾನೂನನ್ನು ಉಲ್ಲಂಘಿಸಿದರೆ, ಚೆಂಡನ್ನು ನೋ-ಬಾಲ್ ಎಂದು ಘೋಷಿಸಲಾಗುತ್ತದೆ. ಮುಂಬೈ ವಿರುದ್ಧದ ಪಂದ್ಯದಲ್ಲಿ, ಎಸ್ಆರ್ಎಚ್ ವಿಕೆಟ್ ಕೀಪರ್ ಹೆನ್ರಿಕ್ ಕ್ಲಾಸೆನ್ ಅವರ ಗ್ಲೌಸ್ ವಿಕೆಟ್ಗಳಿಗಿಂತ ಸ್ವಲ್ಪ ಮುಂದೆ ಬಂದಿತು. ಪರಿಣಾಮವಾಗಿ, ಅಂಪೈರ್ ಚೆಂಡನ್ನು ನೋ-ಬಾಲ್ ಎಂದು ಘೋಷಿಸಿದರು. ರಿಕಲ್ಟನ್ ಔಟ್ ಆದರೂ ನೋ-ಬಾಲ್ನಲ್ಲಿ ಔಟ್ ಆದ ಕಾರಣ ಅವರನ್ನು ವಾಪಸ್ ಕರೆಯಲಾಯಿತು.
ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಅಭಿಪ್ರಾಯ ಹಂಚಿಕೊಂಡಿರುವ ಕೆಕೆಆರ್ ತಂಡದ ಮಿಸ್ಟರಿ ಸ್ಪಿನ್ನರ್ ವರುಣ್ ಚಕ್ರವರ್ತಿ, ಇದರಲ್ಲಿ ಬೌಲರ್ ಜೀಶನ್ ಅನ್ಸಾರಿ ಅವರ ತಪ್ಪೇನಿದೆ? ಅವರಿಗೆ ಏಕೆ ಶಿಕ್ಷೆಯಾಗಬೇಕು? ಎಂದು ಪ್ರಶ್ನಿಸಿದ್ದಾರೆ. ಕೀಪರ್ನ ಗ್ಲೌಸ್ ಸ್ಟಂಪ್ ಮುಂದೆ ಬಂದರೆ, ಅದನ್ನು ಡೆಡ್ ಬಾಲ್ ಎಂದು ಘೋಷಿಸಬೇಕು ಮತ್ತು ಮತ್ತೆ ಆ ರೀತಿ ಮಾಡದಂತೆ ಕೀಪರ್ಗೆ ಎಚ್ಚರಿಕೆ ನೀಡಬೇಕು. ಆದರೆ, ಅದನ್ನು ಬಿಟ್ಟು ನೋ ಬಾಲ್ ಎಂದು ನಿರ್ಣಯಿಸಿ, ಫ್ರೀ ಹಿಟ್ ಕೊಡುವುದು ಸರಿಯಲ್ಲ. ಅಷ್ಟಕ್ಕೂ ಇದರಲ್ಲಿ ಬೌಲರ್ ತಪ್ಪೇನಿದೆ? ಈ ಬಗ್ಗೆ ನಾನು ತುಂಬಾ ಯೋಚಿಸುತ್ತಿದ್ದೇನೆ! ನೀವೆಲ್ಲರೂ ಏನು ಯೋಚಿಸುತ್ತೀರಿ? ಎಂದು ವರುಣ್ ಟ್ವೀಟ್ ಮಾಡಿದ್ದಾರೆ.
ಈ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡ ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ಗಳ ನಷ್ಟಕ್ಕೆ 162 ರನ್ ಗಳಿಸಿತು. ಅಭಿಷೇಕ್ ಶರ್ಮ (40 ರನ್, 28 ಎಸೆತ, 7 ಬೌಂಡರಿ) ಮತ್ತು ಹೆನ್ರಿಚ್ ಕ್ಲಾಸೆನ್ (37 ರನ್ 28 ಎಸೆತ, 3 ಬೌಂಡರಿ, 2 ಸಿಕ್ಸರ್) ಎಸ್ಆರ್ಎಚ್ ಪರ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ಮುಂಬೈ ಪರ ವಿಲ್ ಜ್ಯಾಕ್ಸ್ ಎರಡು ವಿಕೆಟ್ ಪಡೆದರೆ, ಟ್ರೆಂಟ್ ಬೌಲ್ಟ್, ಬುಮ್ರಾ ಮತ್ತು ಪಾಂಡ್ಯ ತಲಾ ಒಂದು ವಿಕೆಟ್ ಪಡೆದರು.
ಮುಂಬೈ ತಂಡವು 18.1 ಓವರ್ಗಳಲ್ಲಿ 6 ವಿಕೆಟ್ಗಳ ನಷ್ಟಕ್ಕೆ ಗುರಿಯನ್ನು ತಲುಪಿತು. ಮುಂಬೈ ಬ್ಯಾಟ್ಸ್ಮನ್ಗಳಾದ ರಯಾನ್ ರಿಕಲ್ಟನ್ (31 ರನ್, 23 ಎಸೆತ, 5 ಬೌಂಡರಿ), ವಿಲ್ ಜಾಕ್ಸ್ (36 ರನ್, 26 ಎಸೆತ, 3 ಬೌಂಡರಿಗಳು, 2 ಸಿಕ್ಸರ್), ಸೂರ್ಯಕುಮಾರ್ ಯಾದವ್ (26 ರನ್, 15 ಎಸೆತ, 2 ಬೌಂಡರಿ, 2 ಸಿಕ್ಸರ್), ಮತ್ತು ರೋಹಿತ್ ಶರ್ಮ (26 ರನ್, 16 ಎಸೆತ, 3 ಸಿಕ್ಸರ್) ಉತ್ತಮ ಪ್ರದರ್ಶನ ನೀಡಿದರು. ಎಸ್ಆರ್ಎಚ್ ಬೌಲರ್ಗಳಲ್ಲಿ ಪ್ಯಾಟ್ ಕಮ್ಮಿನ್ಸ್ ಮೂರು ವಿಕೆಟ್ ಪಡೆದರು. ಇಶಾನ್ ಮಾಲಿಂಗ ಎರಡು ವಿಕೆಟ್ ಪಡೆದರು. ಹರ್ಷಲ್ ಪಟೇಲ್ ಒಂದು ವಿಕೆಟ್ ಪಡೆದರು. (ಏಜೆನ್ಸೀಸ್)