ವಿರಾಟ್ ಕೊಹ್ಲಿಯನ್ನು ವಜಾಗೊಳಿಸಲು RCB ಸಿದ್ಧವಾಗಿತ್ತು.. ಶಾಕಿಂಗ್​ ಸಂಗತಿ ಬಿಚ್ಚಿಟ್ಟ ಆರ್​ಸಿಬಿ ಮಾಜಿ ಆಟಗಾರ! Virat Kohli

Virat Kohli
Published on

Virat Kohli : ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಹಾಗೂ ವಿರಾಟ್ ಕೊಹ್ಲಿ... ಈ ಎರಡು ಹೆಸರುಗಳನ್ನು ಯಾರಿಂದಲೂ ಬೇರ್ಪಡಿಸಲು ಸಾಧ್ಯವಿಲ್ಲ. ಈ ದಿಗ್ಗಜ ಬ್ಯಾಟ್ಸ್‌ಮನ್ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಆರಂಭದಿಂದಲೂ ಆರ್​ಸಿಬಿ ಭಾಗವಾಗಿದ್ದಾರೆ. ತಂಡದ ಪ್ರಮುಖ ಮುಖವಾದ ಕೊಹ್ಲಿಯಿಂದಾಗಿ RCB ಅಪಾರ ಅಭಿಮಾನಿಗಳನ್ನು ಹೊಂದಿದೆ ಎಂಬುದರಲ್ಲಿ ಸಂದೇಹವೇ ಇಲ್ಲ.

ಆದಾಗ್ಯೂ, ವಿರಾಟ್​ ಕೊಹ್ಲಿ ನಾಯಕನಾಗಿ ಆರ್‌ಸಿಬಿಗೆ ಪ್ರಶಸ್ತಿಯನ್ನು ತಂದುಕೊಡುವಲ್ಲಿ ವಿಫಲರಾದರು. ಅವರ ಅದ್ಭುತ ಬ್ಯಾಟಿಂಗ್ ಹೊರತಾಗಿಯೂ, ಅವರು ನಾಯಕನಾಗಿ ಟ್ರೋಫಿಯನ್ನು ನೀಡಲು ಸಾಧ್ಯವಾಗಲಿಲ್ಲ. ಮಧ್ಯಪ್ರದೇಶದ ಆಟಗಾರ ರಜತ್ ಪಾಟಿದಾರ್ ಕೊಹ್ಲಿಯಿಂದ ಸಾದ್ಯವಾಗದ ಸಾಧನೆಯನ್ನು ಇತ್ತೀಚೆಗೆ ಮಾಡಿದರು. ಅವರು ಐಪಿಎಲ್-2025 ರಲ್ಲಿ ಆರ್‌ಸಿಬಿಯನ್ನು ಚೊಚ್ಚಲ ಪ್ರಶಸ್ತಿಗೆ ಕೊಂಡೊಯ್ದರು.

ವಿರಾಟ್​ ಕೊಹ್ಲಿ ಅವರು ನಾಯಕನಾಗಿ ದಯನೀಯವಾಗಿ ವಿಫಲರಾದಾಗ ಆರ್‌ಸಿಬಿ ಆಡಳಿತ ಮಂಡಳಿಯು 2019ರಲ್ಲಿ ಕೊಹ್ಲಿಯನ್ನು ನಾಯಕತ್ವದಿಂದ ತೆಗೆದುಹಾಕುವ ಬಗ್ಗೆ ಯೋಚಿಸಿತ್ತು ಎಂದು ಹೇಳಲಾಗುತ್ತಿದೆ. ಅವರ ಸ್ಥಾನದಲ್ಲಿ ಮಾಜಿ ಭಾರತೀಯ ಕ್ರಿಕೆಟಿಗ ಪಾರ್ಥಿವ್ ಪಟೇಲ್ ಅವರನ್ನು ನಾಯಕನನ್ನಾಗಿ ನೇಮಿಸಲು ಆರ್​ಸಿಬಿ ಬಯಸಿತ್ತು. ಈ ವಿಚಾರವನ್ನು ಮಾಜಿ ಆರ್‌ಸಿಬಿ ಆಟಗಾರ ಮತ್ತು ಇಂಗ್ಲೆಂಡ್ ಆಟಗಾರ ಮೊಯಿನ್ ಅಲಿ ಇತ್ತೀಚೆಗೆ ಬಹಿರಂಗಪಡಿಸಿದ್ದಾರೆ.

ಗ್ಯಾರಿ ಕರ್ಸ್ಟನ್ ಕೋಚ್ ಆಗಿದ್ದಾಗ ಪಾರ್ಥಿವ್ ಪಟೇಲ್ ಅವರನ್ನು ನಾಯಕನನ್ನಾಗಿ ನೇಮಿಸಲು ಪ್ರಯತ್ನಗಳು ನಡೆದಿದ್ದವು. ರೇಸ್‌ನಲ್ಲಿ ಪಾರ್ಥಿವ್ ಪಟೇಲ್ ಬಗ್ಗೆ ಚರ್ಚೆಗಳು ನಡೆದವು. ಆದರೆ, ನಂತರ ಏನಾಯಿತು ಎಂದು ನನಗೆ ತಿಳಿದಿಲ್ಲ. ಪಾರ್ಥಿವ್ ಪಟೇಲ್ ನಾಯಕನಾಗಲಿಲ್ಲ. ಆದಾಗ್ಯೂ, ಅವರ ಹೆಸರನ್ನು ನಾಯಕತ್ವಕ್ಕೆ ಗಂಭೀರವಾಗಿ ಪರಿಗಣಿಸಲಾಗಿತ್ತು ಎಂದು ಮೊಯಿನ್ ಅಲಿ ಇಂಡಿಯಾ ಟುಡೇಗೆ ತಿಳಿಸಿದ್ದಾರೆ.

ಅಂದಹಾಗೆ, 2019ರಲ್ಲಿ ಆರ್‌ಸಿಬಿ ಶೋಚನೀಯವಾಗಿ ವಿಫಲವಾಯಿತು. ಕೊಹ್ಲಿ ನಾಯಕತ್ವದಲ್ಲಿ ಹದಿನಾಲ್ಕು ಪಂದ್ಯಗಳಲ್ಲಿ ಕೇವಲ ಐದು ಪಂದ್ಯಗಳನ್ನು ಗೆದ್ದರು ಮತ್ತು ಪಾಯಿಂಟ್ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದ್ದರು. ಎರಡು ವರ್ಷಗಳ ನಂತರ, ಅಂದರೆ 2021 ರಲ್ಲಿ ಕೊಹ್ಲಿ, ಆರ್‌ಸಿಬಿ ನಾಯಕತ್ವದಿಂದ ಕೆಳಗಿಳಿದು ಕೇವಲ ಆಟಗಾರನಾಗಿ ಮುಂದುವರೆದರು.

ಇದಾದ ಬಳಿಕ ದಕ್ಷಿಣ ಆಫ್ರಿಕಾದ ದಂತಕಥೆ ಫಾಫ್ ಡು ಪ್ಲೆಸಿಸ್ 2024 ರವರೆಗೆ ನಾಯಕನಾಗಿ ಮುಂದುವರೆದರು. ಈ ವರ್ಷ, ರಜತ್ ಪಾಟಿದಾರ್ ಅವರನ್ನು ಆರ್‌ಸಿಬಿ ನಾಯಕರನ್ನಾಗಿ ನೇಮಿಸಲಾಯಿತು ಮತ್ತು ತಮ್ಮ ಮೊದಲ ಪ್ರಯತ್ನದಲ್ಲೇ ರಜತ್​ ಟ್ರೋಫಿಯನ್ನು ಗೆದ್ದರು.

ಇನ್ನು ವಿರಾಟ್​ ಕೊಹ್ಲಿ ಐಪಿಎಲ್‌ನಲ್ಲಿ ಆರ್‌ಸಿಬಿ ಪರ 267 ಪಂದ್ಯಗಳನ್ನು ಆಡಿದ್ದಾರೆ ಮತ್ತು 8661 ರನ್ ಗಳಿಸಿದ್ದಾರೆ. ಇದರಲ್ಲಿ ದಾಖಲೆಯ ಎಂಟು ಶತಕಗಳು ಸೇರಿವೆ. ಕಳೆದ ವರ್ಷ ಅಂತಾರಾಷ್ಟ್ರೀಯ ಟಿ20 ಸ್ವರೂಪಕ್ಕೆ ವಿದಾಯ ಹೇಳಿದ್ದ ಕೊಹ್ಲಿ, ಇತ್ತೀಚೆಗೆ ಟೆಸ್ಟ್‌ಗಳಿಗೂ ವಿದಾಯ ಹೇಳಿದರು. ಅವರು ಪ್ರಸ್ತುತ ಐಪಿಎಲ್‌ನಲ್ಲಿ ಹಾಗೂ ಏಕದಿನ ಪಂದ್ಯಗಳಲ್ಲಿ ಮುಂದುವರೆದಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net