

ಬೆಂಗಳೂರು: ಐಪಿಎಲ್ 17ನೇ ಆವೃತ್ತಿಯ ಆಟಗಾರರ ಹರಾಜು ಪ್ರಕ್ರಿಯೆಗೆ ಮುನ್ನ ಆರ್ಸಿಬಿ ತಂಡ ತನ್ನ ಆಟಗಾರರ ರಿಟೇನ್ ಪಟ್ಟಿಯನ್ನು ಅಂತಿಮಗೊಳಿಸಿದ್ದು, ಕೆಲ ಪ್ರಮುಖ ಆಟಗಾರರನ್ನು ರಿಲೀಸ್ ಮಾಡಿದೆ. ಆರ್ಸಿಬಿ ತಂಡ ಪ್ರಮುಖರಾದ ವೇಗಿ ಹರ್ಷಲ್ ಪಟೇಲ್, ಲಂಕಾ ಸ್ಪಿನ್ನರ್ ವಾನಿಂದು ಹಸರಂಗ ಮತ್ತು ಆಸೀಸ್ ವೇಗಿ ಜೋಶ್ ಹ್ಯಾಸಲ್ವುಡ್ರನ್ನು ಕೈಬಿಟ್ಟು ಅಚ್ಚರಿ ಮೂಡಿಸಿದೆ.
ಅನುಭವಿ ವಿಕೆಟ್ ಕೀಪರ್-ಬ್ಯಾಟರ್ ದಿನೇಶ್ ಕಾರ್ತಿಕ್ರನ್ನೂ ಆರ್ಸಿಬಿ ಕೈಬಿಡುವ ಸಾಧ್ಯತೆ ಇದ್ದರೂ, ಅವರನ್ನು ತಂಡದಲ್ಲಿ ರಿಟೇನ್ ಮಾಡಿಕೊಂಡಿದೆ. ಇದೇ ರೀತಿ ಅನುಜ್ ರಾವತ್ ಕೂಡ ಸೇಫ್ ಆಗಿದ್ದಾರೆ. ಇದೇ ವೇಳೆ ತಂಡದಲ್ಲಿರುವ ಇಬ್ಬರು ಕನ್ನಡಿಗರಾದ ವೈಶಾಕ್ ವಿಜಯ್ಕುಮಾರ್ ಮತ್ತು ಮನೋಜ್ ಭಾಂಡಗೆ ಅವರನ್ನು ರಿಟೇನ್ ಮಾಡಿಕೊಂಡಿದೆ.
ಆರ್ಸಿಬಿ ತಂಡ ಪ್ರಮುಖವಾಗಿ ಕೆಲ ಬೌಲರ್ಗಳನ್ನು ಕೈಬಿಟ್ಟುದ್ದು, ಮುಂಬರುವ ಹರಾಜಿನಲ್ಲಿ ಬೌಲಿಂಗ್ ವಿಭಾಗವನ್ನು ಬಲಪಡಿಸಿಕೊಳ್ಳಬೇಕಾದ ಅಗತ್ಯವೂ ಎದುರಾಗಿದೆ. ಈ ನಡುವೆ, ಕೆಲ ಆವೃತ್ತಿಗಳ ಹಿಂದೆಯಷ್ಟೇ ಐಪಿಎಲ್ನಲ್ಲಿ ಗರಿಷ್ಠ ವಿಕೆಟ್ ಕಬಳಿಸಿದ ಸಾಧನೆ ಮಾಡಿದ್ದ ವೇಗಿ ಹರ್ಷಲ್ ಪಟೇಲ್ರನ್ನು ಕೈಬಿಟ್ಟಿರುವ ಆರ್ಸಿಬಿ ನಡೆ ಸಾಕಷ್ಟು ಟೀಕೆಗಳಿಗೂ ಗುರಿಯಾಗಿದೆ. ಈ ಹಿಂದೆ ಪ್ರಮುಖ ಸ್ಪಿನ್ನರ್ ಯಜುವೇಂದ್ರ ಚಾಹಲ್ರನ್ನು ಕೈಬಿಟ್ಟು ಎಡವಟ್ಟು ಮಾಡಿಕೊಂಡಿದ್ದ ಆರ್ಸಿಬಿ, ಹರ್ಷಲ್ ಜತೆಯಲ್ಲೂ ಅಂಥದ್ದೇ ತಪ್ಪು ಹೆಜ್ಜೆ ಇಟ್ಟಿದೆ ಎಂದು ದೂರಲಾಗುತ್ತಿದೆ. ಇನ್ನು ಆಸೀಸ್ ವೇಗಿ ಜೋಶ್ ಹ್ಯಾಸಲ್ವುಡ್ ಏಪ್ರಿಲ್ನಲ್ಲಿ ಮಗುವಿನ ನಿರೀಕ್ಷೆಯಲ್ಲಿದ್ದು, ಆ ಸಮಯದಲ್ಲಿ ಪತ್ನಿ ಜತೆಯಲ್ಲಿರಲು ಬಯಸಿರುವುದರಿಂದ ಐಪಿಎಲ್ನಲ್ಲಿ ಕೆಲ ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ. ಹೀಗಾಗಿ ಆರ್ಸಿಬಿ ಅವರನ್ನು ಕೈಬಿಟ್ಟಿದೆ ಎನ್ನಲಾಗುತ್ತಿದೆ.
ಆರ್ಸಿಬಿ ತಂಡ ಹೀಗಿದೆ:
ರಿಲೀಸ್: ವಾನಿಂದು ಹಸರಂಗ, ಜೋಶ್ ಹ್ಯಾಸಲ್ವುಡ್, ಹರ್ಷಲ್ ಪಟೇಲ್, ಫಿನ್ ಅಲೆನ್, ಮಿಚೆಲ್ ಬ್ರೇಸ್ವೆಲ್, ಕೇದಾರ್ ಜಾಧವ್, ಡೇವಿಡ್ ವಿಲ್ಲಿ, ವೇಯ್ನ್ ಪಾರ್ನೆಲ್, ಸೋನು ಯಾದವ್, ಅವಿನಾಶ್ ಸಿಂಗ್, ಸಿದ್ಧಾರ್ಥ್ ಕೌಲ್.
ರಿಟೇನ್: ಫಾಫ್ ಡು ಪ್ಲೆಸಿಸ್, ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್ವೆಲ್, ದಿನೇಶ್ ಕಾರ್ತಿಕ್, ರಜತ್ ಪಾಟಿದಾರ್, ಅನುಜ್ ರಾವತ್, ಸುಯಶ್ ಪ್ರಭುದೇಸಾಯಿ, ವಿಲ್ ಜಾಕ್ಸ್, ಮಹಿಪಾಲ್ ಲೊಮ್ರೊರ್, ಕರ್ಣ್ ಶರ್ಮ, ಮನೋಜ್ ಭಾಂಡಗೆ, ವೈಶಾಕ್ ವಿಜಯ್ಕುಮಾರ್, ಆಕಾಶ್ದೀಪ್, ಮೊಹಮದ್ ಸಿರಾಜ್, ರೀಸ್ ಟಾಪ್ಲೆ, ಹಿಮಾಂಶು ಶರ್ಮ, ರಾಜನ್ ಕುಮಾರ್.
ವರ್ಗಾವಣೆ: ಮಯಾಂಕ್ ದಾಗರ್ (ಸನ್ರೈಸರ್ಸ್ನಿಂದ).
ಹರಾಜಿನಲ್ಲಿ ಹೊಸ ಆಟಗಾರರ ಖರೀದಿಗೆ ಉಳಿದ ಮೊತ್ತ: 40.75 ಕೋಟಿ ರೂ.