ಬೆಂಗಳೂರಿನಲ್ಲಿ ಇಂದು ಆರ್​ಸಿಬಿ-ಸಿಎಸ್​ಕೆ ಕಾವೇರಿದ ಕಾದಾಟ; ಪ್ಲೇಆಫ್​​ನತ್ತ ಪಾಟೀದಾರ್​ ಪಡೆ ಚಿತ್ತ

web rcb vs csk
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ಭರ್ಜರಿ ಗೆಲುವಿನ ಲಯದಲ್ಲಿರುವ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಮತ್ತು ಸತತ ಸೋಲಿನಿಂದ ಕಂಗೆಟ್ಟಿರುವ ಚೆನ್ನೈ ಸೂಪರ್​ಕಿಂಗ್ಸ್​ ತಂಡಗಳು ಐಪಿಎಲ್​ 18ನೇ ಆವೃತ್ತಿಯಲ್ಲಿ ಶನಿವಾರ ಚಿನ್ನಸ್ವಾಮಿ ಸ್ಟೇಡಿಂನಲ್ಲಿ ಮುಖಾಮುಖಿ ಆಗಲಿವೆ. ರಜತ್​ ಪಾಟೀದಾರ್​ ಪಡೆ ಗೆಲುವಿನೊಂದಿಗೆ ಪ್ಲೇಆಫ್​ ಪ್ರವೇಶ ಖಚಿತಪಡಿಸಿಕೊಳ್ಳುವ ಹಂಬಲದಲ್ಲಿದ್ದರೆ, ಈಗಾಗಲೆ ಪ್ರಶಸ್ತಿ ರೇಸ್​ನಿಂದ ಹೊರಬಿದ್ದಿರುವ ಎಂಎಸ್​ ಧೋನಿ ಪಡೆ ಸಮಾಧಾನಕರ ಗೆಲುವಿನ ನಿರೀಕ್ಷೆಯಲ್ಲಿದೆ.

ಆರ್​ಸಿಬಿ ತಂಡ ಇದುವರೆಗೆ ಆಡಿರುವ 10 ಪಂದ್ಯಗಳಲ್ಲಿ 7ರಲ್ಲಿ ಗೆದ್ದು, 3 ಸೋಲಿನೊಂದಿಗೆ 14 ಅಂಕ ಕಲೆಹಾಕಿದೆ. 8ನೇ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಮರಳುವ ಮೂಲಕ ಪ್ಲೇಆಫ್​ ಪ್ರವೇಶವನ್ನೂ ಖಾತ್ರಿಪಡಿಸಿಕೊಳ್ಳುವ ಅವಕಾಶ ಆರ್​ಸಿಬಿ ಮುಂದಿದೆ. ಆದರೆ ಈಗ ಆರ್​ಸಿಬಿ ಗುರಿ ಪ್ಲೇಆಫ್​ಗೇರುವುದು ಮಾತ್ರವಲ್ಲದೆ, ಅಂಕಪಟ್ಟಿಯಲ್ಲಿ ಅಗ್ರ 2ರೊಳಗಿ ಸ್ಥಾನ ಸಂಪಾದಿಸುವುದಾಗಿದೆ. ಹೀಗಾಗಿ ಆರ್​ಸಿಬಿ ಉಳಿದ 4 ಪಂದ್ಯಗಳಲ್ಲಿ ಇನ್ನೂ 2&3 ಗೆಲುವಿನ ಅಗತ್ಯವಿದೆ.

ಮತ್ತೊಂದೆಡೆ ಸಿಎಸ್​ಕೆ ತಂಡಕ್ಕೆ ಈ ಬಾರಿ ನಿರೀಕ್ಷಿತ ಫಲಿತಾಂಶ ಸಿಕ್ಕಿಲ್ಲ. ಇದುವರೆಗೆ ಆಡಿರುವ 10 ಪಂದ್ಯಗಳಲ್ಲಿ 2ರಲ್ಲಷ್ಟೇ ಗೆದ್ದು, 8ರಲ್ಲಿ ಸೋತಿರುವ ಸಿಎಸ್​ಕೆ ಈಗಾಗಲೆ ಪ್ಲೇಆ್​ ರೇಸ್​ನಿಂದ ಹೊರಬಿದ್ದಿದೆ. ಇನ್ನು ಕನಿಷ್ಠ ಕೊನೇ ಸ್ಥಾನದಿಂದ ಪಾರಾಗುವ ಅವಕಾಶವಷ್ಟೇ ಸಿಎಸ್​ಕೆ ಮುಂದಿದೆ. ಜತೆಗೆ ಇತರ ಕೆಲ ತಂಡಗಳ ಪ್ಲೇಆಫ್​ ಲೆಕ್ಕಾಚಾರವನ್ನು ತಪ್ಪಿಸಲು ಪ್ರಯತ್ನಿಸಬಹುದಾಗಿದೆ.

ಧೋನಿ-ಕೊಹ್ಲಿ ಮುಖಾಮುಖಿ

ಕಳೆದ 2 ಆವೃತ್ತಿಗಳಿಂದ ಆರ್​ಸಿಬಿ-ಸಿಎಸ್​ಕೆ ಎದುರಾದಾಗಲೆಲ್ಲಾ, ಇದೇ ವಿರಾಟ್​ ಕೊಹ್ಲಿ-ಎಂಎಸ್​ ಧೋನಿ ನಡುವಿನ ಕೊನೇ ಮುಖಾಮುಖಿ ಆಗಬಹುದೇ ಎಂಬ ಪ್ರಶ್ನೆ ಮೂಡುತಿತ್ತು. ಈ ಸಲವೂ ಮತ್ತೆ ಅದೇ ಪ್ರಶ್ನೆ ಎದ್ದಿದೆ. ಆದರೆ ಧೋನಿ ಈ ಸಲವೂ ಐಪಿಎಲ್​ನಿಂದ ನಿವೃತ್ತಿ ಹೊಂದುವ ಲಕ್ಷಣ ಇದುವರೆಗೆ ಕಾಣಿಸಿಲ್ಲ. ಇದರ ನಡುವೆ ಉಭಯ ಆಟಗಾರರ ಅಭಿಮಾನಿಗಳು ಮತ್ತೊಂದು ಮುಖಾಮುಖಿಯನ್ನು ಆನಂದಿಸುವ ತವಕದಲ್ಲಿದ್ದಾರೆ.

ಭರ್ಜರಿ ಲಯದಲ್ಲಿ ಆರ್​ಸಿಬಿ

ಆಡಿರುವ ಕೊನೇ 3 ಪಂದ್ಯಗಳಲ್ಲಿ ಗೆದ್ದಿರುವ ಆರ್​ಸಿಬಿ ಭರ್ಜರಿ ಲಯದಲ್ಲಿದೆ. ತವರಿನಲ್ಲಿ ಆರಂಭಿಕ 3 ಪಂದ್ಯಗಳಲ್ಲಿ ಸೋತಿದ್ದ ಆರ್​ಸಿಬಿ, ರಾಜಸ್ಥಾನ ವಿರುದ್ಧದ ಗೆಲುವಿನೊಂದಿಗೆ ಮನೆಯಂಗಳದಲ್ಲೂ ಜಯದ ಖಾತೆ ತೆರೆದಿದೆ. ಈ ಬಾರಿ ತವರಿನಲ್ಲೂ ಗೆಲುವಿನ ಓಟ ಮುಂದುವರಿಸುವುದು ಆರ್​ಸಿಬಿ ಹಂಬಲವಾಗಿದೆ. ಇದುವರೆಗೆ 443 ರನ್​ ಸಿಡಿಸಿರುವ ವಿರಾಟ್​ ಕೊಹ್ಲಿ ಮತ್ತೆ ಆರೆಂಜ್​ ಕ್ಯಾಪ್​ ಒಲಿಸಿಕೊಳ್ಳುವ ಹಂಬಲದಲ್ಲಿದ್ದು, ಅವರಿಗ ಕನ್ನಡಿಗ ದೇವದತ್​ ಪಡಿಕ್ಕಲ್​ (230) ಉತ್ತಮ ಬೆಂಬಲ ಒದಗಿಸುತ್ತಿದ್ದಾರೆ. ಅನಾರೋಗ್ಯದಿಂದಾಗಿ ಕಳೆದ ಪಂದ್ಯ ತಪ್ಪಿಸಿಕೊಂಡಿದ್ದ ಫಿಲ್​ ಸಾಲ್ಟ್​ (239) ಈ ಬಾರಿ ಮರಳಿ ಕಣಕ್ಕಿಳಿಯುವ ನಿರೀಕ್ಷೆ ಇದೆ. ಬೌಲಿಂಗ್​ನಲ್ಲಿ ಹ್ಯಾಸಲ್​ವುಡ್​ (18), ಕೃನಾಲ್​ ಪಾಂಡ್ಯ (13), ಭುವನೇಶ್ವರ್​ (12) ಪ್ರಮುಖ ಅಸ್ತ್ರವೆನಿಸಿದ್ದಾರೆ.

ಕೊನೇ ಹಣಾಹಣಿ...

ಕಳೆದ ವರ್ಷ ಬೆಂಗಳೂರಿನಲ್ಲೇ ಆರ್​ಸಿಬಿ&ಸಿಎಸ್​ಕೆ ಮುಖಾಮುಖಿ ಆದಾಗ ಉಭಯ ತಂಡಗಳಿಗೂ ಅದು ಮಾಡು ಇಲ್ಲವೆ ಮಡಿ ಪಂದ್ಯವಾಗಿತ್ತು. ಆಗ ಆರ್​ಸಿಬಿ 27 ರನ್​ಗಳಿಂದ ಗೆದ್ದು ಪ್ಲೇಆ್​ಗೇರಿದ್ದರೆ, ಸಿಎಸ್​ಕೆ ಹೊರಬಿದ್ದಿತ್ತು. ಆ ಹೈವೋಲ್ಟೇಜ್​ ಪಂದ್ಯದಲ್ಲಿ ಆರ್​ಸಿಬಿ 218 ರನ್​ ಪೇರಿಸಿದ್ದರೆ, ಸಿಎಸ್​ಕೆ 7 ವಿಕೆಟ್​ಗೆ 191 ರನ್​ ಗಳಿಸಲಷ್ಟೇ ಶಕ್ತವಾಗಿತ್ತು. ಹಾಲಿ ವರ್ಷ ಚೆಪಾಕ್​ನಲ್ಲಿ ಉಭಯ ತಂಡಗಳು ಮೊದಲ ಬಾರಿ ಮುಖಾಮುಖಿ ಆದಾಗ ಆರ್​ಸಿಬಿ 50 ರನ್​ಗಳಿಂದ ಗೆದ್ದು ಬೀಗಿತ್ತು. ಇದೀಗ ಆರ್​ಸಿಬಿ, ಸಿಎಸ್​ಕೆ ಎದುರು ಗೆಲುವಿನ ಹ್ಯಾಟ್ರಿಕ್​ ಸಾಧಿಸುವ ಗುರಿಯಲ್ಲಿದ್ದರೆ, ಧೋನಿ ಪಡೆ ಸೇಡಿನ ತವಕದಲ್ಲಿದೆ.

ಮುಖಾಮುಖಿ: 34

ಆರ್​ಸಿಬಿ: 12

ಸಿಎಸ್​ಕೆ: 21

ರದ್ದು: 1

*ಆರಂಭ: ರಾತ್ರಿ 7.30

ನೇರಪ್ರಸಾರ: ಸ್ಟಾರ್​ ಸ್ಪೋರ್ಟ್ಸ್​, ಜಿಯೋ ಹಾಟ್​ಸ್ಟಾರ್​.

ಮಳೆ ಭೀತಿ...

ಉದ್ಯಾನನಗರಿಯಲ್ಲಿ ಶುಕ್ರವಾರ ಸಂಜೆ ಮಳೆಯಾಗಿದ್ದು, ಶನಿವಾರವೂ ಲು ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇದರಿಂದಾಗಿ ಆರ್​ಸಿಬಿ-ಸಿಎಸ್​ಕೆ ಪಂದ್ಯ ಮಳೆ ಅಡಚಣೆ ಎದುರಿಸುವ ಭೀತಿ ಇದೆ. ಈ ಮುನ್ನ ಪಂಜಾಬ್​ ವಿರುದ್ಧದ ಪಂದ್ಯ ಮಳೆ ಅಡಚಣೆಯಿಂದ ತಲಾ 14 ಓವರ್​ಗಳಿಗೆ ಕಡಿತಗೊಂಡಿತ್ತು. ಸಿಎಸ್​ಕೆ ನಡುವಿನ ಪಂದ್ಯವೂ ಸಂಪೂರ್ಣ ರದ್ದಾಗುವ ಸಾಧ್ಯತೆ ಕಡಿಮೆ. ಚಿನ್ನಸ್ವಾಮಿ ಸ್ಟೇಡಿಯಂನ ಮಳೆ ನೀರು ಇಂಗಿಸುವ ಸಬ್​ಏರ್​ ಸಿಸ್ಟಮ್​ನಿಂದಾಗಿ ಪಂದ್ಯದಲ್ಲಿ ಸ್ಪಷ್ಟ ಲಿತಾಂಶ ನಿರೀಕ್ಷಿಸಬಹುದಾಗಿದೆ.

ಭವಿಷ್ಯದ ತಂಡ, ಸಿಎಸ್​ಕೆ ಗುರಿ

ಇದೇ ಮೊದಲ ಬಾರಿಗೆ ಐಪಿಎಲ್​ನಲ್ಲಿ ಸತತ 2 ವರ್ಷ ಪ್ಲೇಆಫ್​ಗೇರುವಲ್ಲಿ ವಿಫಲವಾಗಿರುವ ಸಿಎಸ್​ಕೆ ಇನ್ನು ಭವಿಷ್ಯದ ತಂಡ ಕಟ್ಟುವತ್ತ ಗಮನಹರಿಸಲಿದೆ. ಈಗಾಗಲೆ ಶೇಕ್​ ರಶೀದ್​, ಆಯುಷ್​ ಮಹಾತ್ರೆ, ಡಿವಾಲ್ಡ್​ ಬ್ರೆವಿಸ್​, ನೂರ್​ ಅಹ್ಮದ್​, ಅಂಶುಲ್​ ಕಂಬೋಜ್​ ಅವರಂಥ ಯುವ ಆಟಗಾರರಿಗೆ ಸಿಎಸ್​ಕೆ ಹೆಚ್ಚು ಹೆಚ್ಚು ಅವಕಾಶ ನೀಡುತ್ತಿದೆ. ಮುಂಬರುವ ಪಂದ್ಯಗಳಲ್ಲಿ ತಂಡದ ಇತರ ಮೀಸಲು ಆಟಗಾರರೂ ಅವಕಾಶ ಪಡೆಯಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net