

RCB: ಪ್ರಸ್ತುತ ಐಪಿಎಲ್ 18ನೇ ಆವೃತ್ತಿಯ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿ ಕುಳಿತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಸತತವಾಗಿ ಉತ್ತಮ ಆಲ್ರೌಂಡ್ ಪ್ರದರ್ಶನದಿಂದ ಪಂದ್ಯಗಳನ್ನು ಗೆದ್ದು, ಕ್ರಿಕೆಟ್ ಪ್ರಿಯರ ಮೆಚ್ಚುಗೆಗೆ ಪಾತ್ರವಾಗಿದೆ.
ಆಡಿರುವ 10 ಪಂದ್ಯಗಳಲ್ಲಿ 7 ಭರ್ಜರಿ ಗೆಲುವು ದಾಖಲಿಸಿರುವ ಆರ್ಸಿಬಿ, ಮೂರು ಪಂದ್ಯಗಳನ್ನು ತನ್ನ ತವರಿನಲ್ಲೇ ಸೋತಿದೆ. ಮುಂಬೈ ಇಂಡಿಯನ್ಸ್, ಗುಜರಾತ್ ಟೈಟನ್ಸ್ ನಂತರದ ಸ್ಥಾನದಲ್ಲಿ ಮಿಂಚುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಇಂದು (ಮೇ.03) ಬೆಂಗಳೂರಿನ ಎಂ. ಚಿನ್ನಸ್ವಾಮಿಯಲ್ಲಿ ನಡೆಯಲಿರುವ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯವನ್ನು ಗೆದ್ದು, ಅಂಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವ ತವಕದಲ್ಲಿದೆ.
ಐಪಿಎಲ್ ಶುರುವಾದಗಿನಿಂದಲೂ ಒಂದು ಬಾರಿಯೂ ಕಪ್ ಗೆಲ್ಲದ ಆರ್ಸಿಬಿ, ಫ್ಯಾನ್ಸ್ಗಳ ಭಾರೀ ನಿರಾಶೆಗೆ ಗುರಿಯಾಗಿದೆ. ಕಳೆದ ಬಾರಿ ಸಿಎಸ್ಕೆ ವಿರುದ್ಧ ಗೆದ್ದು, ಪ್ಲೇಆಫ್ಗೆ ಎಂಟ್ರಿ ಕೊಟ್ಟಿದ್ದೇ ಆದರೂ ಅಲ್ಲಿಂದ ಮುಂದಿನ ಹಂತಕ್ಕೆ ಹೋಗುವಲ್ಲಿ ಮುಗ್ಗರಿಸಿತು. ಇದು ಫ್ರಾಂಚೈಸಿಯ ಅಪಾರ ಅಭಿಮಾನಿಗಳ ಬಳಗಕ್ಕೆ ಬೇಸರ ತಂದಿತ್ತು. ಆದರೆ, ಈ ಬಾರಿಯ ಆವೃತ್ತಿಯಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ ಪ್ರದರ್ಶನದಲ್ಲಿ ಮಿಂಚಿರುವ ರಜತ್ ಪಾಟೀದಾರ್ ಪಡೆ, ಅಭಿಮಾನಿಗಳಲ್ಲಿ 'ಈ ಸಲ ಕಪ್ ನಮ್ದೇ' ಎಂಬ ಭರವಸೆಯನ್ನು ಗಟ್ಟಿಯಾಗಿಸಿದೆ. ಇದಕ್ಕೆ ಟೀಮ್ ಇಂಡಿಯಾ ದಿಗ್ಗಜ ಸುನಿಲ್ ಗವಾಸ್ಕರ್ ಕೂಡ ಜೊತೆಯಾಗಿದ್ದಾರೆ.
"18ನೇ ಆವೃತ್ತಿಯಲ್ಲಿ ಆರ್ಸಿಬಿ ಅದ್ಭುತವಾಗಿ ಬ್ಯಾಟ್ ಮಾಡಿದೆ. ಫೀಲ್ಡಿಂಗ್ ಕೂಡ ಅಷ್ಟೇ ಅದ್ಭುತವಾಗಿದೆ. ಮುಂಬೈ ಇಂಡಿಯನ್ಸ್ ಈಗ ಗೆಲುವಿನ ಲಯಕ್ಕೆ ಮರಳಿದ್ದಾರೆ. ಅವರಿಗೆ ಇನ್ನೂ 3 ಪಂದ್ಯಗಳು ಬಲಿಷ್ಠ ತಂಡಗಳ ಜೊತೆಗಿದೆ. ಅದರಲ್ಲಿ ಹೇಗೆ ಆಡಲಿದ್ದಾರೆ? ಯಾವ ಸ್ಥಾನದಲ್ಲಿ ಉಳಿಯುತ್ತಾರೆ ಎಂಬುದು ಪ್ರಶ್ನೆ. ಇಲ್ಲಿ ಆರ್ಸಿಬಿ ತನ್ನ ಕಪ್ ಗೆಲ್ಲದ ಸರಣಿಯನ್ನು ಮುರಿದು, ಈ ಬಾರಿಯ ಟ್ರೋಫಿ ಎತ್ತಲಿ. ಅವರು ಐಪಿಎಲ್ ಕಪ್ಗೆ ಅರ್ಹರು" ಎಂದು ಹೊಗಳಿದ್ದಾರೆ,(ಏಜೆನ್ಸೀಸ್).