ಸಾಲಗಾರರಿಗೆ ಸಂತಸ ಸುದ್ದಿಯನ್ನು ನೀಡಿದ ಆರ್​ಬಿಐ: ರೆಪೊ ದರವನ್ನು ಯಥಾಸ್ಥಿತಿಯಲ್ಲಿಡಲು ನಿರ್ಧಾರ

shaktikanta das
Published on

ದೆಹಲಿ: ಗೃಹ ಸಾಲ ಪಡೆದವರಿಗೆ ಆರ್​ಬಿಐ ಸಂತಸ ಸುದ್ದಿಯೊಂದನ್ನು ನೀಡಿದೆ. ಆರ್‌ಬಿಐನ ಹಣಕಾಸು ನೀತಿ ಸಮಿತಿಯ ಸಭೆ ಇಂದು ಕೊನೆಗೊಂಡಿದ್ದು, ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್‌ ಈ ಸಭೆಯಲ್ಲಿ ಕೈಗೊಂಡ ನಿರ್ಧಾರಗಳ ಬಗ್ಗೆ ಮಾಹಿತಿ ನೀಡಿದರು.

ಈ ಕುರಿತು ಮಾತನಾಡಿದ ದಾಸ್​​, ಹಣಕಾಸು ನೀತಿ ಸಮಿತಿಯು ರೆಪೊ ದರವನ್ನು ಯಥಾಸ್ಥಿತಿಯಲ್ಲಿಡಲು ಸಭೆಯಲ್ಲಿ ಸರ್ವಾನುಮತದಿಂದ ನಿರ್ಧರಿಸಿದ್ದು, ಸತತ ಎರಡನೇ ಬಾರಿಗೆ ನೀತಿ ದರಗಳಲ್ಲಿ ಅಂದರೆ ರೆಪೊ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ ಎಂದು ಹೇಳಿದರು.

ಆರ್‌ಬಿಐನ ದ್ವೈಮಾಸಿಕ ಹಣಕಾಸು ನೀತಿಯನ್ನು ಪ್ರಕಟಿಸಿದ ಅವರು, ಈ ಹಿಂದೆ ತೆಗೆದುಕೊಂಡಿದ್ದ ವಿತ್ತೀಯ ನೀತಿ ಕ್ರಮಗಳು ನಿರೀಕ್ಷಿತ ಫಲಿತಾಂಶಗಳನ್ನು ನೀಡುತ್ತಿದೆ. ಹಾಗಾಗಿ ಯಾವುದೇ ಬದಲಾವಣೆಗೆ ಸಮಿತಿಯು ನಿರ್ಧರಿಸಿಲ್ಲ ಎಂದು ಹೇಳಿದರು.

ಆರ್‌ಬಿಐ ರೆಪೊ ದರವನ್ನು ಬದಲಾಯಿಸದೇ ಶೇಕಡಾ 6.5ಕ್ಕೆ ಇರಿಸಿದೆ. ಬ್ಯಾಂಕ್‌ ಬಡ್ಡಿ ದರ ಹಾಗೂ ರೆಪೊ ದರವು ಒಂದಕ್ಕೊಂದು ಸಂಬಂಧವನ್ನು ಹೊಂದಿವೆ. ರೆಪೊ ದರ ಹೆಚ್ಚಾದರೆ ಅದಕ್ಕೆ ತಕ್ಕಂತೆ ಬಡ್ಡಿ ದರವೂ ಹೆಚ್ಚಾಗುತ್ತದೆ ಎನ್ನಲಾಗಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net