

ಬೆಂಗಳೂರು: ‘ನನ್ನ ಕಲರ್ಗೆ ಮ್ಯಾಚ್ ಆಗುವ ಹೀರೋ ಜತೆಗೆ ನಟಿಸುತ್ತಿರುವುದೂ ಇದೇ ಮೊದಲು ...’ ಎಂದು ನಗುತ್ತಾರೆ ಆಶಿಕಾ. ಅವರು ಹೀಗೆ ಹೇಳಿದ್ದು ಇಶಾನ್ ಬಗ್ಗೆ. ಆಶಿಕಾ ಮತ್ತು ಇಶಾನ್ ಮೊದಲ ಬಾರಿಗೆ ಜತೆಯಾಗಿ ನಟಿಸಿರುವ ‘ರೇಮೊ’ ಚಿತ್ರದ ಚಿತ್ರೀಕರಣ ಕೆಲವು ದಿನಗಳ ಹಿಂದಷ್ಟೇ ಮುಗಿದಿದ್ದು, ಇದೀಗ ಚಿತ್ರದ ಟೀಸರ್ ಸಹ ಬಿಡುಗಡೆಯಾಗಿದೆ.
ಈ ಚಿತ್ರದ ಬಗ್ಗೆ ಮಾತನಾಡುವ ಆಶಿಕಾ, ‘ಈವರೆಗೂ ನಾನು ಪಕ್ಕಾ ಲವ್ ಸ್ಟೋರಿ ಸಿನಿಮಾದಲ್ಲಿ ಕಾಣಿಸಿಕೊಂಡಿರಲಿಲ್ಲ. ಮೊದಲ ಬಾರಿಗೆ ಅಂಥದ್ದೊಂದು ಪಾತ್ರವನ್ನು ಪವನ್ ನೀಡಿದ್ದಾರೆ. ನಾಯಕನಷ್ಟೇ ನನ್ನ ಪಾತ್ರಕ್ಕೂ ಸ್ಕೋಪ್ ಇದೆ’ ಎಂದು ಹೇಳಿಕೊಂಡಿದ್ದಾರೆ.
ಈ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿರುವ ಇಶಾನ್, ‘ಈ ಹಿಂದೆ ‘ರೋಗ್’ ಸಿನಿಮಾದಲ್ಲಿ ನನ್ನ ಪಾತ್ರದ ಭಾವನೆಗಳನ್ನು ತೋರಿಸಲು ಸಾಧ್ಯವಾಗಿರಲಿಲ್ಲ. ‘ರೇಮೊ’ ಚಿತ್ರದಲ್ಲಿ ಪವನ್ ಅವರು ಚಾಲೆಂಜಿಂಗ್ ಪಾತ್ರ ನೀಡಿ, ನಾನು ಏನೆಲ್ಲ ಅಂದುಕೊಂಡಿದ್ದೇನೋ ಅದೆಲ್ಲವನ್ನು ನನ್ನಿಂದ ಹೊರ ತೆಗೆಸಿದ್ದಾರೆ. ಅಷ್ಟೇ ಚೆನ್ನಾಗಿ ಸಿನಿಮಾ ಮೂಡಿ ಬಂದಿದೆ’ ಎನ್ನುತ್ತಾರೆ ಇಶಾನ್.
ಪವನ್ ಒಡೆಯರ್ ನಿರ್ದೇಶನದ ‘ರೇಮೊ’ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಜನವರಿಯಲ್ಲಿ ಚಿತ್ರ ಬಿಡುಗಡೆಯಾಗಲಿದೆ. ಇಶಾನ್ ಅವರ ಸಹೋದರ ಸಿ. ಆರ್ ಮನೋಹರ್ ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿದರೆ, ವೈದಿ ಎಸ್ ಛಾಯಾಗ್ರಹಣ ಮಾಡಿದ್ದಾರೆ.