ಚೆನ್ನೈ: ಸೆಪ್ಟೆಂಬರ್ 19ರಂದು ಇಲ್ಲಿನ ಎಂ. ಎ. ಚಿದಂಬರಂ ಕ್ರೀಡಾಂಗಣದಲ್ಲಿ ಆರಂಭಗೊಂಡ ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಆತಿಥೇಯರು ಪ್ರಾಬಲ್ಯ ಮೆರೆದಿದ್ದು, ಆತ್ಮವಿಶ್ವಾಸದಲ್ಲಿದ್ದ ಪ್ರವಾಸಿ ತಂಡದ ವಿರುದ್ಧ ಸಂಪೂರ್ಣ ಮೇಲುಗೂ ಸಾಧಿಸಿದ್ದಾರೆ. ಬ್ಯಾಟಿಂಗ್ ಹಾಗೂ ಬೌಲಿಂಗ್ನಲ್ಲಿ ಸಂಪೂರ್ಣ ಪರಾಕ್ರಮ ಮೆರೆದಿರುವ ಟೀಮ್ ಇಂಡಿಯಾದ ಆಟಗಾರರು ಐತಿಹಾಸಿಕ ದಾಖಲೆಗಳನ್ನು ತಮ್ಮ ಮಡಿಲಿಗೆ ಹಾಕಿಕೊಳ್ಳುತ್ತಿದ್ದು, ಆರ್. ಅಶ್ವಿನ್ ಕೂಡ ಇದರ ಹೊರತಾಗಿಲ್ಲ ಎಂದರೆ ತಪ್ಪಾಗಲಾರದು.
ಹಾಲಿ ಬಾಂಗ್ಲಾದೇಶ ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿಯ ಮೊದಲ ಪಂದ್ಯದ ಫಸ್ಟ್ ಇನ್ನಿಂಗ್ಸ್ನಲ್ಲಿ ಶತಕ ಸಿಡಿಸುವ ಮೂಲಕ ತಂಡಕ್ಕೆ ಆಸರೆಯಾಗಿದ್ದ ಸ್ಪಿನ್ನರ್ ಆರ್. ಅಶ್ವಿನ್ ಇದೀಗ ಐತಿಹಾಸಿಕ ವಿಶ್ವದಾಖಲೆಯೊಂದನ್ನು ತಮ್ಮದಾಗಿಸಿಕೊಳ್ಳುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಇದಕ್ಕೂ ಮೊದಲು ಈ ದಾಖಲೆ ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ನಾಯಕ ಇಯಾನ್ ಬಾಥಮ್ ಹೆಸರಿನಲ್ಲಿತ್ತು.
ಇದನ್ನೂ ಓದಿ: ನಾನು ಡಿಸಿಪಿ ಮಗ, ಸಿಎಂ ಸಿದ್ದರಾಮಯ್ಯ ಸಂಬಂಧಿ ಎಂದು ಹೇಳಿ ಸೆಕ್ಯೂರಿಟಿ ಮೇಲೆ ಹಲ್ಲೆ; ವಿಡಿಯೋ ವೈರಲ್
ಈ ಪಂದ್ಯದಲ್ಲಿ 8ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಅಶ್ವಿನ್ 133 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 11 ಬೌಂಡರಿ ಸಹಿತ 113 ರನ್ ಬಾರಿಸಿದ್ದರು. ಈ ಸೆಂಚುರಿಯೊಂದಿಗೆ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಒಂದೇ ಮೈದಾನದಲ್ಲಿ 2 ಶತಕ ಹಾಗೂ ಮೂರಕ್ಕಿಂತ ಹೆಚ್ಚು ಬಾರಿ 5 ವಿಕೆಟ್ ಪಡೆದ ಏಕೈಕ ಆಟಗಾರ ಎಂಬ ವಿಶ್ವ ದಾಖಲೆಯನ್ನು ಆರ್. ಅಶ್ವಿನ್ ತಮ್ಮದಾಗಿಸಿಕೊಂಡಿದ್ದಾರೆ.
ಟೆಸ್ಟ್ ಕ್ರಿಕೆಟ್ನಲ್ಲಿ 8ನೇ ಕ್ರಮಾಂಕ ಅಥವಾ ಅದಕ್ಕಿಂತ ಕೆಲ ಕ್ರಮಾಂಕದಲ್ಲಿ ಕಣಕ್ಕಿಳಿದು ಅತ್ಯಧಿಕ ಶತಕ ಸಿಡಿಸಿದ ವಿಶ್ವ ದಾಖಲೆ ಸರಿಗಟ್ಟಲು ಅಶ್ವಿನ್ಗೆ ಒಂದು ಶತಕದ ಅವಶ್ಯಕತೆಯಿದೆ. ಈ ಪಟ್ಟಿಯಲ್ಲಿ ನ್ಯೂಝಿಲೆಂಡ್ ತಂಡದ ಮಾಜಿ ನಾಯಕ ಡೇನಿಯಲ್ ವೆಟ್ಟೋರಿ ಅಗ್ರಸ್ಥಾನದಲ್ಲಿದ್ದಾರೆ. ಡೇನಿಯಲ್ ವೆಟ್ಟೋರಿ 8ನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಒಟ್ಟು 5 ಶತಕಗಳನ್ನು ಬಾರಿಸಿದ್ದಾರೆ. ಇದೀಗ 8ನೇ ಕ್ರಮಾಂಕದಲ್ಲಿ ಅಶ್ವಿನ್ 4 ಸೆಂಚುರಿಗಳನ್ನು ಸಿಡಿಸಿದ್ದು, ಹೀಗಾಗಿ ಇನ್ನೊಂದು ಶತಕದೊಂದಿಗೆ ವೆಟ್ಟೋರಿಯ ವಿಶ್ವದಾಖಲೆಯನ್ನು ತಮ್ಮದಾಗಿಸಿಕೊಳ್ಳಲಿದ್ದಾರೆ.