ಕುಸ್ತಿಯಲ್ಲಿ ಭಾರತದ ಚಿನ್ನದ ಕನಸು ಭಗ್ನ: ಬೆಳ್ಳಿ ಪದಕ ಗೆದ್ದ ರವಿಕುಮಾರ್ ದಾಹಿಯ

Ravikumar
Published on

ಟೋಕಿಯೋ: ಒಲಿಂಪಿಕ್ಸ್​ನಲ್ಲಿ ಕುಸ್ತಿ ವಿಭಾಗದ ಸಮಿಫೈನಲ್​ ಪಂದ್ಯದಲ್ಲಿ ಕಜಕಸ್ತಾನಿನ ನುರಿಸ್ಲಮ್​ ಸನಯೆವ್​ ಸೋಲಿಸಿ, ಫೈನಲ್​ ತಲುಪಿದ್ದ ಭಾರತದ ಕುಸ್ತಿಪಟು ರವಿಕುಮಾರ್ ದಾಹಿಯ ಅವರು ಫೈನಲ್​ನಲ್ಲಿ ರಷ್ಯಾ ಎದುರಾಳಿ ಜೌರ್​​ ಉಗ್ಯೂವ್​ ಎದುರು ಸೋಲಿಗೆ ಶರಣಾಗುವ ಮೂಲಕ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.

57 ಕೆಜಿ ಕುಸ್ತಿ ವಿಭಾಗದಲ್ಲಿ ರಷ್ಯಾದ ಜೌರ್​​ ಉಗ್ಯೂವ್ 7-4 ಅಂತರದಲ್ಲಿ ದಾಹಿಯಾ ಅವರನ್ನು ಸೋಲಿಸಿದರು. ಈ ಮೂಲಕ ಚಿನ್ನದ ಕನಸು ಕಂಡಿದ್ದ ಭಾರತೀಯರಿಗೆ ನಿರಾಸೆ ಆಯಿತು. ಆದರೂ, ದಾಹಿಯಾ ಫೈನಲ್​ ಸುತ್ತಿಗೇರಿದ್ದರಿಂದ ಭಾರತಕ್ಕೆ ಮತ್ತೊಂದು ಬೆಳ್ಳಿ ಪದಕ ಒಲಿದು ಬಂದಿದ್ದು, ಒಲಿಂಪಿಕ್ಸ್​ನಲ್ಲಿ ಈವರೆಗೂ ಎರಡು ಬೆಳ್ಳಿ ಪದಕ ಸೇರಿದಂತೆ ಒಟ್ಟು 5 ಪದಕಗಳನ್ನು ಜಯಿಸಿದೆ.

ಆರಂಭದಲ್ಲಿ ಜೌರ್​​ ಉಗ್ಯೂವ್ ಮತ್ತು ದಾಹಿಯ ಉತ್ತಮ ರಕ್ಷಣಾತ್ಮಕ ಆಟವಾಡಿದರು. ಆದರೆ, ಉಗ್ಯೂವ್ ಎರಡು ಬಾರಿ ದಾಹಿಯ ಅವರನ್ನು ಕುಸ್ತಿ ರಿಂಗ್​ನಿಂದ ಹೊರ ತಳ್ಳಿದರು. ಈ ಮೂಲಕ ಉಗ್ಯೂವ್ ಮೊದಲ ಸುತ್ತಿನಲ್ಲಿ 2-0ಯಿಂದ ಮುನ್ನಡೆ ಕಾಯ್ದುಕೊಂಡರು.

ಇದಾದ ಬಳಿಕ ದಾಹಿಯ ಕೂಡ ಒಳ್ಳೆಯ ಕಮ್​ಬ್ಯಾಕ್​ ಮಾಡುವ ಮೂಲಕ 2 ಅಂಕಗಳನ್ನು ಗಳಿಸಿದರು. ಅದರ ಬೆನ್ನಲ್ಲೇ ಉಗ್ಯೂವ್ ಕೂಡ ಮತ್ತೆರೆಡು ಅಂಕಗಳೊಂದಿಗೆ 4-2ರಲ್ಲಿ ಮತ್ತೆ ಮುನ್ನಡೆ ಕಾಯ್ದುಕೊಂಡರು. ರವಿ ಮೊದಲ ಅವಧಿಯಲ್ಲಿ ಪುನರಾಗಮನ ಮಾಡಲು ಪ್ರಯತ್ನಿಸಿದರು ಆದರೆ, ವಿರಾಮದ ವೇಳೆಗೆ ಅಂಕ ಉಗ್ಯೂವ್​ 4-2 ಪರವಾಗಿ ಉಳಿಯಿತು.

ಎರಡನೇ ಅವಧಿಯಲ್ಲಿ ಉಗ್ಯೂವ್ ಮತ್ತೊಮ್ಮೆ ದಾಹಿಯರನ್ನು ರಿಂಗ್​ನಿಂದ ಹೊರ ತಳ್ಳಿದರು. ದಾಹಿಯಾ ಶ್ರಮಪಟ್ಟರು ಉಗ್ಯೂವ್ ಅಂಕ ಏರಿಸುತ್ತಲೇ 7-2 ಅಂಕದೊಂದಿಗೆ ಹೆಚ್ಚಿನ ಮುನ್ನಡೆ ಗಳಿಸಿದರು. ಇದರ ನಡುವೆ ದಾಹಿಯ ಎರಡು ಅಂಕಗಳಿಸಿದರು. ಕೊನೆಯ ಸುತ್ತಿನಲ್ಲಿ 4-7ರೊಂದಿಗೆ ದಹಿಯಾ ಫೈನಲ್​ನಲ್ಲಿ ಉಗ್ಯೂವ್​ ಎದುರು ಮಂಡಿಯೂರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net