ರಶ್ಮಿಕಾ ಚಿತ್ರಗಳಿಗೆ ಕರ್ನಾಟಕದಲ್ಲಿ ಬ್ಯಾನ್​? ಸೋಷಿಯಲ್​ ಮೀಡಿಯಾದಲ್ಲಿ ಹೀಗೊಂದು ಸುದ್ದಿ!

Rashmika (13)
Published on

ಬೆಂಗಳೂರು: ರಶ್ಮಿಕಾ ಇತ್ತೀಚಿನ ದಿನಗಳಲ್ಲಿ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಲ್ಲಿದ್ದಾರೆ. ಈಗ ಬಂದಿರುವ ಹೊಸ ಸುದ್ದಿಯ ಪ್ರಕಾರಣ, ಸೋಷಿಯಲ್​ ಮೀಡಿಯಾದಲ್ಲಿ ಸಾಕಷ್ಟು ಟ್ರೋಲ್​ಗಳನ್ನು ಎದುರಿಸುತ್ತಿದ್ದಾರೆ. ಈಗ ರಶ್ಮಿಕಾ ಇನ್ನೊಮ್ಮೆ ಕಷ್ಟದಲ್ಲಿರುವಂತಿದೆ. ಸುದ್ದಿಗಳ ಪ್ರಕಾರ, ತಮ್ಮ ಅವಹೇಳನಕಾರಿ ಮಾತುಗಳಿಗಾಗಿ ರಶ್ಮಿಕಾ ಅವರ ಚಿತ್ರಗಳನ್ನು ಕರ್ನಾಟಕದಲ್ಲಿ ಬ್ಯಾನ್​ ಮಾಡುವ ಪ್ರಯತ್ನವೊಂದು ಸದ್ದಿಲ್ಲದೆ ನಡೆಯುತ್ತಿದೆ.

ಕೆಲವು ದಿನಗಳ ಹಿಂದೆ ಸಂದರ್ಶನದಲ್ಲಿ ಮಾತನಾಡುವ ಸಂದರ್ಭದಲ್ಲಿ ರಶ್ಮಿಕಾ ತಮ್ಮನ್ನು ಮೊದಲ ಬಾರಿಗೆ ಚಿತ್ರರಂಗಕ್ಕೆ ಪರಿಚಯಿಸಿದವರ ಹೆಸರು ಹೇಳಲಿಲ್ಲ. ತಮಗೆ ಚಿತ್ರರಂಗದಲ್ಲಿ ಬ್ರೇಕ್​ ಹೇಗೆ ಸಿಕ್ಕಿತು ಎಂಬ ಪ್ರಶ್ನೆ ಎದುರಾದಾಗ, ತನಗೆ ನಟಿಯಾಗುವ ಯೋಚನೆಯೇ ಇರಲಿಲ್ಲ, ಮಾಡಲ್​ ಆಗುವ ಯೋಚನೆ ಇತ್ತು ಎಂದು ಹೇಳಿಕೊಂಡಿದ್ದಾರೆ. ಹಾಗಿರುವಾಗಲೇ, ಒಂದು ಸಂಸ್ಥೆಯಿಂದ ಚಿತ್ರದಲ್ಲಿ ನಟಿಸುವ ಆಫರ್​ ಬಂತು ಎಂದು ಪರಂವಾ ಸ್ಟುಡಿಯೋಸ್​ ಅಥವಾ ರಕ್ಷಿತ್​ ಶೆಟ್ಟಿ ಅವರ ಹೆಸರನ್ನು ಹೇಳದೆಯೇ ಹೇಳಿದ್ದರು. ತಮ್ಮನ್ನು ಪರಿಚಯಿಸಿದವರ ಹೆಸರು ಹೇಳದಷ್ಟು ರಶ್ಮಿಕಾ ಬೆಳೆದಿದ್ದಾರೆ ಎಂದು ಸೋಷಿಯಲ್​ ಮೀಡಿಯಾದಲ್ಲಿ ಅಸಹನೆ ಹೆಚ್ಚಾಗಿತ್ತು.

ಇದಕ್ಕೆ ಸರಿಯಾಗಿ, ಇತ್ತೀಚೆಗೆ ಸಂದರ್ಶನವೊಂದರಲ್ಲಿ ರಿಷಭ್​ ಶೆಟ್ಟಿ ಅವರನ್ನು ನೀವು ಯಾವ ನಟಿಯ ಜತೆಗೆ ಕೆಲಸ ಮಾಡುವುದಕ್ಕೆ ಬಯಸುತ್ತೀರಾ ಎಂಬ ಪ್ರಶ್ನೆ ಕೇಳಲಾಗಿತ್ತು. ಸಮಂತಾ, ಕೀರ್ತಿ ಸುರೇಶ್​, ಸಾಯಿಪಲ್ಲವಿ ಮತ್ತು ರಶ್ಮಿಕಾ ಮಂದಣ್ಣ ನಡುವೆ ಯಾರ ಜತೆಗೆ ಕೆಲಸ ಮಾಡುತ್ತೀರಾ ಎಂದು ಕೇಳಿದಾಗ, ಯಾರ ಹೆಸರನ್ನು ಎತ್ತದೆಯೇ, ಅವರ ಜತೆಗೆ ಕೆಲಸ ಮಾಡುವುದಕ್ಕೆ ಇಷ್ಟವಿಲ್ಲ ಎಂದು ಹೇಳಿದ್ದರು. ಅದರ ಜತೆಗೆ ಸಾಯಿಪಲ್ಲವಿ ಮತ್ತು ಸಮಂತಾ ಅವರ ಅಭಿನಯ ತಮಗೆ ಇಷ್ಟವಾಗುತ್ತದೆ ಎಂದಿದ್ದರು. ರಿಷಭ್​ ಅವರ ಈ ಉತ್ತರಕ್ಕೆ ಸೋಷಿಯಲ್​ ಮಿಡಿಯಾದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ರಶ್ಮಿಕಾ ದುರಹಂಕಾರಕ್ಕೆ ಇದು ಸರಿಯಾದ ಪಾಠ ಎಂದು ಹೇಳಲಾಗುತ್ತಿದೆ.

ಈ ನಡುವೆ, ಸೋಷಿಯಲ್​ ಮೀಡಿಯಾದಲ್ಲಿ ಒಂದು ಸುದ್ದಿ ಕೇಳಿ ಬರುತ್ತಿದೆ. ರಶ್ಮಿಕಾ ಅಹಂಕಾರಕ್ಕೆ ಪ್ರತಿಯಾಗಿ ಕರ್ನಾಟಕದ ಚಿತ್ರಮಂದಿರದ ಮಾಲೀಕರು, ಕೆಲವು ಸಂಘ-ಸಂಸ್ಥೆಗಳು ಮತ್ತು ಚಿತ್ರರಂಗದವರು ಆವರ ಚಿತ್ರಗಳನ್ನು ಕರ್ನಾಟಕದಲ್ಲಿ ಬ್ಯಾನ್​ ಮಾಡುವ ಬಗ್ಗೆ ಯೋಚಿಸುತ್ತಿವೆಯಂತೆ. ಈ ಬಗ್ಗೆ ಯಾರಿಂದಲೂ ಅಧಿಕೃತ ಘೋಷಣೆ ಹೊರಬರದಿದ್ದರೂ, ಸೋಷಿಯಲ್​ ಮೀಡಿಯಾದಲ್ಲಿ ಇಂಥದ್ದೊಂದು ಸುದ್ದಿ ಕೇಳಿ ಬರುತ್ತಿದೆ.

ಒಂದು ಪಕ್ಷ ಈ ಸುದ್ದಿ ಏನಾದರೂ ನಿಜವಾದರೆ, ಆಗ 'ಪುಷ್ಪ 2' ಮತ್ತು 'ವಾರಿಸು' ಚಿತ್ರಗಳಿಗೆ ಇದರಿಂದ ದೊಡ್ಡ ಸಮಸ್ಯೆ ಎದುರಾಗಲಿದೆ. ಏಕೆಂದರೆ, ಈ ಎರಡೂ ಚಿತ್ರಗಳಿಗೆ ಕರ್ನಾಟಕ ದೊಡ್ಡ ಮಾರುಕಟ್ಟೆಯಾಗಿದ್ದು, ಇಲ್ಲೇ ಬಿಡುಗಡೆ ಆಗದಿದ್ದರೆ ಎರಡೂ ಚಿತ್ರತಂಡಗಳಿಗೆ ದೊಡ್ಡ ನಷ್ಟವಾಗಲಿದೆ. ಆದರೆ, ಇದು ವಿಕೋಪಕ್ಕೆ ಹೋಗುವುದಕ್ಕೆ ಎರಡೂ ಚಿತ್ರತಂಡಗಳು ಬಿಡುತ್ತವಾ ಅಥವಾ ಏನಾದರೂ ಪರಿಹಾರ ಕಂಡುಹಿಡಿಯುತ್ತವಾ ಎಂಬುದನ್ನು ಕಾದು ನೋಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net