Rashmika Mandanna: ರಕ್ಷಿತ್ ಶೆಟ್ಟಿ ಅಭಿನಯದ ಹಾಗೂ ರಿಷಭ್ ಶೆಟ್ಟಿ ನಿರ್ದೇಶನದಲ್ಲಿ ಮೂಡಿಬಂದ ಬ್ಲಾಕ್ಬಸ್ಟರ್ ‘ಕಿರಿಕ್ ಪಾರ್ಟಿ’ ಚಿತ್ರದ ಮೂಲಕ ಸ್ಯಾಂಡಲ್ವುಡ್ಗೆ ಪದಾರ್ಪಣೆ ಮಾಡಿದ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ, ಇದೀಗ ಟಾಲಿವುಡ್, ಬಾಲಿವುಡ್ ಅಂಗಳದಲ್ಲಿ ಸಖತ್ ಸದ್ದು ಮಾಡುತ್ತಿದ್ದಾರೆ. ಕಿರಿಕ್ ಪಾರ್ಟಿ ಸಿನಿಮಾದ ಭರ್ಜರಿ ಯಶಸ್ಸಿನ ಬೆನ್ನಲ್ಲೇ ಪುನೀತ್ ರಾಜ್ಕುಮಾರ್ ಅವರ ‘ಅಂಜನಿಪುತ್ರ’, ಗಣೇಶ್ ನಟನೆಯ ‘ಚಮಕ್’ ಮತ್ತು ದರ್ಶನ್ ಅಭಿನಯದ ‘ಯಜಮಾನ’ ಚಿತ್ರಗಳಲ್ಲಿ ಮಿಂಚಿದ ‘ನ್ಯಾಷನಲ್ ಕ್ರಶ್’, ನಂತರ ಜಿಗಿದಿದ್ದು ನೇರವಾಗಿ ಟಾಲಿವುಡ್ ಅಂಗಳಕ್ಕೆ.

ಇದನ್ನೂ ಓದಿ: ಅಂಬೇಡ್ಕರ್ ಆಶಯಗಳನ್ನು ಹೊಸ ಪೀಳಿಗೆಗೆ ಪರಿಚಯಿಸಬೇಕು: ಪಿಎಸ್‌ಐ ಅರುಣ್ ಕುಮಾರ್ ಹೇಳಿಕೆ
ಟಾಲಿವುಡ್ನ ಹಲವಾರು ಚಿತ್ರಗಳಲ್ಲಿ ನಟಿಸಿ, ತೆಲುಗು ಅಭಿಮಾನಿಗಳ ಗಮನ ಸೆಳೆದ ರಶ್ಮಿಕಾ, ಅಪಾರ ಯಶಸ್ಸನ್ನು ಕಂಡಿದ್ದಾರೆ. ಇದಾದ ನಂತರ ಬಾಲಿವುಡ್ ಅಂಗಳಕ್ಕೆ ಜಿಗಿದ ಸೌತ್ ಬ್ಯೂಟಿ, ರಣಬೀರ್ ಕಪೂರ್ ಅಭಿನಯದ ‘ಅನಿಮಲ್’ ಚಿತ್ರದಲ್ಲಿ ನಟಿಸುವ ಮೂಲಕ ಬಾಲಿವುಡ್ಗೆ ಮತ್ತಷ್ಟು ಪರಿಚಯಗೊಂಡರು. ಈ ಚಿತ್ರದ ಬೆನ್ನಲ್ಲೇ ಸಲ್ಮಾನ್ ಖಾನ್ ಜತೆಗೆ ನಟಿಸಿದ ‘ಸಿಕಂದರ್’ ಬಾಕ್ಸ್ ಆಫೀಸ್ನಲ್ಲಿ ಹೀನಾಯ ಸೋಲು ಅನುಭವಿಸಿತು.
ಸರಣಿ ಬ್ಲಾಕ್ಬಸ್ಟರ್ ನೋಡಿದ ಕೊಡಗಿನ ಚೆಲುವೆ ಈಗ ‘ಸಿಕಂದರ್’ ಮೂಲಕ ಫ್ಲಾಪ್ ರುಚಿಯನ್ನು ಉಂಡಿದ್ದಾರೆ. ಸತತ ಸೂಪರ್ಹಿಟ್ ಸಿನಿಮಾಗಳನ್ನೇ ನೀಡಿರುವ ರಶ್ಮಿಕಾ, ಅಲ್ಲೋ-ಇಲ್ಲೋ ಫ್ಲಾಪ್ ಚಿತ್ರಗಳನ್ನು ಕಂಡಿದ್ದಾರೆ. ಆದ್ರೆ, ಈ ವರ್ಷ ತೆರೆಕಂಡ ಸಿಕಂದರ್ ಆರಂಭದಲ್ಲಿ ಭಾರೀ ನಿರೀಕ್ಷೆ ಮೂಡಿಸಿದ್ದೇ ಆದರೂ ಕಮಾಲ್ ಮಾಡುವಲ್ಲಿ ಮುಗ್ಗರಿಸಿತು. ಇದು ಸಲ್ಮಾನ್ ಖಾನ್, ನಿರ್ದೇಶಕ ಎ.ಆರ್. ಮುರುಗದಾಸ್ ಮತ್ತು ನಿರ್ಮಾಪಕರಿಗೆ ದೊಡ್ಡ ಮಟ್ಟದ ಹೊಡೆತ ನೀಡಿದೆ.
ಇದನ್ನೂ ಓದಿ: ಮೊದಲ ಮೇಯರ್ ಕನಸಿಗೆ ಪೆಟ್ಟು? ಆಶಯ ಈಡೇರಿಸಿಕೊಳ್ಳಲು ನಗರ ಸಭಾಧ್ಯಕ್ಷ ಚಂದ್ರೇಗೌಡ ಪಟ್ಟು
ಸೋಲಿನ ಅನುಭವ ರಶ್ಮಿಕಾಗೆ ಅಷ್ಟಾಗಿ ಕಾಡಿದಂತಿಲ್ಲ. ಕಾರಣ, ನಟಿ ತನ್ನ ಮುಂದಿನ ರಿಲೀಸ್ಗೆ ರೆಡಿಯಿರುವ ಚಿತ್ರದತ್ತ ಮುಖ ಮಾಡಿದ್ದಾರೆ. ಈ ವರ್ಷ ರಶ್ಮಿಕಾ ಅಭಿನಯದ ಮೂರು ಬಹುನಿರೀಕ್ಷಿತ ಸಿನಿಮಾಗಳು ತೆರೆ ಕಾಣುವ ಪಟ್ಟಿಯಲ್ಲಿವೆ. ಬ್ಯಾಕ್ ಟು ಬ್ಯಾಕ್ ಪ್ಯಾನ್ ಇಂಡಿಯಾ ಚಿತ್ರಗಳ ಮೂಲಕ ಸಿನಿಪ್ರಿಯರ ಕುತೂಹಲ ಹೆಚ್ಚಿಸಿರುವ ರಶ್ಮಿಕಾ ಮಂದಣ್ಣ, ‘ಕುಬೇರ’, ‘ಗರ್ಲ್ಫ್ರೆಂಡ್’ ಮತ್ತು ‘ತಾಮ’ ಚಿತ್ರಗಳಲ್ಲಿ ಸಖತ್ ಬಿಜಿಯಾಗಿದ್ದಾರೆ.
ತಮಿಳು ನಟ ಧನುಷ್ ನಟನೆಯ ಹಾಗೂ ಶೇಖರ್ ಕಮ್ಮುಲ ನಿರ್ದೇಶನದ ‘ಕುಬೇರಾ’ ಚಿತ್ರವು ಈ ವರ್ಷದ ಜೂನ್ನಲ್ಲಿ ತೆರೆಕಾಣಲು ಸಜ್ಜಾಗಿದ್ದರೆ, ನಾಯಕಿ ಪ್ರಧಾನ ಚಿತ್ರವಾದ ‘ಗರ್ಲ್ಫ್ರೆಂಡ್’ ಆಗಸ್ಟ್ನಲ್ಲಿ ರಿಲೀಸ್ ಆಗಲಿದೆ. ಇನ್ನು ಆಯುಷ್ಮಾನ್ ಖುರಾನ ಅವರ ‘ತಾಮ’ ಸಿನಿಮಾ ಈ ವರ್ಷದ ಕೊನೆಯಲ್ಲಿ ಬಿಡುಗಡೆಗೊಳ್ಳಲು ಎದುರುನೋಡುತ್ತಿದೆ. ಒಟ್ಟಾರೆ ರಶ್ಮಿಕಾ ಅಭಿನಯದ ಮೂರು ಬಹುನಿರೀಕ್ಷಿತ ಚಿತ್ರಗಳು ಈ ವರ್ಷವೇ ರಿಲೀಸ್ಗೆ ತಯಾರಿ ನಡೆಸಿವೆ,(ಏಜೆನ್ಸೀಸ್).