

ಕೆಲವು ತಿಂಗಳ ಹಿಂದಷ್ಟೇ ನಟಿ ರಶ್ಮಿಕಾ ಮಂದಣ್ಣ ಸಂದರ್ಶನದ ವೇಳೆ ತಮ್ಮ ಮೊದಲ ಚಿತ್ರ ‘ಕಿರಿಕ್ ಪಾರ್ಟಿ’ ತಂಡದ ಬಗ್ಗೆ ಮಾತನಾಡಲು ಹಿಂದೇಟು ಹಾಕಿದ್ದರು. ಬಳಿಕ ‘ಕಾಂತಾರ’ ಸಿನಿಮಾ ನೋಡಿಲ್ಲ ಎಂದು ಮತ್ತೊಮ್ಮೆ ಸುದ್ದಿಯಾಗಿದ್ದರು. ಅದರ ಬೆನ್ನಲ್ಲೇ ದಕ್ಷಿಣದಲ್ಲಿ ಮಸಾಲಾ, ಐಟಂ ಸಾಂಗ್ಸ್ ಹೆಚ್ಚು, ಬಾಲಿವುಡ್ನಲ್ಲಿ ರೊಮ್ಯಾಂಟಿಕ್ ಹಾಡುಗಳು ಅಧಿಕ ಎಂಬ ಹೇಳಿಕೆ ನೀಡಿದ್ದರು. ಈ ಎಲ್ಲದರ ನಡುವೆ ಕರ್ನಾಟಕದಲ್ಲಿ ಅವರನ್ನು ಬ್ಯಾನ್ ಮಾಡಲಾಗಿದೆ ಎಂಬ ಸುದ್ದಿಯೂ ಸದ್ದು ಮಾಡಿತ್ತು. ಜತೆಗೆ ನಟ-ನಿರ್ದೇಶಕ ರಿಷಬ್ ಶೆಟ್ಟಿ ಇನ್ಡೈರೆಕ್ಟಾಗಿ ರಶ್ಮಿಕಾ ಮೇಲೆ ಅಸಮಾಧಾನ ಹೊರಹಾಕಿದ್ದರು. ಈ ಎಲ್ಲ ಬೆಳವಣಿಗೆಗಳಿಂದ ರಶ್ಮಿಕಾ ಕೊನೆಗೂ ಎಚ್ಚೆತ್ತುಕೊಂಡಂತಿದೆ. ಕೆಲವು ದಿನಗಳ ಹಿಂದೆ ‘ವಾರಿಸು’ ಚಿತ್ರದ ಪ್ರಚಾರದ ವೇಳೆ ನೀಡಿದ ಸಂದರ್ಶನದಲ್ಲಿ ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ ಇಬ್ಬರನ್ನೂ ಮುಕ್ತಕಂಠದಿಂದ ರಶ್ಮಿಕಾ ಹೊಗಳಿದ್ದಾರೆ.
‘ಒಬ್ಬ ನಟಿಯಾಗಲು ನನ್ನಿಂದ ಸಾಧ್ಯವಾ ಎಂದು ಅನುಮಾನದಲ್ಲಿ ಇರುವಾಗಲೇ, ಅವರು (ರಕ್ಷಿತ್ ಮತ್ತು ರಿಷಬ್) ನನಗೆ ಮೊದಲ ಸಿನಿಮಾದಲ್ಲಿ ಅವಕಾಶ ನೀಡುವ ಮೂಲಕ ಚಿತ್ರರಂಗದಲ್ಲಿ ದಾರಿ ತೋರಿಸಿದರು. ನನ್ನ ಮೇಲೆ ನಂಬಿಕೆ ಇಟ್ಟು, ನಟಿಸಲು ಮೊದಲ ಅವಕಾಶ ನೀಡಿದರು. ನಿಜ ಹೇಳಬೇಕೆಂದರೆ, ನನಗೆ ಸಿನಿಮಾರಂಗಕ್ಕೆ ಕರೆದು ತಂದಿದ್ದೇ ರಕ್ಷಿತ್ ಮತ್ತು ರಿಷಬ್. ಅವರ ಜತೆ ಮೊದಲ ಬಾರಿ ಸಿನಿಮಾದಲ್ಲಿ ಕೆಲಸ ಮಾಡಿದೆ. ಆ ಬಳಿಕ ಇದುವರೆಗೂ ಹಲವು ಬೆಸ್ಟ್ ಪ್ರತಿಭೆಗಳ ಜತೆ, ಒಳ್ಳೆಯ ಜನರ ಕೆಲಸ ಮಾಡಿದ್ದೇನೆ ಎಂಬ ಖುಷಿಯಿದೆ’ ಎಂದು ರಶ್ಮಿಕಾ ಹೇಳಿಕೊಂಡಿದ್ದಾರೆ. ಇದುವರೆಗೆ ಮಾತನಾಡದೇ ಟ್ರೋಲ್ ಆಗುತ್ತಿದ್ದ ರಶ್ಮಿಕಾ, ಇದೀಗ ಮಾತನಾಡಿ ಮತ್ತೆ ಟ್ರೋಲ್ ಆಗುತ್ತಿದ್ದಾರೆ. ‘ವಾರಿಸು’ ಚಿತ್ರದ ಯಶಸ್ಸಿನ ಸಂಭ್ರಮದಲ್ಲಿರುವ ರಶ್ಮಿಕಾ ಸದ್ಯ ಅಲ್ಲು ಅರ್ಜುನ್ ಜತೆ ‘ಪುಷ್ಪ 2 - ದಿ ರೂಲ್’ ಹಾಗೂ ಬಾಲಿವುಡ್ನ ‘ಅನಿಮಲ್’ ಚಿತ್ರಗಳಲ್ಲಿ ಬಿಜಿಯಾಗಿದ್ದಾರೆ. - ಏಜೆನ್ಸೀಸ್