ಮಾಂಗಲ್ಯ ಕದ್ದ ಕಳ್ಳ ಪೊಲೀಸ್ ಠಾಣೆ ಹಿಂದಿನ ಮನೆಯಲ್ಲೇ ನೆಲೆಸಿದ್ದ; ಮೊದಲ ಕಳ್ಳತನದ ಟೆನ್ಷನ್​ಗೇ 20 ಕೆ.ಜಿ. ದೇಹತೂಕ ಕಳ್ಕೊಂಡಿದ್ದ!

Thief
Published on

ಬೆಂಗಳೂರು: ವಿಳಾಸ ಕೇಳುವ ನೆಪದಲ್ಲಿ ಮಹಿಳೆಯ ಮಾಂಗಲ್ಯ ಸರ ಎಗರಿಸಿ ಪೊಲೀಸ್ ಠಾಣೆ ಹಿಂಭಾಗದ ಮನೆಯಲ್ಲೇ ನೆಲೆಸಿದ್ದ ಕಳ್ಳನೊಬ್ಬನನ್ನು ಚೆನ್ನಮ್ಮನ ಕೆರೆ ಅಚ್ಚುಕಟ್ಟು ಠಾಣೆ ಪೊಲೀಸರು ಬಂಧಿಸಿ 2.2 ಲಕ್ಷ ರೂ. ಮೌಲ್ಯದ ಸರವನ್ನು ವಶಪಡಿಸಿಕೊಂಡಿದ್ದಾರೆ. ಕತ್ರಿಗುಪ್ಪೆ ಸಮೀಪದ ಸಿದ್ದಾರ್ಥ ಲೇಔಟ್‌ನ ಒಂದನೇ ಮುಖ್ಯರಸ್ತೆ ನಿವಾಸಿ ಮಂಜುನಾಥ ಅಲಿಯಾಸ್ ಜಿಮ್ ಮಂಜ (28) ಬಂಧಿತ.

ಡಿ. 4ರಂದು ಸಂಜೆ 6.30ರ ಸುಮಾರಿನಲ್ಲಿ ರುಕ್ಮಿಣಿ ಎಂಬುವರು ಮನೆ ಸಮೀಪದ ಪಾರ್ಕ್‌ನಲ್ಲಿ ವಾಯುವಿಹಾರ ಮುಗಿಸಿ ಬನಶಂಕರಿ ಮೂರನೇ ಹಂತ ಪೂರ್ಣಪ್ರಜ್ಞಾ ಬಡಾವಣೆ, 5ನೇ ಮುಖ್ಯರಸ್ತೆಯಲ್ಲಿ ನಡೆದುಕೊಂಡು ಬರುತ್ತಿದ್ದಾಗ ಅದೇ ರಸ್ತೆಯಲ್ಲಿ ಎದುರಿನಿಂದ ಬಂದ ಯುವಕ ರುಕ್ಮಿಣಿ ಅವರಿಗೆ ಇಲ್ಲಿ ಪಾರ್ಕ್ ಎಲ್ಲಿದೆ ಅಮ್ಮ ಎಂದು ವಿಳಾಸ ಕೇಳಿದ್ದಾನೆ. ರುಕ್ಮಿಣಿ ಅವರು ಪಾರ್ಕ್ ಇರುವ ರಸ್ತೆ ಕಡೆ ಕೈ ತೋರಿಸುತ್ತಿದ್ದಂತೆ ಆತ ರುಕ್ಮಿಣಿ ಅವರನ್ನು ಜೋರಾಗಿ ರಸ್ತೆಗೆ ತಳ್ಳಿ, ಅವರ ಕತ್ತಿನಲ್ಲಿದ್ದ 45 ಗ್ರಾಂ ತೂಕದ ಮಾಂಗಲ್ಯ ಸರ ಕಿತ್ತುಕೊಂಡು ಪಾರ್ಕ್ ಕಡೆ ಪರಾರಿಯಾಗಿದ್ದನು. ಈ ಬಗ್ಗೆ ರುಕ್ಮಿಣಿ ಅವರು ಸಿ.ಕೆ ಅಚ್ಚುಕಟ್ಟು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಾಗಿ ತನಿಖೆ ಕೈಗೊಂಡಿದ್ದರು.

20 ಕೆಜಿ ತೂಕ ಕಡಿಮೆಯಾಗಿದ್ದ ಆರೋಪಿ

ಪೊಲೀಸರು ಸರಗಳ್ಳನಿಗಾಗಿ ಪ್ರಕರಣ ದಾಖಲಾದ ದಿನದಿಂದ ಶೋಧ ನಡೆಸುತ್ತಿದ್ದರು. ಸಿಸಿ ಕ್ಯಾಮರಾಗಳನ್ನು ಪರಿಶೀಲಿಸಿದಾಗ ದೈತ್ಯ ವ್ಯಕ್ತಿಯೊಬ್ಬ ಸರಗಳ್ಳತನ ಮಾಡಿರುವುದು ಕಂಡು ಬಂದಿದೆ. ಆತನ ಜಾಡು ಹಿಡಿದು ಹುಡುಕಾಟ ನಡೆಸುತ್ತಿದ್ದಾಗ ಆತನ ವಿಳಾಸ ಠಾಣೆ ಪಕ್ಕದಲ್ಲೇ ತೋರಿಸುತ್ತಿತ್ತು. ಸರಗಳ್ಳ ತಾನು ಪೊಲೀಸರಿಗೆ ಸಿಕ್ಕಿ ಹಾಕಿಕೊಳ್ಳಬಾರದೆಂದು ತನ್ನ ದೇಹದ ತೂಕವನ್ನು 20 ಕೆಜಿ ಇಳಿಸಿಕೊಂಡು ಪೊಲೀಸರ ದಾರಿ ತಪ್ಪಿಸಿದ್ದನು. ಸಿಸಿ ಕ್ಯಾಮರಾದಲ್ಲಿ ಕಂಡು ಬಂದ ವ್ಯಕ್ತಿಯ ದೇಹಕ್ಕೂ ಹುಡುಕಾಟ ನಡೆಸುತ್ತಿದ್ದ ವ್ಯಕ್ತಿಗೂ ಅಜಗಜಾಂತರ ವ್ಯತ್ಯಾಸ ಇದ್ದುದ್ದರಿಂದ ಪತ್ತೆ ಹಚ್ಚುವುದು ಪೊಲೀಸರಿಗೆ ಸ್ವಲ್ಪ ಕಷ್ಟವಾಗಿತ್ತು. ಆದರೂ ಪೊಲೀಸರು 45 ದಿನಗಳ ಕಾಲ ಶ್ರಮ ಪಟ್ಟು ಆರೋಪಿಯ ಬಗ್ಗೆ ಹಲವು ಮಾಹಿತಿಗಳನ್ನು ಕಲೆ ಹಾಕಿ ಕೊನೆಗೂ ಬಂಧಿಸಿ ಆತನಿಂದ 44.700 ಗ್ರಾಂ ತೂಕದ 2.2 ಲಕ್ಷ ರೂ. ಮೌಲ್ಯದ ಮಾಂಗಲ್ಯ ಸರವನ್ನು ವಶಪಡಿಸಿಕೊಂಡಿದ್ದಾರೆ.

ಸರ ಕಳ್ಳತನ ಮಾಡಿ ಮನೆಗೆ ಬಂದ ಆರೋಪಿ ಪೊಲೀಸರಿಗೆ ಸಿಕ್ಕಿ ಬೀಳುವ ಭಯದಲ್ಲಿ ತನ್ನ ಬಟ್ಟೆಯನ್ನು ಸುಟ್ಟು ಹಾಕಿದ್ದನು. ವೃತ್ತಿಯಲ್ಲಿ ಜಿಮ್ ಟ್ರೈನರ್ ಆಗಿದ್ದ ಈತ ಬರುವ ಸಂಬಳ ಸಾಕಾಗದೇ ಮೊದಲ ಬಾರಿಗೆ ಸರಗಳ್ಳತನದ ಹಾದಿ ಹಿಡಿದಿದ್ದ. ಠಾಣೆಯ ಹಿಂಬದಿಯಲ್ಲೇ ಮನೆಯಾಗಿದ್ದರಿಂದ ಠಾಣೆ ಮುಂಭಾಗದ ಟೀ ಅಂಗಡಿಯಲ್ಲಿ ನಿಂತು ಪೊಲೀಸರ ಚಲನವಲನಗಳನ್ನು ಗಮನಿಸುತ್ತಿದ್ದ ಮತ್ತೊಂದು ಕಡೆ ಕಳ್ಳತನದ ಬಳಿಕ ಮಾನಸಿಕ ನೆಮ್ಮದಿ ಕಳೆದುಕೊಂಡು ಚಿಂತೆಗೀಡಾಗಿ ತೂಕ ಕಳೆದುಕೊಂಡಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net