

New Blood Group: ವಿಜ್ಞಾನ ಲೋಕದಲ್ಲಿ ಅಚ್ಚರಿಯ ವಿಷಯವೊಂದು ಹೊರಬಿದ್ದಿದೆ. ಕರ್ನಾಟಕದ ಕೋಲಾರ ಜಿಲ್ಲೆಯ ಮಹಿಳೆಯಲ್ಲಿ ಈ ಹಿಂದೆ ಎಲ್ಲೂ ಗುರುತಿಸಲಾಗದ ಹೊಸ ರಕ್ತದ ಗುಂಪು ಪತ್ತೆಯಾಗಿರುವುದಾಗಿ ತಿಳಿದು ಬಂದಿದೆ. 38 ವರ್ಷದ ಮಹಿಳೆಯೊಬ್ಬರು ಹೃದಯ ಶಸ್ತ್ರಚಿಕಿತ್ಸೆಗೆ ಕೋಲಾರದ ಆಸ್ಪತ್ರೆಯಲ್ಲಿ ದಾಖಲಾಗಿದ್ದಾಗ ಈ ಪ್ರಕರಣ ಬೆಳಕಿಗೆ ಬಂದಿದೆ.
ಅವರ ರಕ್ತದ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಿದ ಬಳಿಕ ವೈದ್ಯರೇ ಅಚ್ಚರಿಗೆ ಒಳಗಾಗಿದ್ದಾರೆ. ಮಹಿಳೆಯ ರಕ್ತದ ಗುಂಪು ಸಾಮಾನ್ಯವಾಗಿ ಎಲ್ಲರಲ್ಲೂ ಕಂಡುಬರುವ O Rh+ ಆಗಿತ್ತು. ಆದರೆ ವಿಶೇಷವೆಂದರೆ, ಲಭ್ಯವಿರುವ ಯಾವುದೇ O+ ರಕ್ತ ಅವರ ರಕ್ತಕ್ಕೆ ಹೊಂದಾಣಿಕೆಯಾಗುತ್ತಿರಲಿಲ್ಲ. ಹೀಗಾಗಿ ಹೆಚ್ಚಿನ ಪರೀಕ್ಷೆಗಾಗಿ ಅವರ ರಕ್ತದ ಮಾದರಿಯನ್ನು ರೋಟರಿ ಬೆಂಗಳೂರು ಟಿಟಿಕೆ ಬ್ಲಡ್ ಸೆಂಟರ್ನಲ್ಲಿರುವ ಅಡ್ವಾನ್ಸ್ಡ್ ಇಮ್ಯುನೊಹೆಮಟಾಲಜಿ ರೆಫರೆನ್ಸ್ ಲ್ಯಾಬೋರೇಟರಿಗೆ ಗಮನಕ್ಕೆ ತರಲಾಗಿದೆ.
ನಮ್ಮ ತಂಡವು ಸುಧಾರಿತ ಸೆರೋಲಾಜಿಕಲ್ ತಂತ್ರಗಳನ್ನು ಬಳಸಿಕೊಂಡು, ಅವರ ರಕ್ತವು ಪ್ಯಾನ್ರಿಯಾಕ್ಟಿವ್' ಆಗಿದ್ದು, ಎಲ್ಲಾ ಪರೀಕ್ಷಾ ಮಾದರಿಗಳೊಂದಿಗೆ ಹೊಂದಿಕೆಯಾಗುವುದಿಲ್ಲ ಎಂದು ಕಂಡುಹಿಡಿದಿದೆ. ಇದು ಅಪರೂಪದ ರಕ್ತದ ಪ್ರಕಾರವೆಂದು ಗುರುತಿಸಿ, ನಮ್ಮ ತಂಡವು ರಕ್ತದ ಹೊಂದಾಣಿಕೆಯನ್ನು ಹುಡುಕಲು ಅವರ ಕುಟುಂಬದ 20 ಸದಸ್ಯರಿಂದ ರಕ್ತದ ಮಾದರಿಗಳನ್ನು ಸಂಗ್ರಹಿಸಿತು. ಆದರೆ ಅವುಗಳಲ್ಲಿ ಯಾವುದೂ ಹೊಂದಿಕೆಯಾಗಲಿಲ್ಲ. ಹಾಗಾಗಿ ಈ ಪ್ರಕರಣವನ್ನು ಅತ್ಯಂತ ಎಚ್ಚರಿಕೆಯಿಂದ ನಿರ್ವಹಿಸಲಾಯಿತು ಮತ್ತು ಅವರ ವೈದ್ಯರು, ಕುಟುಂಬದವರ ಸಹಯೋಗದ ಪ್ರಯತ್ನದಿಂದ, ರಕ್ತ ವರ್ಗಾವಣೆಯ ಅಗತ್ಯವಿಲ್ಲದೆ ಅವರ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಯಿತು ಎಂದು ರೋಟರಿ ಬೆಂಗಳೂರು ಟಿಟಿಕೆ ರಕ್ತ ಕೇಂದ್ರದ ಡಾ. ಅಂಕಿತ್ ಮಾಥುರ್ ಹೇಳಿದರು.
ಅವರ ಮತ್ತು ಅವರ ಕುಟುಂಬದ ರಕ್ತದ ಮಾದರಿಗಳನ್ನು ಯುಕೆಯ ಬ್ರಿಸ್ಟಲ್‌ನಲ್ಲಿರುವ ಅಂತರರಾಷ್ಟ್ರೀಯ ರಕ್ತ ಗುಂಪು ಉಲ್ಲೇಖ ಪ್ರಯೋಗಾಲಯಕ್ಕೆ (ಐಬಿಜಿಆರ್‌ಎಲ್) ಕಳುಹಿಸಲಾಗಿದೆ. ಹತ್ತು ತಿಂಗಳ ವ್ಯಾಪಕ ಸಂಶೋಧನೆ ಮತ್ತು ಆಣ್ವಿಕ ಪರೀಕ್ಷೆಯ ಪರಿಣಾಮವಾಗಿ ಹಿಂದೆ ತಿಳಿದಿಲ್ಲದ ರಕ್ತದ ಗುಂಪನ್ನು ಕಂಡುಹಿಡಿಯಲಾಯಿತು ಎಂದು ಡಾ. ಮಾಥುರ್ ಹೇಳಿದರು. CRIB ರಕ್ತ ಪ್ರತಿಜನಕದೊಂದಿಗೆ ಗುರುತಿಸಲ್ಪಟ್ಟ ವಿಶ್ವದ ಮೊದಲ ವ್ಯಕ್ತಿ ಎಂದು ಕೋಲಾರದ ಮಹಿಳೆಯನ್ನು ಗುರುತಿಸಲಾಗುತ್ತದೆ ಎಂದು ಡಾ. ಮಾಥುರ್ ಹೇಳಿದ್ದಾರೆ.
(ಏಜೆನ್ಸೀಸ್)
ಇದು ಕ್ರೋಮರ್ (CR) ರಕ್ತದ ಗುಂಪಿನ ಭಾಗವಾಗಿದ್ದು, ಇದರ ಮೂಲವನ್ನು ಗುರುತಿಸಿ ಇದೀಗ ಅಧಿಕೃತವಾಗಿ CRIB ಎಂದು ಹೆಸರಿಸಲಾಗಿದೆ. CR ಎಂದರೆ ‘ಕ್ರೋಮರ್’ ಎಂಬರ್ಥ, ‘IB’ ಇಂಡಿಯಾ ಮತ್ತು ಬೆಂಗಳೂರು ಎಂಬುದನ್ನು ಸೂಚಿಸುತ್ತದೆ. 2025 ರ ಜೂನ್ನಲ್ಲಿ ಇಟಲಿಯ ಮಿಲನ್‌ನಲ್ಲಿ ನಡೆದ ಅಂತರರಾಷ್ಟ್ರೀಯ ರಕ್ತ ವರ್ಗಾವಣೆ ಸೊಸೈಟಿ (ISBT) ಯ 35 ನೇ ಪ್ರಾದೇಶಿಕ ಕಾಂಗ್ರೆಸ್‌ನಲ್ಲಿ CRIB ಎಂಬ ಈ ಹೆಸರನ್ನು ಘೋಷಣೆ ಹೊರಡಿಸಲಾಗಿದೆ.