

Tsunami: ರಷ್ಯಾದಲ್ಲಿ ಸಂಭವಿಸಿದ ಭಾರಿ ಭೂಕಂಪದ ಬೆನ್ನಲ್ಲೇ ಚೀನಾದ ಪೂರ್ವ ಕರಾವಳಿಯಲ್ಲಿ ಚಂಡಮಾರುತ(ಟೈಫೂನ್) ಅತಂಕ ಶುರುವಾಗಿದೆ. ಅಲ್ಲದೆ, ಪೆಸಿಫಿಕ್ ಸಾಗರದಾದ್ಯಂತ ಸುನಾಮಿ ಎಚ್ಚರಿಕೆಯನ್ನು ಕೂಡ ನೀಡಿದ್ದು, ಇದೀಗ ಚೀನಾಕ್ಕೆ ಎರೆಡೆರಡು ನೈಸರ್ಗಿಕ ವಿಕೋಪಗಳನ್ನು ಎದುರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.
ಚೈನಾದಲ್ಲಿ ಸ್ಥಳೀಯ ಭಾಷೆಯಲ್ಲಿ ಹೆಸರಾಗಿರುವ 'ಝು ಜೀ ಕಾವೊ' ಎಂದು ಕರೆಯಲ್ಪಡುವ ಟೈಫೂನ್ ಧಾರಾಕಾರ ಮಳೆ ಜತೆಗೆ ವೇಗವಾಗಿ ಗಾಳಿಯೂ ಬೀಸುತ್ತಿದೆ.ಈ ಹಿನ್ನೆಲೆ ಚೀನಾದ ಶಾಂಘೈ ಸುತ್ತಮುತ್ತಲಿನ ಪ್ರದೇಶಗಳಿಂದ ಸುಮಾರು 2,83,000 ಜನರನ್ನು ಸ್ಥಳಾಂತರಿಸಲಾಗಿದೆ ಎಂದು ವರದಿ ಉಲ್ಲೇಖಿಸಿವೆ.
ಬುಧವಾರ (ಜುಲೈ30) ಶಾಂಘೈ ನಗರದ ದಕ್ಷಿಣಕ್ಕೆ ಚಂಡಮಾರುತ ಅಪ್ಪಳಿಸುವ ಸಾಧ್ಯತೆ ಇದೆ. ಈ ಕಾರಣದಿಂದ 24 ಗಂಟೆಗಳಲ್ಲಿ 320 ಮಿಲಿಮೀಟರ್ ಮಳೆಯಾಗಬಹುದು ಎಂದು ವರದಿಗಳಾಗಿವೆ. ಚಂಡಮಾರುತದಿಂದ ಆಗುವ ಹಠಾತ್ ಪ್ರವಾಹ ಮತ್ತು ಭೂಕುಸಿತದ ಬಗ್ಗೆ ಕಳವಳವನ್ನು ವ್ಯಕ್ತಪಡಿಸಿದ್ದಾರೆ.
ಚಂಡಮಾರುತದಿಂದ ನಗರದಾದ್ಯಂತ ಸಾರಿಗೆ ವ್ಯವಸ್ಥೆಯನ್ನು ಅಸ್ತವ್ಯಸ್ತಗೊಳಿಸಿದ್ದು, ದೋಣಿ ಸೇವೆಗಳನ್ನು ಸಹ ಸ್ಥಗಿತಗೊಳಿಸಲಾಗಿದೆ. ಹೆದ್ದಾರಿ ವೇಗ ಮಿತಿಗಳನ್ನು ಕಡಿಮೆ ಮಾಡಲಾಗಿದೆ. ಪುಡಾಂಗ್ ಮತ್ತು ಹಾಂಗ್ಕಿಯಾವೊ ವಿಮಾನ ನಿಲ್ದಾಣಗಳ ಒಳಗೆ ಮತ್ತು ಹೊರಗೆ ಹೋಗುವ ಎಲ್ಲಾ ವಿಮಾನಗಳು ಸುಮಾರು 30% ರಷ್ಟು ರದ್ದಾಗಿದೆ ಎಂದು ತಿಳಿದು ಬಂದಿದೆ.
ಕೋ-ಮೇ ಚಂಡಮಾರುತ ವಿನಾಶಕಾರಿ ಹಾದಿಯನ್ನು ಫಿಲಿಪೈನ್ಸ್ ಮತ್ತು ಜಪಾನ್‌ನ ಒಕಿನಾವಾ ಮೂಲಕ ಬರುತ್ತಿದೆ. ಅಂದಹಾಗೆ, ರಷ್ಯಾದ ಕಮ್ಚಟ್ಕಾ ಪರ್ಯಾಯ ದ್ವೀಪದಲ್ಲಿ 1,80,000 ಜನಸಂಖ್ಯೆಯನ್ನು ಹೊಂದಿರುವ ರಷ್ಯಾದ ನಗರವಾದ ಪೆಟ್ರೋಪಾವ್ಲೋವ್ಸ್ಕ್-ಕಮ್ಚಟ್ಸ್ಕಿಯಿಂದ ಪೂರ್ವ-ಆಗ್ನೇಯಕ್ಕೆ ಸುಮಾರು 119 ಕಿಲೋಮೀಟರ್ (74 ಮೈಲುಗಳು) ದೂರದಲ್ಲಿ ಭೂಕಂಪದ ಕೇಂದ್ರಬಿಂದುವನ್ನು ಗುರುತಿಸಲಾಗಿದೆ. 8.8 ತೀವ್ರತೆಯಷ್ಟು ಬಲವಾದ ಕಂಪನಗಳು ದಾಖಲಾಗಿವೆ. ಅಲ್ಲದೆ, ಸರಣಿ ಕಂಪನಗಳ ವರದಿಯು ಕೂಡ ಆಗಿದೆ.(ಏಜೆನ್ಸೀಸ್)