

ಹೆಬ್ರಿ: ಕಾರ್ಕಳದ ಯುವತಿ ಅಪಹರಿಸಿ ಅತ್ಯಾಚಾರವೆಸಗಿದ ಪ್ರಕರಣವನ್ನು ರಾಜಕೀಯ ಲಾಭಕ್ಕೆ ಶಾಸಕರು ಬಳಸಿದ್ದಾರೆ. ಪೊಲೀಸರು ಬಂಧಿಸಿದ ಆರೋಪಿ ಬಿಜೆಪಿ ಪಕ್ಷದವನೇ ಆಗಿದ್ದು, ನಿಮ್ಮ ಕಟ್ಟಾ ಬೆಂಬಲಿಗ, ಈಗ ನೀವೇ ಹೇಳಿ ಡ್ರಗ್ಸ್ ಮಾಫಿಯಾದ ಹಿಂದೆ ಯಾರು ಇದ್ದಾರೆ ಎಂದು ಹೆಬ್ರಿ ಯುವ ಕಾಂಗ್ರೆಸ್ ಅಧ್ಯಕ್ಷ ದಿನೇಶ್ ಕುಮಾರ್ ಶೆಟ್ಟಿ ಹುತ್ತುರ್ಕೆ ಹೇಳಿದರು. ಅನ್ಯಾಯವಾದ ಯುವತಿಗೆ ನ್ಯಾಯ, ರಕ್ಷಣೆ ಸಿಗಬೇಕು.
ಆರೋಪಿಗಳು ಯಾರೇ ಆಗಲಿ, ಯಾವ ಧರ್ಮದವರೇ ಆಗಲಿ ಕಠಿಣ ಶಿಕ್ಷೆಯಾಗಬೇಕು. ಬಂಧಿಸಿರುವ 3ನೇ ಆರೋಪಿ ಶಾಸಕರ ಬೆಂಬಲಿಗ ಎಂದು ತಿಳಿದ ಮೇಲೆ ಶಾಸಕರು ಮೌನವಾಗಿದ್ದಾರೆ. ಪ್ರತಿ ಬಾರಿ ಜಾತಿ ಧರ್ಮ, ಕೋಮು ಭಾವನೆ ಕೆರಳಿಸಿ ಧ್ವೇಷದ ಭಾಷಣ ಮಾಡುತ್ತಿರುವ ನೀವು ಜನರನ್ನು ಎತ್ತಿಕಟ್ಟುತ್ತೀರಿ. ಮುಸ್ಲಿಂ ಮಿತ್ರನೊಂದಿಗೆ ಹುಟ್ಟು ಹಬ್ಬ ಆಚರಣೆ ಮಾಡಿ, ಹಿಂದುತ್ವ ನಿಮಗೆ ಚುನಾವಣೆಗೆ ಮಾತ್ರ. ಬಿಜೆಪಿ ಕಾರ್ಯಕರ್ತನಿಂದಲೇ ಈಗ ಯುವತಿಗೆ ಅನ್ಯಾಯವಾಗಿದೆ, ನಿಮ್ಮ ಕಾರ್ಯಕರ್ತನೇ ಡ್ರಗ್ಸ್ ಮಾಫಿಯಾದ ರೂವಾರಿ ಎಂಬುದು ಗೊತ್ತಾಗಿದ್ದು ಸುಮ್ಮನೆ ಇದ್ದೀರಿ ಎಂದು ಕಾರ್ಕಳ ಶಾಸಕರನ್ನು ಪತ್ರಿಕಾ ಹೇಳಿಕೆಯಲ್ಲಿ ಪ್ರಶ್ನಿಸಿದ್ದಾರೆ.