'ಗೇಮ್​ ಚೇಂಜರ್​' ಆದ ರಾಮ್​ಚರಣ್​ ತೇಜ; ಸಂಕ್ರಾಂತಿಗೆ ಚಿತ್ರ ಬಿಡುಗಡೆ ಸಾಧ್ಯತೆ

Game Changer - Ramcharan Teja
Published on

ಹೈದರಾಬಾದ್: ತಮಿಳಿನ ಖ್ಯಾತ ನಿರ್ದೇಶಕ ಶಂಕರ್​ ನಿರ್ದೇಶನದ ಚಿತ್ರದಲ್ಲಿ ರಾಮ್​ಚರಣ್​ ತೇಜ ನಟಿಸುತ್ತಿರುವ ವಿಷಯ ಗೊತ್ತಿರಬಹುದು. ಈ ಚಿತ್ರದ ಚಿತ್ರೀಕರಣ ಕಳೆದ ವರ್ಷವೇ ಪ್ರಾರಂಭವಾಗಿ, ಇದೀಗ ಮುಕ್ತಾಯದ ಹಂತಕ್ಕೆ ಬಂದಿದೆ. ಆದರೆ, ಚಿತ್ರತಂಡ ಮಾತ್ರ ಇದುವರೆಗೂ ಹೆಸರನ್ನು ಬಹಿರಂಗಪಡಿಸಿರಲಿಲ್ಲ. ಇಂದು (ಮಾ 27) ರಾಮ್​ಚರಣ್​ ತೇಜ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಕೊನೆಗೂ ಚಿತ್ರದ ಹೆಸರನ್ನು ಬಹಿರಂಗಪಡಿಸಲಾಗಿದೆ. ಅಂದಹಾಗೆ, ಚಿತ್ರದ ಹೆಸರೇನು ಗೊತ್ತಾ? 'ಗೇಮ್​ ಚೇಂಜರ್​'.

ಸೋಮವಾರ, ಚಿತ್ರತಂಡದವರು ಸೋಷಿಯಲ್​ ಮೀಡಿಯಾದಲ್ಲಿ ಚಿತ್ರದ ಪೋಸ್ಟರ್​ ಹಂಚಿಕೊಳ್ಳುವ ಮೂಲಕ ರಾಮ್​ಚರಣ್​ ತೇಜಗೆ ಶುಭ ಕೋರಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ರಾಮ್​ಚರಣ್​ ತೇಜ, ಇದಕ್ಕಿಂತ ಇನ್ನೊಂದು ಅದ್ಭುತ ಗಿಫ್ಟ್​ ನಿರೀಕ್ಷಿಸುವುದಕ್ಕೆ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

'ಗೇಮ್​ ಚೇಂಜರ್​' ಒಂದು ಪ್ಯಾನ್​ ಇಂಡಿಯಾ ಚಿತ್ರವಾಗಿದ್ದು, ತೆಲುಗಿನಲ್ಲಿ ನಿರ್ಮಾಣವಾಗಿ ಕನ್ನಡ, ತಮಿಳು, ಮಲಯಾಳಂ ಮತ್ತು ಹಿಂದಿಗೆ ಡಬ್​ ಆಗಿ ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ರಾಮ್​ಚರಣ್​ ತೇಜಗೆ ನಾಯಕಿಯಾಗಿ ಬಾಲಿವುಡ್​ ನಟಿ ಕಿಯಾರಾ ಅಡ್ವಾಣಿ ನಟಿಸುತ್ತಿದ್ದು, ಜಯರಾಂ, ಅಂಜಲಿ, ಸುನೀಲ್​, ಶ್ರೀಕಾಂತ್​ ಮುಂತಾದವರು ಅಭಿನಯಿಸುತ್ತಿದ್ದಾರೆ.

ತೆಲುಗಿನ ಖ್ಯಾತ ನಿರ್ಮಾಪಕ ದಿಲ್​ ರಾಜು ನಿರ್ಮಾಣ 50ನೇ ಚಿತ್ರ ಇದಾಗಿದ್ದು, ದೊಡ್ಡ ಬಜೆಟ್​ನಲ್ಲಿ ನಿರ್ಮಾಣವಾಗುತ್ತಿದೆ. ಎಸ್​.ಎಸ್​. ಥಮನ್​ ಅವರ ಸಂಗೀತ, ತಿರು ಅವರ ಛಾಯಾಗ್ರಹಣವಿರುವ ಈ ಚಿತ್ರವು ಮುಂದಿನ ವರ್ಷ ಸಂಕ್ರಾಂತಿಗೆ ಬಿಡುಗಡೆಯಾಗುವ ಸಾಧ್ಯತೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net