ಇಂಗ್ಲಿಷ್ ಮೋಹ.. ಟ್ರೋಲ್​ ಆದ ಮೋಹಕತಾರೆ; ವೀಕೆಂಡ್ ವಿದ್ ರಮೇಶ್ ಶೋನಲ್ಲಿನ ರಮ್ಯಾ ನಡೆಗೆ ಕಿಡಿಕಾರಿದ ಕನ್ನಡಿಗರು

Ramya
Published on

ಬೆಂಗಳೂರು: ವೀಕೆಂಡ್ ವಿದ್ ರಮೇಶ್ ಶೋನ ಸೀಸನ್-5ರ ಮೊದಲ ಅತಿಥಿಯಾಗಿ ಆಗಮಿಸಿದ್ದ ನಟಿ ರಮ್ಯಾ, ಮೆಚ್ಚುಗೆಗೆ ಪಾತ್ರವಾಗಿದ್ದಕ್ಕಿಂತ ಟ್ರೋಲ್​ಗೆ ಒಳಗಾಗಿದ್ದೇ ಹೆಚ್ಚು. ಅದರಲ್ಲೂ ಆಕೆಯ ವಿರುದ್ಧ ಕನ್ನಡಿಗರು ಕಿಡಿಕಾರಿದ್ದೂ ಕಂಡುಬಂದಿದೆ.

ಮೋಹಕತಾರೆ ಎಂದು ಕರೆಯಲಾಗುವ, ಮಾಜಿ ಸಂಸದೆಯೂ ಆಗಿರುವ ನಟಿ ರಮ್ಯಾ ಇಂಗ್ಲಿಷ್​ ಮೋಹದಿಂದಾಗಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಕನ್ನಡ ವಾಹಿನಿಯ ಕನ್ನಡದ ಶೋನಲ್ಲೇ ರಮ್ಯಾ ಅದ್ಯಾಕೆ ಅಷ್ಟೊಂದು ಇಂಗ್ಲಿಷ್​ ಮಾತನಾಡಿದರು ಎಂದು ಹಲವರು ಅಸಮಾಧಾನ ವ್ಯಕ್ತಪಡಿಸಿದ್ದರೆ, ಇನ್ನು ಕೆಲವರು ತೀಕ್ಷ್ಣವಾಗಿಯೇ ಟೀಕಿಸಿದ್ದಾರೆ.

ಇಡೀ ಶೋನಲ್ಲಿ ರಮ್ಯಾ ಕನ್ನಡಕ್ಕಿಂತ ಇಂಗ್ಲಿಷ್​ ಬಳಸಿದ್ದೇ ಹೆಚ್ಚು ಎಂಬುದೇ ವೀಕ್ಷಕರ ತಕರಾರು. ಹೀಗಾಗಿ ಕನ್ನಡಿಗರು ಒಂದೆಡೆ ಅವರ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿ ಪೋಸ್ಟ್ ಮಾಡಿಕೊಂಡರೆ, ರಾಜಕೀಯ ಕಾರಣಕ್ಕೆ ಇತರ ಪಕ್ಷಗಳ ಕಾರ್ಯಕರ್ತರೂ ಇದೇ ವಿಚಾರವನ್ನು ನೆಪವಾಗಿಸಿಕೊಂಡು ರಮ್ಯಾ ವಿರುದ್ಧ ಹರಿಹಾಯ್ದಂಥ ಪೋಸ್ಟ್​ಗಳೂ ಕಂಡುಬಂದಿವೆ.

ವೀಕೆಂಡ್ ವಿದ್ ರಮೇಶ್ ಶೋ ನೋಡಲು ಕುಳಿತ ಕನ್ನಡಿಗರಿಗೆ ರಮ್ಯಾ ಅತಿಯಾಗಿ ಆಡಿದ ಇಂಗ್ಲಿಷ್ ಮಾತುಗಳು ಕಿರಿಕಿರಿ ಉಂಟುಮಾಡಿವೆ. ಕನ್ನಡದ ಕಾರ್ಯಕ್ರಮವಾದರೂ ಆಕೆ ಅಲ್ಲಿ ಕನ್ನಡಕ್ಕೆ ಆದ್ಯತೆ ನೀಡದ್ದರಿಂದ ಅದು ಯಾವುದೋ ಕಂಗ್ಲಿಷ್​ ಕಾರ್ಯಕ್ರಮದಂತೆ ಅನಿಸಿತು ಎಂದೂ ಜನರು ಆಡಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net