ರಾಮನಗರ: ಕರ್ನಾಟಕ ಸಾರ್ವತ್ರಿಕ ವಿಧಾನಸಭೆ ಚುನಾವಣೆ 2023ರ ಹಿನ್ನೆಲೆಯಲ್ಲಿ ಮತದಾರರಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸುವ ದೃಷ್ಠಿಯಿಂದ ನಗರದ ಎಂ. ಎಚ್. ಸಮೂಹ ಶಿಕ್ಷಣ ಸಂಸ್ಥೆಯ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಜಾಗೃತಿ ಜಾಥಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.
ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಎಚ್. ಚಂದ್ರಶೇಖರ್, ಪ್ರತಿಯೊಬ್ಬರು ಮತದಾನದಿಂದ ಹೊರಗುಳಿಯಬಾರದೆಂಬ ಉದ್ದೇಶದಿಂದ ಹಾಗೂ ಎಲ್ಲಾ ಮತದಾರರು ಕಡ್ಡಾಯವಾಗಿ ಮತದಾನ ಮಾಡುವಂತೆ ನಾಗರೀಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.
ಕಾಲೇಜಿನ ಆವರಣದಿಂದ ಪ್ರಾರಂಭವಾದ ಜಾಥ ರಾಯರದೊಡ್ಡಿ ವೃತ್ತದ ಮೂಲಕ ಕೆಂಪೇಗೌಡ ವೃತ್ತದ ಮಾರ್ಗವಾಗಿ ರಾಮನಗರ ಸಿಗ್ನಲ್‌ನಲ್ಲಿ ಸಾಗಿ ನಂತರ ಬೆಂಗಳೂರು-ಮೈಸೂರು ಹೆದ್ದಾರಿಯ ಮೂಲಕ ಮತ್ತೆ ಕಾಲೇಜು ತಲುಪಿತು. ಜಾಥಾದಲ್ಲಿ ನಿಮ್ಮ ಮತ ನಿಮ್ಮ ಹಕ್ಕು, ಜಾಗೃತ ಮತದಾರ ಸದೃಢ ಪ್ರಜಾಪ್ರಭುತ್ವ, ನಿಮ್ಮ ಮತ ಗೌಪ್ಯವಾಗಿರಲ್ಲಿ, ಮತದಾನ ಪ್ರತಿಯೊಬ್ಬರ ಹಕ್ಕು ಮತ್ತು ಕರ್ತವ್ಯ, ಮುಕ್ತ ನ್ಯಾಯಸಮ್ಮತ ಹಾಗೂ ಶಾಂತಿಯುತ ಚುನಾವಣೆಗೆ ಸಹಕರಿಸಿ ಚುನಾವಣೆ ಪ್ರಜಾಪ್ರಭುತ್ವದ ಭದ್ರಬುನಾದಿ ಎಂಬ ಘೋಷಣೆಗಳು ಅಭಿಯಾನದಲ್ಲಿ ಮೊಳಗಿದವು.
ಜಾಥಾ ಕಾರ್ಯಕ್ರಮದಲ್ಲಿ ಎಸ್.ಜಿ.ಎಂ.ಪಿ ಯು ಕಾಲೇಜಿನ ಪ್ರಾಂಶುಪಾಲ . ವೈ.ವಿ ವಿನೋದ ಕುಮಾರ್ ಹಾಗೂ ಸಿಬ್ಬಂದಿ ಇದ್ದರು.